ಸಿನಿವಾಣಿ

ಹತ್ತಾಗಿದೆ, ಹತ್ತುವುದಿನ್ನೂ ಬಾಕಿಯಿದೆ; ಜನವರಿಯಲ್ಲಿ ನಟಿ ಅಪೂರ್ವ ಭಾರದ್ವಾಜ್​ ಡಬಲ್​ ಧಮಾಕಾ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

"ಅನುರೂಪ' ಧಾರಾವಾಹಿಯ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದವರು ನಟಿ ಅಪೂರ್ವ ಭಾರದ್ವಾಜ್​. ನಂತರ "ಚಕ್ರವ್ಯೂಹ', "ಗಿರಿಜಾ ಕಲ್ಯಾಣ', "ವಾರಸ್ದಾರ', "ಸತ್ಯಂ ಶಿವಂ ಸುಂದರಂ' ಸೀರಿಯಲ್​ಗಳಲ್ಲಿ ಮಿಂಚಿದ್ದರು. ಬಳಿಕ ಸಣ್ಣ ಬ್ರೇಕ್​ ಪಡೆದು ಸಿನಿಮಾಗಳತ್ತ ಚಿತ್ತ ಹರಿಸಿದ ಅವರು, "ಮಿರ್ಚಿ ಮಂಡಕ್ಕಿ ಖಡಕ್​ ಚಾಯ್​', "ಡಬಲ್​ ಧಮಾಕಾ', "ಉಪ್ಪಿನ ಕಾಗದ', "ನೋಡಿ ಸ್ವಾಮಿ ನಾವಿರೋದು ಹೀಗೇ', "ನಾನು, ಅದು ಮತ್ತು ಸರೋಜ' ಸೇರಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಬಣ್ಣದ ಲೋಕಕ್ಕೆ ಬಂದು ದಶಕದ ಸಂಭ್ರಮದಲ್ಲಿರುವ ಅಪೂರ್ವ, ಅದೇ ಖುಷಿಯಲ್ಲಿ ವಿಜಯವಾಣಿ ಜತೆ ಇದುವರೆಗಿನ ಪಯಣ, ಮುಂದಿನ ಯೋಜನೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಮುಂದಿನ ತಿಂಗಳು ಎರಡು ಚಿತ್ರಗಳು

ಅಪೂರ್ವ ನಟಿಸಿರುವ ಎರಡು ಚಿತ್ರಗಳು ಹೊಸ ವರ್ಷದ ಮೊದಲ ತಿಂಗಳೇ ತೆರೆಗೆ ಬರಲು ರೆಡಿಯಾಗಿವೆ. "ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು' ಜ. 10ರಂದು ರಿಲೀಸ್​ ಆಗಲಿದ್ದು, ನವೀನ್​ ಶಂಕರ್​ ಜತೆ ನಟಿಸಿರುವ "ನೋಡಿದವರು ಏನಂತಾರೆ?' ಜ. 31ರಂದು ಬಿಡುಗಡೆಯಾಗಲಿದೆ. ""...ನೀವೇ ಜವಾಬ್ದಾರರು' ತುಂಬ ಮಜವಾಗಿದೆ ಮೂಡಿಬಂದಿದೆ. ನನ್ನದು ಲೈವ್ಲಿ ಪಾತ್ರ. ಯೋಚಿಸದೇ ಹಠಾತ್​ ನಿರ್ಧಾರ ತೆಗೆದುಕೊಳ್ಳುವ, ಏನಂದುಕೊಳ್ಳುತ್ತಾಳೋ ಅದನ್ನು ಮಾಡುವ ಪಾತ್ರ. ಇನ್ನು "ನೋಡಿದವರು ಏನಂತಾರೆ' ಟ್ರಾವಲ್​ ಸಿನಿಮಾ. ತುಂಬ ಬೇಸರವಾದಾಗ ನಾಯಕ ಎಲ್ಲ ಬಿಟ್ಟು ಹೊರಟುಬಿಡುತ್ತಾನೆ. ಆತನ ಜರ್ನಿಯಲ್ಲಿ ನಾನು ಭೇಟಿಯಾಗುತ್ತೇನೆ. ಇಲ್ಲಿ ನಾನು ನನ್ನ ನಿಜ ಜೀವನಕ್ಕೆ ಹತ್ತಿರವಾದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಏನು ಮಾಡುತ್ತಿದ್ದಾಳೆ ಎಂಬ ಸ್ಪಷ್ಟನೆ ಇರುವ, ಯೋಚಿಸಿ ಮಾತನಾಡುವ ಪಾತ್ರ' ಎಂದು ಮಾಹಿತಿ ನೀಡುತ್ತಾರೆ ಅಪೂರ್ವ.

ಆ ಕಲ್ಪನೆ ಬದಲಾಗಬಹುದು...

