ಸಿನಿವಾಣಿ

Vasishta Simha Interview; ಆತ್ಮವನ್ನು ನೋಡಿದ್ದೇನೆ, ಪರಮಾತ್ಮನನ್ನು ನಂಬುತ್ತೇನೆ- ಘೋಸ್ಟ್​ ಹಂಟಿಂಗ್​ ದಿನಗಳನ್ನು ನೆನೆದ ನಟ ವಸಿಷ್ಠ ಸಿಂಹ

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ಕಂಚಿನ ಕಂಠದ ನಟ ವಸಿಷ್ಠ ಸಿಂಹ ಕನ್ನಡದ ಜತೆ ತೆಲುಗಿನಲ್ಲೂ ಬಿಜಿಯಾಗಿದ್ದಾರೆ. ಅವರು ವಿಲನ್​ ಪಾತ್ರದಲ್ಲಿ ನಟಿಸಿರುವ ತೆಲುಗಿನ "ಓದೆಲಾ 2' ನಾಳೆ ಬಿಡುಗಡೆಯಾಗುತ್ತಿದೆ. ಇದು 2022ರಲ್ಲಿ ರಿಲೀಸ್​ ಆದ "ಓದೆಲಾ ರೈಲ್ವೇ ಸ್ಟೇಷನ್​' ರಿಮೇಕ್​. ಚಿತ್ರದ ಬಗ್ಗೆ, "ಮೊದಲ ಭಾಗ ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ಲಾಕ್​ಡೌನ್​ ಬಳಿಕ ಮೊದಲು ಶೂಟಿಂಗ್​ ನಡೆಸಿದ ಚಿತ್ರ ಎಂಬ ಹೆಗ್ಗಳಿಕೆ "ಓದೆಲಾ'ಗೆ ಸಲ್ಲುತ್ತದೆ. ಒಟಿಟಿಯಲ್ಲಿ ಆರೇಳು ತಿಂಗಳ ಕಾಲ ಟ್ರೆಂಡಿಂಗ್​ನಲ್ಲಿದ್ದ ಸಿನಿಮಾ, ದೊಡ್ಡ ಹಿಟ್​ ಆದ ಬೆನ್ನಲ್ಲೇ ಕಥೆಗಾರ ಸಂಪತ್​ ನಂದಿ ಸೀಕ್ವೆಲ್​ ಪ್ಲಾ$್ಯನ್​ ಮಾಡಿಕೊಂಡರು. ಕೆಲ ತಿಂಗಳ ಹಿಂದೆ ಕರೆ ಮಾಡಿ ಕಥೆ ಹೇಳಿದರು. ಜತೆಗೆ ನೀವೂ ಈ ಸೀಕ್ವೆಲ್​ನಲ್ಲಿ ಇರಲಿದ್ದೀರಿ ಎಂದರು. ನನ್ನ ಪಾತ್ರದ ಸುತ್ತ ನಡೆಯುವ ಕಥೆಯಿದು. ಆತ್ಮ ಮತ್ತು ಪರಮಾತ್ಮರ ನಡುವಿನ ಯುದ್ಧ. ಮೊದಲ ಚಿತ್ರ ನೈಜ ಟನೆಗಳಿಂದ ಸ್ಪೂರ್ತಿ ಪರೆದ ಕಥೆಯಾಗಿದ್ದರೆ, ಈ ಸೀಕ್ವೆಲ್​ ಕಾಲ್ಪನಿಗೆ ಕಥೆ ಹೊಂದಿದೆ. ದೇವರಿದ್ದಾನೆ ಎಂಬ ನಂಬಿಕೆಯನ್ನು ಆಧರಿಸಿದ ಕಥೆ. ಅದ್ಭುತವಾದ ಥಿಯೇಟ್ರಿಕಲ್​ ಅನುಭವ ನೀಡುವ ಸಿನಿಮಾ. ನಾನು ಜೀವನದಲ್ಲಿ ಮಾಡದಿರುವಂತಹ, ನೋಡದಿರುವಂತಹ ಪಾತ್ರದಲ್ಲಿ ನಟಿಸಿದ್ದೇನೆ' ಎಂದು ಮಾಹಿತಿ ನೀಡುತ್ತಾರೆ.

