ಸಿನಿವಾಣಿ

ಕಾಲಿವುಡ್​ನಿಂದ ಬಂದರು, ಕನ್ನಡದ ಹುಡುಗಿ! "ರಿಪ್ಪನ್​ ಸ್ವಾಮಿ' ಮೂಲಕ ಸ್ಯಾಂಡಲ್​ವುಡ್​ಗೆ ಅಶ್ವಿನಿ ಚಂದ್ರಶೇಖರ್​ ರಿ-ಎಂಟ್ರಿ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಕನ್ನಡದಲ್ಲಿ ಕರಿಯರ್​ ಪ್ರಾರಂಭಿಸಿ, ಸದ್ಯ ಪರಭಾಷೆಗಳಲ್ಲಿ ಸೆಟಲ್​ ಆಗಿರುವ ನಟ, ನಟಿಯರ ಸಾಲೇ ಇದೆ. ಕೆಲವರು ಮತ್ತೆ ಕನ್ನಡದಲ್ಲಿ ಕಮ್​ಬ್ಯಾಕ್​ ಮಾಡಿದ್ದರೂ, ಕೆಲವರು ಮತ್ತೆ ಇತ್ತ ಸುಳಿದಿಲ್ಲ. ಇದೀಗ ಸ್ಯಾಂಡಲ್​ವುಡ್​ನಲ್ಲಿ ಸಿನಿಮಾ ಪಯಣ ಆರಂಭಿಸಿ, ಕೆಲ ವರ್ಷಗಳಿಂದ ಪರಭಾಷೆಗಳಲ್ಲಿ ಬಿಜಿಯಾಗಿದ್ದ ನಟಿ ಅಶ್ವಿನಿ ಚಂದ್ರಶೇಖರ್​, ಇದೀಗ "ರಿಪ್ಪನ್​ ಸ್ವಾಮಿ' ಚಿತ್ರದ ಮೂಲಕ ಕನ್ನಡಕ್ಕೆ ರಿ&ಎಂಟ್ರಿ ಕೊಟ್ಟಿದ್ದಾರೆ. ಕಿಶೋರ್​ ಮೂಡಬಿದ್ರಿ ನಿರ್ದೇಶನದ ಈ ಚಿತ್ರದಲ್ಲಿ ಅವರು ವಿಜಯ್​ ರಾವೇಂದ್ರಗೆ ಜೋಡಿಯಾಗಿದ್ದಾರೆ. ಸಿನಿಮಾ ಇಂದು ತೆರೆಗೆ ಬರುತ್ತಿದ್ದು, ಇದೇ ಖುಷಿಯಲ್ಲಿ ವಿಜಯವಾಣಿ ಜತೆ ಅಶ್ವಿನಿ ಮಾತಿಗೆ ಸಿಕ್ಕಿದ್ದರು.

ಮತ್ತೆ ಕನ್ನಡದಲ್ಲಿ ನಟಿಸಿದ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು, "ನಾನು ನಾನು ಮಲೆನಾಡ ಹುಡುಗಿ. ಮೊದಲ ವರ್ಷದ ಡಿಗ್ರೀ ಓದುವಾಗ ಮಿಸ್​ ಕರ್ನಾಟಕ ಗೆದ್ದ ಬಳಿಕ ಚೆನ್ನೈನಲ್ಲಿ ನಡೆದ ಮಿಸ್​ ಸೌತ್​ ಇಂಡಿಯಾ ಕೂಡ ಗೆದ್ದಿದ್ದೆ. ಆಗಲೇ ತಮಿಳಿನಲ್ಲಿ ಹಲವು ಆರ್ಸ್​ ಬಂದಿದ್ದವು. ಆದರೆ, ನಟಿಸಿರಲಿಲ್ಲ. ಕನ್ನಡದಲ್ಲಿ "ಪ್ರೇಮ ಪಲ್ಲಕ್ಕಿ', "ಆಕ್ಟೋಪಸ್​', "ಒಂದು ರೊಮ್ಯಾಂಟಿಕ್​ ಕೆಮ್​ ಕಥೆ' ಸೇರಿ ಕೆಲ ಸಿನಿಮಾಗಳಲ್ಲಿ ನಟಿಸಿದೆ. ಆದರೆ, ಕ್ರಮೇಣ ತಮಿಳು, ಮಲಯಾಳಂ, ತೆಲುಗಿನಲ್ಲೂ ಆರ್ಸ್​ ಬಂದು, ಪರಭಾಷೆಗಳಲ್ಲಿ ಹೆಚ್ಚು ಬಿಜಿಯಾದೆ. ಇದೀಗ 10 ವರ್ಷಗಳ ಬಳಿಕ "ರಿಪ್ಪನ್​ ಸ್ವಾಮಿ'ಯಂತಹ ಕಂಟೆಂಟ್​ ಪ್ರಧಾನ ಚಿತ್ರದ ಮೂಲಕ ಮತ್ತೆ ಕನ್ನಡಕ್ಕೆ ವಾಪಸ್ಸಾಗಿರುವುದು ಖುಷಿ ನೀಡಿದೆ. ಕಥೆ ಎಲ್ಲರಿಗೂ ಒಂದಲ್ಲಾ ಒಂದು ರೀತಿ ಕನೆಕ್ಟ್​ ಆಗುತ್ತದೆ' ಎಂದು ಸಂತಸ ಹಂಚಿಕೊಳ್ಳುತ್ತಾರೆ.

