ಸಿನಿವಾಣಿ

ಬಾಲಿವುಡ್​ನಲ್ಲೂ ಯಶ್ ರಾಕಿಂಗ್!

ಬೆಂಗಳೂರು: ಶೂಟಿಂಗ್ ಹಂತದಲ್ಲಿಯೇ ‘ರಾಕಿಂಗ್ ಸ್ಟಾರ್’ ಯಶ್ ನಟನೆಯ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅದ್ಯಾವ ಮಟ್ಟಿಗೆ ಎಂದರೆ, ಬಾಲಿವುಡ್​ನ ಸ್ಟಾರ್ ನಟರ ಸಿನಿಮಾಗಳಿಗೆ ‘ಕೆಜಿಎಫ್’ ಟಕ್ಕರ್ ಕೊಡುತ್ತಿದೆ!

ಕನ್ನಡದಲ್ಲಿ ಸದ್ದು ಮಾಡಿದ್ದ ‘ಕೆಜಿಎಫ್’ ಬಾಲಿವುಡ್​ನಲ್ಲೂ ಅದೇ ಮಟ್ಟಿಗಿನ ಹವಾ ಇಟ್ಟುಕೊಂಡಿತ್ತು. ಅದರ ಪರಿಣಾಮ ‘..ಚಾಪ್ಟರ್ 2’ ಮೇಲೆ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಅದಕ್ಕೆ ಉತ್ತರ ಎಂಬಂತೆ ಓರ್​ವ್ಯಾಕ್ಸ್ ಮೀಡಿಯಾ ಸಂಸ್ಥೆ, ಸರ್ವೆ ನಡೆಸಿ ಅದರ ವರದಿಯೊಂದನ್ನು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. 2020ರ ಟಾಪ್-5 ಬಹುನಿರೀಕ್ಷಿತ ಬಾಲಿವುಡ್ ಸಿನಿಮಾಗಳ ಪಟ್ಟಿ ಬಿಡುಗಡೆ ಮಾಡಿದ್ದು, ಅದರಲ್ಲಿ ಕನ್ನಡದ ‘ಕೆಜಿಎಫ್: ಚಾಪ್ಟರ್ 2’ ಮೊದಲ ಸ್ಥಾನದಲ್ಲಿದೆ.

ಅಜಯ್ ದೇವಗನ್, ಅರ್ಶದ್ ವಾರ್ಸಿ, ತುಷಾರ್ ಕಪೂರ್ ಮುಂತಾದವರು ಇರುವ ಬಹುತಾರಾಗಣದ ‘ಗೋಲ್​ವಾಲ್ 5’, ರಣಬೀರ್ ಕಪೂರ್, ಆಲಿಯಾ ಭಟ್ ನಟಿಸುತ್ತಿರುವ ‘ಬ್ರಹ್ಮಾಸ್ತ್ರ’, ಅಕ್ಷಯ್ ಕುಮಾರ್ ಅಭಿನಯದ ‘ಸೂರ್ಯವಂಶಿ’ ಮತ್ತು ರಣವೀರ್ ಸಿಂಗ್ ಕ್ರಿಕೆಟರ್ ಆಗಿ ಕಾಣಿಸಿಕೊಂಡಿರುವ ‘83’ ಕ್ರಮವಾಗಿ ಟಾಪ್-5ನ 2, 3, 4 ಮತ್ತು 5ನೇ ಸ್ಥಾನದಲ್ಲಿವೆ. ಈ ಖುಷಿಯ ವಿಚಾರವನ್ನು ಬಾಲಿವುಡ್ ನಟ, ನಿರ್ವಪಕ ಫರ್ಹಾನ್ ಅಖ್ತರ್ ಶೇರ್ ಮಾಡಿಕೊಂಡು, ‘ರಾಕಿ ಬರುವಿಕೆಗಾಗಿ ಕಾಯುತ್ತಿದ್ದಾರೆ’ ಎಂದಿದ್ದಾರೆ. ಅದಕ್ಕೆ ಪ್ರತಿಯಾಗಿ, ‘ಆದಷ್ಟು ಬೇಗ ರಾಕಿಯ ತೂಫಾನ್ ಅಪ್ಪಳಿಸಲಿದೆ’ ಎಂದಿದ್ದಾರೆ ನಟ ಯಶ್.