ತಮನ್ನಾ ವರ್ಸಸ್​ ವಸಿಷ್ಠ

"ಓದೆಲಾ 2' ಪ್ಯಾನ್​ ಇಂಡಿಯಾ ಮೂಡಿಬರುತ್ತಿದ್ದು, ತಮನ್ನಾ ಭಾಟಿಯಾ ಮುಖ್ಯ ಭೂಮಿಕೆಯಲ್ಲಿ ಅಘೋರಿ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಪ್ರಿ&ರಿಲೀಸ್​ ಕಾರ್ಯಕ್ರಮದಲ್ಲಿ, "ವಸಿಷ್ಠ ನಟನೆ ನೋಡಲು ಈ ಸಿನಿಮಾ ನೋಡುತ್ತೇನೆ' ಎಂದಿದ್ದರು ತಮನ್ನಾ. ಈ ಬಗ್ಗೆ ವಸಿಷ್ಠ, "ಎರಡು ದಶಕಗಳಿಂದ ನಾಯಕಿಯಾಗಿ ನಟಿಸುತ್ತಾ, ಈಗಲೂ ಪ್ರಸ್ತುತವಾಗಿರುವ ಅಪರೂಪದ ನಟಿ ತಮನ್ನಾ. ಅಂತಹ ಒಬ್ಬ ಅದ್ಭುತ ಪ್ರತಿಭೆ, ಸೀನಿಯರ್​ ನಟಿ ನನ್ನ ಬಗ್ಗೆ ಮಾತನಾಡುವುದು ಖಂಡಿತ ಖುಷಿ ಆಗುತ್ತೆ. ಶೂಟಿಂಗ್​ ಸಮಯದಲ್ಲೂ ನಾನಾ, ನೀನಾ ಎಂಬ ಪೈಪೋಟಿ ಇರುತ್ತಿತ್ತು. ಅದು ತೆರೆ ಮೇಲೆ ನೋಡುವುದು ಸರ್​ಪೆಸ್​ ಅನ್ನಿಸುತ್ತದೆ' ಎಂದು ಸಂತಸ ಹಂಚಿಕೊಳ್ಳುತ್ತಾರೆ.

ಆತ್ಮಗಳನ್ನು ನೋಡಿದ್ದೇನೆ!

ಗೆಳೆಯರ ಜತೆ ಭೂತ ಬಂಗಲೆಗಳಿಗೆ ಘೋಸ್ಟ್​ ಹಂಟಿಂಗ್​ ಹೋಗಿರುವ ವಸಿಷ್ಠ ವಿಕಾರವಾದ ಆಕಾರವನ್ನು ಕಣ್ಣಾರೆ ಕಂಡಿದ್ದಾರಂತೆ. "ಆತ್ಮಗಳನ್ನು ಖಂಡಿತ ನಂಬುತ್ತೇನೆ. ನನಗೆ ಅಂತಹ ಅನುಭವಗಳಾಗಿವೆ. ಹಾಗಂತ ನನಗೆ ಭಯವಿಲ್ಲ. ದೆವ್ವ, ಆತ್ಮ, ಪ್ರೇತಾತ್ಮ ಇವೆ. ದೇವರನ್ನು ಪಾಸಿಟಿವ್​ ಎನರ್ಜಿಯೆಂದರೆ, ದೆವ್ವಗಳನ್ನು ನೆಗಟಿವ್​ ಎನರ್ಜಿ ಅನ್ನುತ್ತೇವೆ. ಮೋಕ್ಷ ಸಿಗದ ಆತ್ಮಗಳು, ಪ್ರತಿಕಾರಕ್ಕಾಗಿ ಕಾಯುವ, ಪಂಚಭೂತಗಳಲ್ಲಿ ವಿಲೀನವಾಗದವರು ಏನಾಗುತ್ತಾರೆ? ಗೆಳೆಯರ ಜತೆ ಭೂತ ಬಂಗಲೆಗಳಿಗೆ ಹೋಗುತ್ತಿದ್ದೆ. ಸಾಹಸಮಯ ಜರ್ನಿ ಅದು. ಅಲ್ಲೆಲ್ಲ ಕೆಲ ಅಂದುಕೊಳ್ಳಲಾಗದ ಟನೆಗಳು ನಡೆದು, ಹೇಳಲಾಗದಂತಹ ಅನುಭವಗಳಾಗಿವೆ. ವಿಕಾರವಾದ ಆಕಾರ ನೋಡಿ, ಅದನ್ನು ಮುದುಕಿ ಅನ್ನೋದಾ, ಏನನ್ನೋದೋ ಗೊತ್ತಿಲ್ಲ. ಆಗ ಗಾಬರಿ ಆಗಿದ್ದುಂಟು. ಆದರೆ, ಎಲ್ಲ ಆತ್ಮಗಳೂ ತೊಂದರೆ ಕೊಡಬೇಕು ಅಂತಿರಲ್ಲ' ಎಂದು ಅನುಭವ ಹಂಚಿಕೊಳ್ಳುತ್ತಾರೆ ವಸಿಷ್ಠ.

