ಸಿನಿವಾಣಿ

ಅಪರೂಪದ ಅನುಷಾ ; ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಬಿಜಿಯಾಗಿರುವ ನಟಿ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ನಟಿ ಅನುಷಾ ಇದೀಗ ಬಣ್ಣದ ಲೋಕದಲ್ಲಿ ದಶಕ ಪೂರೈಸಿದ ಸಂಭ್ರಮದಲ್ಲಿದ್ದಾರೆ. ಕಿರುತೆರೆ ಧಾರಾವಾಹಿ, ರಿಯಾಲಿಟಿ ಶೋ, ನಾಯಕಿ, ಪೋಷಕ ಪಾತ್ರ, ವಿಲನ್​… ಹೀಗೆ ಎಲ್ಲ ಬಗೆಯ ಪ್ರಯೋಗಗಳನ್ನು ಮಾಡುತ್ತಾ, ಸಾಗಿದ್ದಾರೆ. "ಕೃಷ್ಣಲಿಲಾ' ಅಜೇಯ್​ ರಾವ್​ ತಂಗಿ ಪಾತ್ರ ಮಾಡಿದ್ದ ಅವರು "ಜಲ್ಸಾ', "ಲೌಡ್​ಸ್ಪೀಕರ್​', "ಡಿಂಗ' ಚಿತ್ರಗಳಲ್ಲಿ "ದಾರಿ ಯಾವುದಯ್ಯಾ ವೈಕುಂಠಕೆ' ಚಿತ್ರಗಳಲ್ಲಿ ನಾಯಕಿಯಾಗಿದ್ದರು. "ಶ್ರೀಮಾನ್​ ಶ್ರೀಮತಿ' ಧಾರಾವಾಹಿಯಲ್ಲಿ ನಾಯಕಿಯಾಗಿದ್ದರೆ, "ಇವಳು ಸುಜಾತಾ' ಸೀರಿಯಲ್​ನಲ್ಲಿ ವಿಲನ್​ ಆಗಿದ್ದರು. ಜತೆಗೆ "ಡಾನ್ಸ್​ ಕರ್ನಾಟಕ ಡಾನ್ಸ್​' ಶೋನಲ್ಲಿ ತಾರಾಸ್ಪರ್ಧಿಯಾಗಿ ಕುಣಿದು ಕುಪ್ಪಳಿಸಿದ್ದರು. ಇದೀಗ ನಾಲ್ಕು ಸಿನಿಮಾ ಮತ್ತೊಂದು ಸೀರಿಯಲ್​ನಲ್ಲಿ ಬಿಜಿಯಾಗಿದ್ದಾರೆ.

