ಬೆಂಗಳೂರು: ‘ಪುರುಷೋತ್ತಮ’ ಮತ್ತು ‘ಪೆಂಟಗನ್’ ಚಿತ್ರಗಳಲ್ಲಿ ನಟಿಸಿರುವ ‘ಅಪೂರ್ವ’ ಖ್ಯಾತಿಯ ಅಪೂರ್ವ ಸದ್ದಿಲ್ಲದೆ ನಿರ್ದೇಶಕಿಯಾಗಿದ್ದಾರೆ. ಅವರೊಂದು ಚಿತ್ರವನ್ನು ನಿರ್ದೇಶಿಸಿದ್ದು, ಆ ಚಿತ್ರ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೂ ಆಯ್ಕೆಯಾಗಿ, ಪ್ರದರ್ಶನ ಕಾಣುತ್ತಿದೆ. ಆ ಚಿತ್ರದ ಹೆಸರು ‘ಓ ನನ್ನ ಚೇತನ’. ‘ಸ್ಮಾರ್ಟ್ ಫೋನ್ ಜೀವನ’ ಎಂಬ ಅಡಿಬರಹವೂ ಈ ಚಿತ್ರಕ್ಕಿದ್ದು, ಮಕ್ಕಳ ಸಿನಿಮಾ ಇದಾಗಿದೆ.
ಮಕ್ಕಳ ಮೇಲೆ ಸ್ಮಾರ್ಟ್ಫೋನ್ಗಳು ಹೇಗೆ ಪ್ರಭಾವ ಬೀರುತ್ತಿವೆ ಎಂಬ ವಿಷಯವನ್ನಿಟ್ಟುಕೊಂಡು ಅಪೂರ್ವ ಈ ಚಿತ್ರ ಮಾಡಿದ್ದಾರೆ. ಈ ಪ್ರಯತ್ನದ ಬಗ್ಗೆ ಮಾಹಿತಿ ನೀಡುವ ಅವರು, ‘ಆರಂಭದಿಂದಲೂ ನಟನೆ ಜತೆಗೆ ನಿರ್ದೇಶನದ ಕಡೆ ಒಲವಿತ್ತು. ಆದರೆ, ಅದು ಇಷ್ಟೊಂದು ಸವಾಲಿನ ಕೆಲಸ ಎಂದು ನಾನಂದುಕೊಂಡಿರಲಿಲ್ಲ. ‘ಅಪೂರ್ವ’ ಚಿತ್ರದ ವೇಳೆ ನಿರ್ದೇಶನದ ಆಸೆ ಹೇಳಿಕೊಂಡಿದ್ದೆ. ‘ವಿಕ್ಟರಿ 2’ ಚಿತ್ರದಲ್ಲಿಯೂ ಮತ್ತಷ್ಟು ಕಲಿಯಲು ಸಿಕ್ಕಿತು. ಈಗ ಎಲ್ಲರ ಸಹಕಾರದಿಂದ ನಿರ್ದೇಶನ ಮಾಡಿದ್ದೇನೆ’ ಎನ್ನುತ್ತಾರೆ.
ಮಿಕ್ಕಂತೆ ಇತ್ತೀಚೆಗಷ್ಟೇ ಬಂದ ‘ಬೈಟು ಲವ್’ ಸಿನಿಮಾ ನಿರ್ದೇಶಿಸಿದ್ದ ಹರಿಸಂತೋಷ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಮಾಸ್ಟರ್ ಪ್ರತೀಕ್, ಬೇಬಿ ಡಿಂಪನಾ, ಮಾಸ್ಟರ್ ಶೌರ್ಯ ಮುಂತಾದವರು ನಟಿಸಿರುವ ಈ ಚಿತ್ರವನ್ನು ಎಸ್ ಆಂಡ್ ಎಸ್ ಎಂಟರ್ಪ್ರೖೆಸಸ್ ಬ್ಯಾನರ್ನಲ್ಲಿ ನಿರ್ಮಾಣ ಮಾಡಲಾಗಿದೆ.