ಚೆನ್ನೈ: ದಕ್ಷಿಣ ಭಾರತ ಸಿನಿರಂಗದ ಸ್ಟಾರ್ ನಟ ಸೂರ್ಯ ( Actor Suriya ), ತಮ್ಮ ಚಲನಚಿತ್ರ ಆಯ್ಕೆಗಳ ಮೂಲಕವೇ ಚಿತ್ರಪ್ರೇಮಿಗಳನ್ನು ಸದಾ ಅಚ್ಚರಿಗೊಳಿಸುವ ವಿಶೇಷ ಕಲಾವಿದ. ಒಂದೇ ಮಾದರಿಯ ಪಾತ್ರಗಳಿಗೆ ಸೀಮಿತವಾಗದೆ, ವಿಭಿನ್ನ ಭಾಷೆಯ ನಿರ್ದೇಶಕರೊಂದಿಗೆ ಕೈಜೋಡಿಸಿ ವೈವಿಧ್ಯಮಯ ಕಥಾಹಂದರಗಳನ್ನು ಆಯ್ಕೆ ಮಾಡಿಕೊಳ್ಳುವ ಸೂರ್ಯ ಅವರ ಧೈರ್ಯಕ್ಕೆ ಇದೀಗ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರರಂಗದ ಮೂವರು ಪ್ರತಿಭಾವಂತ ನಿರ್ದೇಶಕರ ಜತೆಗೂಡಿ ಸೂರ್ಯ ಅವರು ನಟಿಸಿದ ಇತ್ತೀಚಿನ ಮೂರು ಸಿನಿಮಾಗಳಾದ 'ಕರುಪ್ಪು', 'ವಿಶ್ವನಾಥ್ ಆಂಡ್ ಸನ್ಸ್' ಹಾಗೂ 'ಸೀನ್' - ವಿಭಿನ್ನ ಶೈಲಿ (Genres) ಮತ್ತು ಲುಕ್ಗಳಿಂದ ಪ್ರೇಕ್ಷಕರನ್ನು ಅಪಾರವಾಗಿ ಆಕರ್ಷಿಸಿದೆ. ಅಲ್ಲದೆ, ಗಲ್ಲಾಪೆಟ್ಟಿಗೆಯಲ್ಲಿ ಸರಣಿ ಯಶಸ್ಸು ಕಾಣುವ ಮೂಲಕ ಸೂರ್ಯ ಅವರ ವೃತ್ತಿಜೀವನಕ್ಕೆ ಹೊಸ ಕಳೆ ತಂದಿತ್ತಿವೆ.
ಮೊದಲನೆಯದಾಗಿ, ತಮಿಳು ನಿರ್ದೇಶಕ ಆರ್ಜೆ ಬಾಲಾಜಿ ನಿರ್ದೇಶನದ 'ಕರುಪ್ಪು' ಚಿತ್ರವು ಭಕ್ತಿಪ್ರಧಾನ ಕಾಲ್ಪನಿಕ ಸಾಹಸಮಯ ಕಥಾಹಂದರವನ್ನು ಹೊಂದಿದ್ದು, ಸೂರ್ಯ ಅವರ ಮಾಸ್ ಅವತಾರವನ್ನು ಪ್ರೇಕ್ಷಕರ ಮುಂದೆ ಅನಾವರಣಗೊಳಿಸಿತು. ಈ ಚಿತ್ರದಲ್ಲಿ ಸೂರ್ಯ ಅವರ ನಟನೆ ಹಾಗೂ ಪಾತ್ರದ ವಿನ್ಯಾಸವು ಅಭಿಮಾನಿಗಳನ್ನು ರೋಮಾಂಚನಗೊಳಿಸಿತ್ತು. ಮಾಸ್ ಸಾಹಸ ದೃಶ್ಯಗಳ ಜತೆಗೆ ಭಕ್ತಿ ಮತ್ತು ಸಸ್ಪೆನ್ಸ್ ಅಂಶಗಳನ್ನು ಸಂಯೋಜಿಸಿದ್ದ ಈ ಚಿತ್ರವು ಪ್ರೇಕ್ಷಕರಿಂದ ಅಭೂತಪೂರ್ವ ಬೆಂಬಲ ಪಡೆದು, ಗಲ್ಲಾಪೆಟ್ಟಿಗೆಯಲ್ಲಿ ಕಲೆಕ್ಷನ್ ಸುನಾಮಿ ಎಬ್ಬಿಸಿತ್ತು.