ಸೀರಿಯಲ್​ ಮತ್ತು ಸಿನಿಮಾಗಳಲ್ಲಿ ನಟಿಸಿ ತಮ್ಮದೇ ಛಾಪು ಮೂಡಿಸಿರುವ ಅಪೂರ್ವ, "ಆದರೂ, ಬಹಳ ಜನರಿಗೆ ನಾನು ಚಿತ್ರರಂಗದಲ್ಲಿದ್ದೇನೆ ಎಂಬುದೇ ಗೊತ್ತಿಲ್ಲ. ಬಹುಶಃ ನಾನು ಕಮರ್ಷಿಯಲ್​ ಚಿತ್ರಗಳಲ್ಲಿ ಹೆಚ್ಚು ನಟಿಸಿಲ್ಲದಿರುವುದು ಅದಕ್ಕೆ ಕಾರಣವಿರಬಹುದು. ಜತೆಗೆ ಕಮರ್ಷಿಯಲ್​ ಸಿನಿಮಾಗಳಿಗೆ ನಾನು ಹೊಂದಲ್ಲ ಅಂತಲೂ ಅಂದುಕೊಂಡಿರಬಹುದು. ಜನವರಿಯಲ್ಲಿ ರಿಲೀಸ್​ ಆಗಲಿರುವ ಎರಡೂ ಕಮರ್ಷಿಯಲ್​ ಚಿತ್ರಗಳಾದ ಕಾರಣ, ಚಿತ್ರರಂಗದಲ್ಲಿರುವವರ ಆ ಕಲ್ಪನೆ ಬದಲಾಗಬಹುದು. ಅವಕಾಶಗಳು ಹೆಚ್ಚಾಗಬಹುದು' ಎಂದು ನಿರೀೆ ವ್ಯಕ್ತಪಡಿಸುತ್ತಾರೆ.

ಆ್ಯಕ್ಷನ್​-ಕಟ್​ ಹೇಳಲು ಸಿದ್ಧತೆ

ಕಳೆದ ತಿಂಗಳು ರಿಲೀಸ್​ ಆದ ಐದು ಕಥೆಗಳ "ಬಿಟಿಎಸ್​' ಚಿತ್ರದ ಒಂದು ಕಥೆಯನ್ನು ಅಪೂರ್ವ ನಿರ್ದೇಶಿಸಿದ್ದರು. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದೇ ಖುಷಿಯಲ್ಲಿ ಸಿನಿಮಾ ನಿರ್ದೇಶಿಸಲು ಅವರು ಸಿದ್ಧತೆ ನಡೆಸುತ್ತಿದ್ದಾರೆ. "ನನಗೆ ಮಹಿಳಾ ಪ್ರಧಾನ ಅಥವಾ ನಟಿಗೆ ಪ್ರಾಮುಖ್ಯವಿರುವ ಪಾತ್ರ ಸಿಗುತ್ತಿಲ್ಲ ಎಂಬ ಕಾರಣದಿಂದ, ಅಂತಹ ಪಾತ್ರಗಳನ್ನು ನಾನೇ ಸೃಷ್ಟಿಸಬಹುದಲ್ಲ ಅಂತ ನಾನೇ ಕಥೆ ಬರೆಯಲು ಪ್ರಾರಂಭಿಸಿದ್ದೇನೆ. ಹೆಣ್ಣುಮಕ್ಕಳ ದೃಷ್ಟಿಕೋನದಲ್ಲಿ ಕಥೆಗಳು ಬಂದಿರುವುದು ತುಂಬ ಕಡಿಮೆ. ಎಲ್ಲರಿಗೂ ರಿಲೇಟ್​ ಮಾಡಿಕೊಳ್ಳುವ ಕಥೆ ಮಾಡುವ ಉದ್ದೇಶದಿಂದ ಕೆಲಸ ಮಾಡುತ್ತಿದ್ದೇನೆ. ಮಾರ್ಚ್​ನಲ್ಲಿ ನನ್ನ ನಿರ್ದೇಶನದ ಸಿನಿಮಾ ಘೋಷಣೆ ಮಾಡಲಿದ್ದೇನೆ' ಎಂದು ಹೇಳಿಕೊಳ್ಳುತ್ತಾರೆ ಅಪೂರ್ವ.

ದಶಕದ ಸಂಭ್ರಮ...

ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು ದಶಕದ ಸಂಭ್ರಮದಲ್ಲಿರುವ ಅಪೂರ್ವ, "ಇನ್ನೂ ಏನೂ ಮಾಡಿಲ್ಲವಲ್ಲಾ ಅಂತ ಅನ್ನಿಸುತ್ತದೆ. ಎಲ್ಲಿಂದ ಶುರು ಮಾಡಿ, ಎಲ್ಲಿಗೆ ಬಂದಿದ್ದೇನೆ? ಎಂಬ ಖುಷಿಯೂ ಇದೆ. ನಿರ್ದೇಶಕಿಯಾಗಿ ಇನ್ನೂ ಹೆಚ್ಚು ಸಿನಿಮಾ ಮಾಡಬೇಕು ಅನ್ನೋ ಆಸೆಯಿದೆ' ಎನ್ನುತ್ತಾರೆ.