ತಮಿಳು ನಟ ಸೂರ್ಯ, ಸಿಎಂ ವಿಜಯ್​  
ಸಿನಿವಾಣಿ

ದೇವರು, ಸಮಯ ನಿರ್ಧರಿಸಿದ್ರೆ ಗ್ಯಾರಂಟಿ! ನಟ ಸೂರ್ಯ ಅಭಿಮಾನಿಗಳ ಸಂಘದಿಂದ ಅಚ್ಚರಿ​ ಹೇಳಿಕೆ​

ಪ್ರಮುಖ ಮುಖ್ಯಾಂಶಗಳು

  • ನಟ ವಿಜಯ್​ರಂತೆ ತಮಿಳುನಾಡು ರಾಜಕೀಯಕ್ಕೆ ಸೂರ್ಯ ಎಂಟ್ರಿ?
  • ನಟನ ಅಭಿಮಾನಿಗಳ ಸಂಘದ ನಾಯಕನಿಂದ ಅಚ್ಚರಿ ಹೇಳಿಕೆ
ಚೆನ್ನೈ: ವಿಧಾನಸಭೆ ಚುನಾವಣೆಯಲ್ಲಿ ದಾಖಲೆಯ ಗೆಲುವು ಸಾಧಿಸಿ, ತಮ್ಮ ಚೊಚ್ಚಲ ಎಲೆಕ್ಷನ್​ನಲ್ಲಿಯೇ ಟಿವಿಕೆ ಪಕ್ಷದಿಂದ ಗೆದ್ದು, ತಮಿಳುನಾಡಿನ ಸಿಎಂ ಆಗಿರುವ ಸಿ. ಜೋಸೆಫ್ ವಿಜಯ್ ಅವರಂತೆಯೇ ಈಗ ಮತ್ತೊಬ್ಬ ತಮಿಳಿನ ಸ್ಟಾರ್ ಹೀರೋ ಸೂರ್ಯ ಕೂಡ ಚಿತ್ರರಂಗ ತೊರೆದು ರಾಜಕೀಯ ಪ್ರವೇಶಿಸಲಿದ್ದಾರೆ ಎಂಬ ಸುದ್ದಿಯೊಂದು ಸದ್ಯ ಹೊಸ ಸಂಚಲನ ಸೃಷ್ಟಿಸಿದೆ.
ಈ ಹಿಂದೆಯೂ ಸೂರ್ಯ ಅವರು ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ವದಂತಿಗಳು ದೊಡ್ಡ ಮಟ್ಟದಲ್ಲಿ ತಮಿಳುನಾಡಿನ ಜನತೆಯಲ್ಲಿ ಕುತೂಹಲ ಕೆರಳಿಸಿತ್ತು. ಆದರೆ, ಅದು ಊಹಾಪೋಹವಾಗಿಯೇ ಉಳಿಯಿತು. ಆದರೀಗ, ಮತ್ತೊಮ್ಮೆ ಸೂರ್ಯ ರಾಜಕೀಯ ಎಂಟ್ರಿ ಕುರಿತು ಚರ್ಚೆಗಳು ಭುಗಿಲೆದ್ದಿದ್ದು, ನಟನ ಅಭಿಮಾನಿಗಳ ಸಂಘಟನೆಯ ನಾಯಕರೊಬ್ಬರು ಆಡಿರುವ ಮಾತುಗಳೇ ಈ ಸಂಚಲನಕ್ಕೆ ಕಾರಣವಾಗಿದೆ.
ಚೆನ್ನೈನಲ್ಲಿ ನಡೆದ ಅಖಿಲ ಭಾರತ ಸೂರ್ಯ ತಲಾಮೈ ನಲ್ಪಾನಿ ​​ಐಯಕ್ಕಂನ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ನಾಯಕರೊಬ್ಬರು ಮಾಡಿದ ಭಾಷಣವನ್ನು ತಮಿಳುನಾಡು ಸುದ್ದಿ ವಾಹಿನಿಯೊಂದು ಪ್ರಸಾರ ಮಾಡಿತು. ವೇದಿಕೆಯಲ್ಲಿ ಅವರಾಡಿದ ಮಾತುಗಳೇ ಈಗ ಸೂರ್ಯ ರಾಜಕೀಯ ಎಂಟ್ರಿಯನ್ನು ಪ್ರಶ್ನಿಸುವಂತೆ ಮಾಡಿದೆ. ವರದಿಗಳ ಪ್ರಕಾರ, ವಿಜಯ್​ರಂತೆ ಸೂರ್ಯ ಕೂಡ ತಮಿಳುನಾಡು ರಾಜಕೀಯಕ್ಕೆ ಎಂಟ್ರಿ ಕೊಡುವುದು ನಿಜ ಎನ್ನಲಾಗಿದೆ.

ಸೂರ್ಯ ರಾಜಕೀಯ ಬಗ್ಗೆ ಹೇಳಿದ್ದೇನು?