ಡಾಕ್ಟರ್​ ಪಾತ್ರದಲ್ಲಿ ಆ್ಯಕ್ಟರ್​

"ರಿಪ್ಪನ್​ ಸ್ವಾಮಿ'ಯಲ್ಲಿ ಅಶ್ವಿನಿ ಮಂಗಳ ಎಂಬ ವೈದ್ಯೆಯ ಪಾತ್ರದಲ್ಲಿ ನಟಿಸಿದ್ದು, "ಸಿನಿಮಾ ನೋಡಿ ಹೊರಬಂದ ಬಳಿಕವೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವಂತಹ ಪಾತ್ರವಿದು. ಡಾಕ್ಟರ್​ ಓದಿದ್ದರೂ ಕಟುಕ, ರಾಕ್ಷಸನನ್ನು ಮದುವೆಯಾಗಿ, ಸಂಸಾರದಲ್ಲಿ ಹೋರಾಟ ನಡೆಸುವ ಮೃದು ಯುವತಿ ಕ್ರಮೇಣ ಹೇಗೆ ಬದಲಾಗುತ್ತಾಳೆ ಎಂಬುದು ಕಥೆ. ಮದುವೆಯ ಬಳಿಕ ಗಂಡನ ಜತೆ ಇರಲೂ ಆಗದೇ, ಆ ಸಂಬಂಧದಿಂದ ಹೊರಗೆ ಬರಲೂ ಆಗದೇ ಒದ್ದಾಡುವ ಹಲವು ಹೆಣ್ಣುಮಕ್ಕಳಿದ್ದಾರೆ. ಉಸಿರು ಕಟ್ಟುವಂತಹ ಪರಿಸ್ಥಿತಿಯನ್ನು ಎದುರಿಸುವ ಪಾತ್ರ. ನಾಯಕನಿಗೆ ಎಷ್ಟು ಪ್ರಾಮುಖ್ಯವಿದೆಯೋ, ನಾಯಕಿಗೂ ಅಷ್ಟೇ ಪ್ರಾಮುಖ್ಯವಿದೆ. ನಾನು ಕಲಾವಿದೆ ಆಗಿರದಿದ್ದರೆ, ಡಾಕ್ಟರ್​ ಆಗಬೇಕು ಅಂತಿದ್ದೆ. ಇದೀಗ ವೈದ್ಯಳ ಪಾತ್ರದಲ್ಲಿ ನಟಿಸಿ ಆ ಆಸೆ ಈಡೇರಿಸಿಕೊಂಡಿದ್ದೇನೆ' ಎನ್ನುತ್ತಾರೆ ಅಶ್ವಿನಿ.

ಮುಂದಿನ ಚಿತ್ರಗಳು

ಈಗಾಗಲೇ ನಾಲ್ಕು ಭಾಷೆಗಳಲ್ಲಿ 15ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅಶ್ವಿನಿ ಚಂದ್ರಶೇಖರ್​, ಸದ್ಯ "ರಿಪ್ಪನ್​ ಸ್ವಾಮಿ' ರಿಲೀಸ್​ಗೆ ಎದುರು ನೋಡುತ್ತಿದ್ದಾರೆ. ಆ ಬಳಿಕ ಕನ್ನಡದಲ್ಲೇ ಹೆಚ್ಚು ಅವಕಾಶಗಳು ಬರುವ ನಿರೀೆ ಅವರದು. ಜತೆಗೆ ಅವರು ನಟಿಸಿರುವ "ಜೀವಿ 2', "ಮರಕದ ಕಾಡು' ಸೇರಿ ತಮಿಳಿನ ಮೂರು ಹಾಗೂ ಕನ್ನಡದ "ಓಮ್ನಿ' ಚಿತ್ರಗಳು ರಿಲೀಸ್​ ಆಗಬೇಕಿದೆ.