ಎರಡನೆಯದಾಗಿ, ತೆಲುಗಿನ ಖ್ಯಾತ ನಿರ್ದೇಶಕ ವೆಂಕಿ ಅಟ್ಲೂರಿ ಜತೆಗೂಡಿ ಮಾಡಿದ 'ವಿಶ್ವನಾಥ್ ಆಂಡ್ ಸನ್ಸ್' ಸಿನಿಮಾ ಸಂಪೂರ್ಣವಾಗಿ ವಿಭಿನ್ನ ಹಾದಿಯನ್ನು ತುಳಿಯಿತು. ಇದು ಬಾಡಿಗೆ ತಾಯ್ತನದ (Surrogacy) ಸುತ್ತ ಸಾಗುವ ಅತ್ಯಂತ ಭಾವುಕ ಹಾಗೂ ಸ್ವಾರಸ್ಯಕರ ಸನ್ನಿವೇಶಗಳನ್ನು ಒಳಗೊಂಡ ಪ್ರಬುದ್ಧ ಕೌಟುಂಬಿಕ ಕಥಾನಕವಾಗಿದೆ. ಆ್ಯಕ್ಷನ್ ಅವತಾರದಿಂದ ಹೊರಬಂದು ಅತ್ಯಂತ ಸರಳ ಹಾಗೂ ನೈಜ ಅಭಿನಯ ನೀಡಿದ ಸೂರ್ಯ ಅವರ ನಟನಾ ಕೌಶಲ್ಯ ಮತ್ತು ವಿಭಿನ್ನ ಲುಕ್, ಕುಟುಂಬ ಸಮೇತ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.
ಮೂರನೆಯದಾಗಿ, ಮಲಯಾಳಂನ ಯಶಸ್ವಿ ನಿರ್ದೇಶಕ ಜಿತು ಮಾಧವನ್ ನಿರ್ದೇಶನದಲ್ಲಿ ಮೂಡಿಬಂದ 'ಸೀನ್' (Scene) ಚಿತ್ರವು ಕಾಮಿಡಿ, ರೋಚಕ ಟ್ವಿಸ್ಟ್ಗಳು ಹಾಗೂ ಆ್ಯಕ್ಷನ್ ತುಂಬಿದ ಕ್ರೈಮ್ ಥ್ರಿಲ್ಲರ್ ಚಿತ್ರವಾಗಿದೆ. ಇದರಲ್ಲಿ ಡಿಎಸ್ಪಿ ಇನ್ಬರಾಜ್ ಪಾತ್ರದಲ್ಲಿ ಗಂಭೀರ ಹಾಗೂ ಹಾಸ್ಯಮಯ ಛಾಯೆಗಳೆರಡನ್ನೂ ಅದ್ಭುತವಾಗಿ ಸೂರ್ಯ ನಿಭಾಯಿಸಿದ್ದು, ಅವರ ಪಾತ್ರ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ. ಹಾರರ್-ಕಾಮಿಡಿ ಮತ್ತು ಥ್ರಿಲ್ಲರ್ ಶೈಲಿಗೆ ಹೆಸರಾದ ಜಿತು ಮಾಧವನ್ ಅವರ ನಿರೂಪಣೆಯಲ್ಲಿ ಸೂರ್ಯ ನಟಿಸಿರುವುದು ಅಭಿಮಾನಿಗಳಿಗೆ ಸಂಪೂರ್ಣ ಹೊಸ ಅನುಭವ ನೀಡಿದೆ.
ಯಾವುದೇ ಒಂದು ಸುರಕ್ಷಿತ ಗಡಿ ಅಥವಾ ಕಟ್ಟುಪಾಡಿಗೆ ಸೀಮಿತವಾಗದೆ, ವಿಭಿನ್ನ ಭಾಷಾ ಶೈಲಿಯ ನಿರ್ದೇಶಕರೊಂದಿಗೆ ಕೆಲಸ ಮಾಡಿ ಸಿನಿಮೀಯ ಗಡಿಗಳನ್ನು ವಿಸ್ತರಿಸುತ್ತಿರುವ ಸೂರ್ಯ ಅವರ ಈ ಪ್ರಯೋಗಾತ್ಮಕ ಮನೋಭಾವಕ್ಕೆ ಸಿನಿರಂಗದ ಪ್ರಮುಖರು ಹಾಗೂ ಅಭಿಮಾನಿಗಳು ಜೈ ಎಂದಿದ್ದಾರೆ. ಒಂದೇ ಅವಧಿಯಲ್ಲಿ 3 ಬೇರೆ ಬೇರೆ ಭಾಷೆಯ ನಿರ್ದೇಶಕರ ಜೊತೆಗೂಡಿ 3 ಭಿನ್ನ ಪ್ರಕಾರದ ಹಿಟ್ ಸಿನಿಮಾಗಳನ್ನು ನೀಡುವುದು ಸುಲಭದ ಮಾತಲ್ಲ. ಸೂರ್ಯ ಅವರ ಪ್ರಯತ್ನ ಮತ್ತು ಯಶಸ್ಸು ದಕ್ಷಿಣ ಭಾರತೀಯ ಚಿತ್ರರಂಗದ ಗಡಿಗಳನ್ನು ದಾಟಿ ಅವರ ಪ್ಯಾನ್-ಇಂಡಿಯಾ ಜನಪ್ರಿಯತೆಯನ್ನು ಮತ್ತಷ್ಟು ಎತ್ತರಕ್ಕೆ ಒಯ್ದಿದೆ, (ಏಜೆನ್ಸೀಸ್).