ನಾನು ನಿಮ್ಮೆಲ್ಲರನ್ನೂ ನೋಡಿದಾಗ, ನಿಮ್ಮಲ್ಲಿ ಭವಿಷ್ಯದ ಶಾಸಕರು ಮತ್ತು ಸಂಸದರನ್ನು ಕಾಣುವೆ. ವಿಧಾನಸಭೆಯ ಒಳಗೆ ಸಚಿವರು ಎಂದು ಬರೆದಿರುವ ನಾಮಫಲಕದ ಹಿಂದೆ ಕುಳಿತಿರುವ ವ್ಯಕ್ತಿಗಳನ್ನು ನೋಡುತ್ತಿರುವೆ. ದೇವರು ಮತ್ತು ಸಮಯ ನಿರ್ಧರಿಸಿದರೆ, ಖಂಡಿತ ಸೂರ್ಯ ಅವರು ರಾಜಕೀಯ ಪ್ರವೇಶಿಸುತ್ತಾರೆ. ಒಂದು ಹೆಜ್ಜೆ, 130 ಎಡಿ ಎತ್ತರಕ್ಕೆ ನಾವೆಲ್ಲ ಹೋಗ್ತೀವಿ ಎಂದು ಸಂಘದ ನಾಯಕ ಹೇಳಿದರು.
ಸೂರ್ಯ ಅಣ್ಣನಿಗಾಗಿ ನೀವೆಲ್ಲ ಕೆಲಸ ಮಾಡಲು ರೆಡಿನಾ? ಪ್ರತಿಯೊಬ್ಬರೂ ಕೈಜೋಡಿಸಿದರೆ ಮಾತ್ರ ಇದು ಮುಂದುವರಿಯುತ್ತೆ, ಇದೆಲ್ಲವೂ ಸಾಧ್ಯವಾಗುತ್ತೆ. ಇಲ್ಲಿ ನಾನು ಅನ್ನೋದನ್ನು ಮರೆತು, ಇತರ ಪದಾಧಿಕಾರಿಗಳೊಂದಿಗಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಕೇವಲ ಸೂರ್ಯ ಅವರಿಗಾಗಿ ಕೆಲಸ ಮಾಡಲು ಸಿದ್ಧವೇ? ಹೌದು, ಎಂದರೆ ಮಾತ್ರ ಸೂರ್ಯ ಅಣ್ಣ ಜನಪ್ರತಿನಿಧಿಯಾಗುತ್ತಾರೆ ಎಂದು ಭಾಷಣದ ವೇಳೆ ಹೇಳಿದ್ದಾರೆ.

ವೈರಲ್​ ಬೆನ್ನಲ್ಲೇ ಸ್ಪಷ್ಟನೆ!

ಸೂರ್ಯ ರಾಜಕೀಯ ಪ್ರವೇಶ ಖಚಿತ ಎಂಬ ವದಂತಿಗಳು ಜೋರಾದ ಬೆನ್ನಲ್ಲೇ ಸ್ಪಷ್ಟನೆ ಕೊಟ್ಟಿರುವ ಅಭಿಮಾನಿಗಳ ಸಂಘದ ನಾಯಕ ವೀರಮಣಿ, ಭಾಷಣದಲ್ಲಿ ಹೇಳಿದ್ದು ನನ್ನ ವೈಯಕ್ತಿಕ ಅಭಿಪ್ರಾಯ ಅಷ್ಟೇ. ಆದರೆ, ಇದನ್ನು ತಪ್ಪಾಗಿ ವ್ಯಾಖ್ಯಾನ ಮಾಡಲಾಗಿದೆ. ಮತ್ತು ಸೋಷಿಯಲ್​ ಮೀಡಿಯಾದಲ್ಲಿ ಪ್ರಸಾರ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಉಳಿದ ಫ್ಯಾನ್ಸ್​ ಸಂಘಗಳು ಕೂಡ ಇದನ್ನೇ ಹೇಳಿದ್ದು, ಸೂರ್ಯ ಅವರಿಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ಹೀಗಾಗಿ ಅವರ ಎಂಟ್ರಿಗೆ ಸಂಬಂಧಿಸಿದ ಸುದ್ದಿಗಳು ಸುಳ್ಳು ಎಂದಿವೆ.
ಸೂರ್ಯ ರಾಜಕೀಯ ಪ್ರವೇಶಿಸುವ ವದಂತಿಗಳು ಹಿಂದೆಯೂ ಹಲವು ಬಾರಿ ಹರಿದಾಡಿತ್ತು. ಕಳೆದ ವರ್ಷ ಸೂರ್ಯ ಅವರ ಅಗರಂ ಫೌಂಡೇಶನ್ ಆಯೋಜಿಸಿದ್ದ ಕಾರ್ಯಕ್ರಮದ ಬಳಿಕ, ಸ್ಟಾರ್​ ಹೀರೋ ರಾಜಕೀಯ ಪ್ರವೇಶಿಸುತ್ತಾರೆ ಎಂಬ ಸುದ್ದಿಗಳು ವ್ಯಾಪಕವಾಗಿ ಸದ್ದು ಮಾಡಿದವು. ಆದರೆ, ಇದನ್ನು ತಳ್ಳಿಹಾಕಿದ ಸೂರ್ಯ ಅವರ ಅಭಿಮಾನಿ ಸಂಘ, ವದಂತಿಗಳು ಆಧಾರರಹಿತ ಮತ್ತು ಸೂರ್ಯ ಅವರ ಆಲೋಚನೆಗಳಿಗೆ ವಿರುದ್ಧವಾಗಿವೆ ಎಂದಿತು. ಆದರೀಗ, ಮತ್ತೊಮ್ಮೆ ಸೂರ್ಯ ರಾಜಕೀಯ ವಿಷಯ ಹೊರಬಿದ್ದಿರುವುದಕ್ಕೆ ಯಾರೇನು ಹೇಳುತ್ತಾರೆ? ಎಂಬುದನ್ನು ಸ್ವತಃ ಸೂರ್ಯ ಅವರೇ ಇದಕ್ಕೆ ಪ್ರತಿಕ್ರಿಯೆ ನೀಡ್ತಾರಾ? ಎಂಬುದನ್ನು ಕಾದು ತಿಳಿಯಬೇಕಿದೆ,(ಏಜೆನ್ಸೀಸ್).