ಮುಂದುವರಿಯಲಿದೆ "ಓದೆಲಾ' ಸರಣಿ

"ಓದೆಲಾ 2' ಬಳಿಕ ಸರಣಿಯನ್ನು ಮುಂದುವರಿಸಲು ನಿರ್ದೇಶಕ ಅಶೋಕ ತೇಜಾ ಪ್ಲಾ$್ಯನ್​ ಮಾಡಿಕೊಂಡಿದ್ದಾರೆ. ವಸಿಷ್ಠ, "ಹಾರರ್​ ಸಿನಿಮಾಗಳು ಹಾರರ್​ಗಿಂತ ಹೆಚ್ಚಾಗಿ ಹಾಸ್ಯಮಯವಾಗಿರುತ್ತವೆ. ಹೀಗಾಗಿ ಹಾರರ್​ ಚಿತ್ರಗಳಲ್ಲಿ ಅವಕಾಶ ಬಂದರೂ ನಾನು ಇಲ್ಲ ಎನ್ನುತ್ತೇನೆ. ಆದರೆ, "ಓದೆಲಾ' ಹಾಗಲ್ಲ. ಅದೇ ಕಾರಣಕ್ಕೆ ಈ ಸರಣಿಯಲ್ಲಿ ಮುಂದೆಯೂ ನಟಿಸಲಿದ್ದೇನೆ' ಎನ್ನುತ್ತಾರೆ.

ಮರಿಸಿಂಹನಿಗೆ ಸಮಯ ಮೀಸಲು

"ಓದೆಲಾ 2' ರಿಲೀಸ್​ ಬಳಿಕ ವಸಿಷ್ಠ ತಲಾ ಒಂದು ಕನ್ನಡ, ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅದರ ನಡುವೆಯೂ, "ಕುಟುಂಬಕ್ಕೆ ಹೆಚ್ಚು ಸಮಯ ಕೊಡಬೇಕು. ಅದು ಮುಖ್ಯ, ಬಾಕಿದೆಲ್ಲ ಆಮೇಲೆ. ಮಗನ ಜತೆ ಕಾಲ ಕಳೆಯುವುದು ನನಗೆ ಅದ್ಭುತ ಅನುಭವ. ಅವನು ನಮ್ಮಿಂದ ಕಲಿಯುತ್ತಾ, ನಾವು ಅವನಿಂದ ಕಲಿಯುತ್ತಾ ಸಾಗುವುದೇ ಖುಷಿ' ಎಂದು ಸಂತಸ ಹಂಚಿಕೊಳ್ಳುತ್ತಾರೆ ವಸಿಷ್ಠ.