ಪಾತ್ರೆ ತೊಳೆಯುವ ಪಾತ್ರ!
ನಾಯಕಿ ಎಂದರೆ ಮಾಡರ್ನ್​ ಲುಕ್​ನಲ್ಲಿ ಗ್ಲಾಮರಸ್​ಆಗಿ ಕಾಣಿಸಿಕೊಳ್ಳಬೇಕು ಎಂದು ಇಷ್ಟಪಡುವ ನಟಿಯರ ನಡುವೆ ಅನುಷಾ, "ಬ್ಲೇಡ್​ ಬಂಟಿ' ಚಿತ್ರದಲ್ಲಿ ಪಾತ್ರೆ ತೊಳೆಯುವ ಕೆಲಸದಾಕೆ. "ನನಗೆ ಪಾತ್ರ ಮುಖ್ಯ. ಒಂದೇ ರೀತಿಯ ಪಾತ್ರದಲ್ಲಿ ನಟಿಸಲು ಇಷ್ಟವಿಲ್ಲ. ಹೀಗಾಗಿಯೇ "ಬ್ಲೇಡ್​ ಬಂಟಿ'ಯಲ್ಲಿ ಈ ಪಾತ್ರ ಒಪ್ಪಿಕೊಂಡೆ. ಸದ್ಯ ಚಿತ್ರ ಡಬ್ಬಿಂಗ್​ ಹಂತದಲ್ಲಿದೆ. ಇದು ಸಸ್ಪೆನ್ಸ್​ ಥ್ರಿಲ್ಲರ್​ ಡಾರ್ಕ್​ ಕಾಮಿಡಿ ಸಿನಿಮಾ. ಒಂದೇ ದಿನ ನಡೆಯುವ ಬಹಳ ಟ್ರಿಕ್ಕಿ ಕಥೆ. ನಾವು ಸೀರಿಯಸ್​ ಆಗಿದ್ದರೂ ಪ್ರೇಕ್ಷಕರನ್ನು ನಗಿಸುವ ಸಿನಿಮಾ' ಎಂದು ಹೇಳಿಕೊಳ್ಳುತ್ತಾರೆ. ಹಾಗೇ ಡ್ರಗ್​ ಮಾಫಿಯಾ ಕುರಿತ "ನೂರ್​' ಚಿತ್ರದಲ್ಲಿ ಎರಡನೇ ನಾಯಕಿಯಾಗಿದ್ದಾರೆ ಅನುಷಾ. "ಮೂರು ಶೆಡ್ಯೂಲ್​ ಶೂಟಿಂಗ್​ ಆಗಿದೆ. ನಾಲ್ಕನೇ ಹಂತದ ಚಿತ್ರೀಕರಣ ಶುರುವಾಗಬೇಕಿದೆ. ಮನೆಯ ಜವಾಬ್ದಾರಿ ಹೊತ್ತ ಸೊಸೆಯ ಪಾತ್ರದಲ್ಲಿ ನಟಿಸಿದ್ದೇನೆ. ಕಮರ್ಷಿಯಲ್​ ಆಗಿ ದೊಡ್ಡ ಬಜೆಟ್​ ಸಿನಿಮಾ' ಎಂದು ಮಾಹಿತಿ ನೀಡುತ್ತಾರೆ. ಡೆಲಿವರಿ ಬಾಯ್​ಗಳ ಸಮಸ್ಯೆಗಳ ಕುರಿತ ಕಥೆ "ಕ್ಯಾಷ್​ ಆನ್​ ಡೆಲಿವರಿ' ಮತ್ತು ಸ್ವಾತಂತ್ರಪೂರ್ವ ಕಥೆಯಿರುವ "ಕತ್ತಲನ ತ್ರಿಷೂಲ' ಚಿತ್ರಗಳಲ್ಲಿ ನಟಿಸುತ್ತಿರುವ ಅವರು, "ಛೂ ಮಂತರ್​'ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಎಲ್ಲ ಪಾತ್ರಗಳನ್ನೂ ಒಪ್ಪಲ್ಲ
ಹತ್ತು ವರ್ಷಗಳಲ್ಲಿ ಹತ್ತು ಸಿನಿಮಾ, ಆರು ಧಾರಾವಾಹಿಗಳಲ್ಲಿ ನಟಿಸಿರುವ ಅನುಷಾ, ಬರುವ ಎಲ್ಲ ಪಾತ್ರಗಳನ್ನು ಒಪ್ಪಿಕೊಳ್ಳುವುದಿಲ್ಲವಂತೆ. "ಪಾತ್ರಕ್ಕೆ ಪ್ರಾಮುಖ್ಯವಿದ್ದರೆ ಒಪ್ಪಿಕೊಳ್ಳುತ್ತೇನೆ. ಈಗ ನಾನು ನಟಿಸುತ್ತಿರುವ ಮೂರೂ ಚಿತ್ರಗಳಲ್ಲಿ ಮೂರು ಭಿನ್ನ, ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿದ್ದೇನೆ' ಎನ್ನುತ್ತಾರೆ. ಅದೇ ಕಾರಣಕ್ಕೆ ಕಿರುತೆರೆಯಿಂದ ಬ್ರೇಕ್​ ತೆಗೆದುಕೊಂಡಿದ್ದ ಅನುಷಾ, ಎರಡು ವರ್ಷಗಳ ಬಳಿಕ "ಮೈನಾ' ಧಾರಾವಾಹಿ ಮೂಲಕ ಮತ್ತೆ ಕಿರುತೆರೆಗೆ ಕಮ್​ಬ್ಯಾಕ್​ ಮಾಡುತ್ತಿದ್ದಾರೆ.

ಈಜಿಯಾಗಿ ತೆಗೆದುಕೊಂಡರೆ ಅಷ್ಟೇ
ಸಿನಿಮಾ ಹಾಗೂ ಸೀರಿಯಲ್​ಗಳಲ್ಲಿ ಬಿಜಿಯಾಗಿರುವ ಅನುಷಾ, "ಕಿರುತೆರೆ ಮತ್ತು ಬೆಳ್ಳಿತೆರೆಯ ಎರಡೂ ಕಡೆ ಮ್ಯಾನೇಜ್​ ಮಾಡುವುದು ಕಷ್ಟವೇನಲ್ಲ' ಎನ್ನುತ್ತಾರೆ. ಏಕೆಂದರೆ, "ನಾನು ಏನೇ ಕೆಲಸ ಮಾಡಿದರೂ ನೂರಕ್ಕೆ ನೂರು ಎರ್ಟ್​ ಹಾಕುವ ಹುಡುಗಿ. ಹತ್ತು ವರ್ಷಗಳ ಹಿಂದೆ ಎಷ್ಟು ಶ್ರಮ ಹಾಕುತ್ತಿದ್ದೆನೋ, ಇವತ್ತೂ ಅಷ್ಟೇ ಶ್ರಮ ಹಾಕಿ ಕೆಲಸ ಮಾಡುತ್ತೇನೆ. ಈಜಿಯಾಗಿ ತೆಗದುಕೊಂಡ ದಿನ ನಮ್ಮ ಕರಿಯರ್​ ಮುಗಿಯುತ್ತೆ ಎಂಬುದು ನನ್ನ ನಂಬಿಕೆ' ಎಂದು ಹೇಳಿಕೊಳ್ಳುತ್ತಾರೆ.