ವಿಜಯವಾಣಿ ಸುದ್ದಿಜಾಲ ಬೆಂಗಳೂರು
"ಕೆಜಿಎ್ ಚಾಪ್ಟರ್ 2' ಯಶಸ್ಸಿನ ನಂತರ ಎರಡು ವರ್ಷಗಳ ಬಳಿಕ ನಟ ಯಶ್ ಅಭಿನಯಿಸುತ್ತಿರುವ ಸಿನಿಮಾ "ಟಾಕ್ಸಿಕ್'. ಮಲಯಾಳಂ ನಿರ್ದೇಶಕಿ ಗೀತು ಮೋಹನ್ದಾಸ್ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದು, ಈಗಾಗಲೇ ಬೆಂಗಳೂರಿನ ಹೊರವಲಯದಲ್ಲಿ ಬೃಹತ್ ಸೆಟ್ಗಳನ್ನು ನಿರ್ಮಿಸಿ ಶೂಟಿಂಗ್ ನಡೆಸಲಾಗುತ್ತಿದೆ. 1950ರಿಂದ 1970ರ ಅಂತ್ಯದವರೆಗೆ ಡ್ರಗ್ಸ್ ಮಾಫಿಯಾ ಸುತ್ತ ನಡೆಯುವ ಕಥಾಹಂದರ ಹೊಂದಿರುವ "ಟಾಕ್ಸಿಕ್' ಆ್ಯಕ್ಷನ್ ಪ್ರಧಾನ ಚಿತ್ರವಿದು. ಕಳೆದ ಡಿಸೆಂಬರ್ನಲ್ಲಿಯೇ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಲಾಗಿತ್ತಾದರೂ, ಯಶ್ ಲುಕ್ಅನ್ನು ಚಿತ್ರತಂಡ ಗುಟ್ಟಾಗಿಟ್ಟಿತ್ತು.
ಇತ್ತೀಚೆಗಷ್ಟೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಪಾಲ್ಗೊಳ್ಳಲು ಯಶ್ ಮತ್ತು ರಾಧಿಕಾ ದಂಪತಿ ಬೆಂಗಳೂರಿನಿಂದ ಮುಂಬೈಗೆ ತೆರಳಿದ್ದರು. ಆ ಸಂದರ್ಭದಲ್ಲಿ ಯಶ್ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದು, "ಟಾಕ್ಸಿಕ್' ಚಿತ್ರದಲ್ಲೂ ಅದೇ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಯಶ್ಗೆ ಚಿತ್ರದಲ್ಲಿ ಕಿಯಾರಾ ಅಡ್ವಾನಿ ನಾಯಕಿಯಾಗಿದ್ದು, ನಯನತಾರಾ, ಹುಮಾ ಖುರೇಷಿ, ಶ್ರುತಿ ಹಾಸನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎಲ್ಲವೂ ಅಂದುಕೊಂಡಂತಾದರೆ "ಟಾಕ್ಸಿಕ್' 2025ರ ಏ. 10ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ.
ಆರು ವರ್ಷಗಳಿಂದ ಅದೇ ಲುಕ್!
"ಕೆಜಿಎ್ ಚಾಪ್ಟರ್ 1' ಚಿತ್ರೀಕರಣ ಪೂರ್ಣಗೊಂಡ ಬೆನ್ನಲ್ಲೇ "ಕಿರಾತಕ 2' ಚಿತ್ರದಲ್ಲಿ ನಟಿಸಲು ಯಶ್ 2018ರ ಏಪ್ರಿಲ್ನಲ್ಲಿ ರಾಕಿ ಭಾಯ್ ಲುಕ್ಗೆ ಗುಡ್ಬೈ ಹೇಳಿದ್ದರು. "ಕೆಜಿಎ್' ಸರಣಿಗಾಗಿ ಉದ್ದ ಕೂದಲು ಮತ್ತು ಗಡ್ಡ ಬಿಟ್ಟಿದ್ದ ಯಶ್, "ಕಿರಾತಕ 2'ಗಾಗಿ ಹೊಸ ಲುಕ್ನಲ್ಲಿ ಕಾಣಿಸಿಕೊಳ್ಳಬೇಕಿತ್ತು. ಹೀಗಾಗಿ ಉದ್ದ ಕೂದಲು ಮತ್ತು ಗಡ್ಡಕ್ಕೆ ಕತ್ತರಿ ಹಾಕಿಸಿದ್ದರು. ಅದರ ವಿಡಿಯೋ ಮಾಡಿದ್ದ ಪತ್ನಿ ರಾಧಿಕಾ ಪಂಡಿತ್, "ಕೊನೆಗೆ ಈ ಗಡ್ಡ, ಈ ಉದ್ದ ಕೂದಲಿಗೆ ಮುಕ್ತಿ ಸಿಗುತ್ತಿದೆ. ನಂಗಂತೂ ನನ್ನ ಗಂಡ ಹೇಗೆ ಕಾಣಿಸುತ್ತಿದ್ದರು ಅಂತ ನೆನಪೇ ಇಲ್ಲ. "ಕಿರಾತಕ 2' ತಂಡಕ್ಕೆ ಧನ್ಯವಾದಗಳು' ಎಂದು ಸಂಭ್ರಮಿಸಿದ್ದರು. ಮತ್ತೊಂದೆಡೆ ಯಶ್ ಕೂಡ, "ಎರಡು ವರ್ಷಗಳಿಂದ ಜತೇಲಿದ್ದು, ಈಗ ತೆಗೆಸಲು ಬೇಜಾರಾಗುತ್ತಿದೆ' ಎಂದು ತಮಾಷೆ ಮಾಡಿದ್ದರು. ಆದರೆ, "ಚಾಪ್ಟರ್ 1' ದೊಡ್ಡ ಯಶಸ್ಸು ಕಂಡ ಬೆನ್ನಲ್ಲೇ, "ಕೆಜಿಎ್ ಚಾಪ್ಟರ್ 2' ಗಾಗಿ "ಕಿರಾತಕ 2'ಗೆ ಕೊಕ್ ನೀಡಬೇಕಾಯಿತು. ಹೀಗಾಗಿ ಮತ್ತೆ ಉದ್ದ ಕೂದಲು ಮತ್ತು ಗಡ್ಡ ಬಿಟ್ಟಿದ್ದರು ಯಶ್. 2022ರ ಏಪ್ರಿಲ್ನಲ್ಲಿ "ಕೆಜಿಎ್ ಚಾಪ್ಟರ್ 2' ಬಿಡುಗಡೆಯಾದ ಬಳಿಕವೂ, ಯಶ್ ಅದೇ ಲುಕ್ನಲ್ಲಿ ಎಲ್ಲೆಡೆ ಕಾಣಿಸಿಕೊಳ್ಳುತ್ತಿದ್ದರು. ಇದೀಗ "ಟಾಕ್ಸಿಕ್'ಗಾಗಿ ಕೂದಲಿಗೆ ಕತ್ತರಿ ಹಾಕಿರುವ ಅವರು, ಗಡ್ಡವನ್ನು ಉದ್ದ ಬೆಳೆಸಿಕೊಂಡಿದ್ದಾರೆ.