ಬೆಂಗಳೂರು: ವಿಜಯ್ ರಾಘವೇಂದ್ರ ಏಕಪಾತ್ರದಲ್ಲಿ ನಟಿಸಿರುವ ಸಿನಿಮಾ ‘ರಾಘು’. ನಿರ್ದೇಶಕ ಆನಂದ್ ರಾಜ್ ಮೊದಲ ಪ್ರಯತ್ನದಲ್ಲೇ ಹೊಸ ರೀತಿಯ ಪ್ರಯೋಗ ಮಾಡಿದ್ದಾರೆ. ‘ಈ ಸಿನಿಮಾಗೆ ಸ್ಪೂರ್ತಿ ಉಪೇಂದ್ರ ಸರ್. ಅವರು ಈಗಾಗಲೇ ತಮ್ಮ ಸಿನಿಮಾಗಳಲ್ಲಿ ಹಲವು ಪ್ರಯೋಗಗಳನ್ನು ಮಾಡಿದ್ದಾರೆ. ‘ರಾಘು’ ಒಂದೊಳ್ಳೆ ವಿಷಯವಿರುವ ಸಿನಿಮಾ. ಹೊಸ ರೀತಿಯ ಅನುಭವ ನೀಡುವ ಚಿತ್ರ,’ ಎನ್ನುತ್ತಾರೆ ಆನಂದ್.
ವಿಜಯ್ ಸರ್ಗೆ ಅನುಮಾನವಿತ್ತು..: ಅಂದಹಾಗೆ, ವಿಜಯ್ ರಾಘವೇಂದ್ರಗೆ ಕಥೆ ಹೇಳುವಾಗ ಆನಂದ್, ಇದು ಸೋಲೋ ಆಕ್ಟರ್ ಸಿನಿಮಾ ಅಂತ ಹೇಳಿರಲಿಲ್ಲವಂತೆ. ‘ಕಥೆ ಕೇಳಿ ಇಷ್ಟಪಟ್ಟರು. ಅವರು ಒಪ್ಪಿಕೊಂಡ ಬಳಿಕ ಇದು ಸೋಲೋ ಆಕ್ಟರ್ ಸಿನಿಮಾ ಎಂದೆ, ಅವರಿಗೆ ಆಶ್ಚರ್ಯವಾಯಿತು. ಶೂಟಿಂಗ್ ಪ್ರಾರಂಭಿಸಿದ ಮೊದಲ ಮೂರು ದಿನಗಳವರೆಗೂ ಅವರು ಅನುಮಾನದಲ್ಲೇ ಇದ್ದರು. ಆದರೆ, ವಿಡಿಯೋಗಳನ್ನು ಸಂಕಲನ ಮಾಡಿ, ತೋರಿಸಿದಾಗ ಖುಷಿಯಾದರು. 26 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ’ ಎನ್ನುತ್ತಾರೆ ಆನಂದ್.
ಬೇರೆ ಚಿತ್ರಗಳಲ್ಲಿಲ್ಲದ್ದು, ಈ ಚಿತ್ರದಲ್ಲಿದೆ!: ಸೋಲೋ ಆಕ್ಟರ್ ಸಿನಿಮಾ ಇದೇ ಮೊದಲೇನಲ್ಲ. ಕನ್ನಡದಲ್ಲಿ ‘ಶಾಂತಿ’, ಹಾಲಿವುಡ್ನಲ್ಲಿ ‘ಬರೀಡ್’, ‘ಲಾಕಿ’ ಸೇರಿ ಹಲವು ಚಿತ್ರಗಳು ಬಂದಿವೆ. ‘ಆ ಸಿನಿಮಾಗಳನ್ನು ನಾನೂ ನೋಡಿದ್ದೇನೆ. ಆದರೆ, ಆ ಚಿತ್ರಗಳಲ್ಲಿ ಇಲ್ಲದಿರವುದನ್ನು ಇಲ್ಲಿ ನೋಡಬಹುದು. 94 ನಿಮಿಷಗಳಲ್ಲಿ ರೊಮ್ಯಾನ್ಸ್, ಕಾಮಿಡಿ, ಥ್ರಿಲ್ಲಿಂಗ್ ಅಂಶಗಳು, ಆಕ್ಷನ್, ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲ ವಿಷಯಗಳೂ ಇವೆ. ಆದರೆ, ವಿಜಯ್ ಒಬ್ಬರೇ ತೆರೆ ಮೇಲಿರುತ್ತಾರೆ. ಅದು ಹೇಗೆ ಸಾಧ್ಯ? ಅಂತನ್ನಿಸಬಹುದು. ಅದಕ್ಕೆ ಸಿನಿಮಾದಲ್ಲಿ ಉತ್ತರವಿದೆ.’ ಎಂದು ನಗುತ್ತಾರೆ ಆನಂದ್.
ಸೋಲೋ ಆಕ್ಟರ್ ಸವಾಲು: ಸಿನಿಮಾ ಪೂರ್ತಿ ಒಬ್ಬನೇ ನಟನ ಜತೆ ಚಿತ್ರೀಕರಣ ಮಾಡುವುದು ಕಷ್ಟವೆನ್ನುತ್ತಾರೆ ಆನಂದ್. ‘ಹಲವು ಕಲಾವಿದರಿದ್ದರೆ, ಕ್ಲೋಸಪ್, ಲಾಂಗ್ ಶಾಟ್ ಅಂತ ಹೆಚ್ಚುವರಿ ಶೂಟಿಂಗ್ ಮಾಡಿಕೊಂಡಿರುತ್ತೇವೆ. ಆದರೆ, ಸೋಲೋ ಆಕ್ಟರ್ ಚಿತ್ರದಲ್ಲಿ ಆ ಆಯ್ಕೆಗಳಿರುವುದಿಲ್ಲ. ಹೀಗಾಗಿ ಸಂಕಲನ ತುಂಬ ಚಾಲೆಂಜಿಂಗ್ ಆಗಿತ್ತು’ ಎನ್ನುತ್ತಾರೆ ಆನಂದ್.