ತಮಿಳು ನಟ ಸೂರ್ಯ ಅವರ 48ನೇ ಸಿನಿಮಾ ಘೋಷಣೆ
- ಸೂರ್ಯ ಅಭಿನಯಿಸಲಿರುವ 48ನೇ ಸಿನಿಮಾ ಘೋಷಣೆ
- ಹೊಂಬಾಳೆ ಬ್ಯಾನರ್ನಲ್ಲಿ ಮೂಡಿಬರಲಿರುವ ಚಿತ್ರಕ್ಕೆ ಟಿಜೆ ಜ್ಞಾನವೇಲ್ ಆ್ಯಕ್ಷನ್ ಕಟ್
- ಸೂರ್ಯ ಹೊಸ ಚಿತ್ರಕ್ಕೆ ಇನ್ನೂ ಇಟ್ಟಿಲ್ಲ ಟೈಟಲ್, ನಾಯಕಿ ಫಿಕ್ಸ್
ಚೆನ್ನೈ: 'ಕರುಪ್ಪು' ಚಿತ್ರದ ಯಶಸ್ಸಿನ ಬಳಿಕ 'ವಿಶ್ವನಾಥ್ ಅಂಡ್ ಸನ್ಸ್' ಬಿಡುಗಡೆಗೆ ಸಜ್ಜಾಗಿರುವ ತಮಿಳು ನಟ ಸೂರ್ಯ ಅವರ ಮುಂದಿನ ಚಿತ್ರದ ಬಗ್ಗೆ ಹೊಸ ಅಪ್ಡೇಟ್ ಹೊರಬಿದ್ದಿದೆ.
'ಸಿಂಗಂ' ಸೂರ್ಯ ಅಭಿನಯಿಸಲಿರುವ 48ನೇ ಹೊಸ ಸಿನಿಮಾದ ನಿರ್ಮಾಣ ಜವಾಬ್ದಾರಿಯನ್ನು ಕನ್ನಡದ ಹೆಸರಾಂತ ಸಂಸ್ಥೆ ಹೊಂಬಾಳೆ ಫಿಲಂಸ್ ವಹಿಸಿಕೊಂಡಿದ್ದು, ಬ್ಲಾಕ್ಬಸ್ಟರ್ 'ಜೈಭೀಮ್' ಚಿತ್ರದ ನಿರ್ದೇಶಕರಾದ ಟಿಜೆ ಜ್ಞಾನವೇಲ್ ಅವರೇ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಮೂಲಕ ಮತ್ತೆ ಸೂರ್ಯ ಮತ್ತು ಜ್ಞಾನವೇಲ್ ಜೋಡಿ ಒಂದಾಗಿದ್ದು, ಹೊಸ ಪ್ರಾಜೆಕ್ಟ್ಗೆ ನಾಯಕಿ ಕೂಡ ಫಿಕ್ಸ್ ಆಗಿದ್ದಾರೆ.
ಈ ಕುರಿತು ಹೊಂಬಾಳೆ ಫಿಲಂಸ್ ಅಧಿಕೃತ ಮಾಹಿತಿ ಹಂಚಿಕೊಂಡಿದ್ದು, ಮುಖ್ಯಭೂಮಿಕೆಯಲ್ಲಿ ನಟ ಸೂರ್ಯ ಮತ್ತು ನಾಯಕಿಯಾಗಿ 'ಡ್ರ್ಯಾಗನ್' ಖ್ಯಾತಿಯ ನಟಿ ಕಯಾದು ಲೋಹರ್ ಅಭಿನಯಿಸಲಿದ್ದಾರೆ ಎಂದು ತಿಳಿಸಿದೆ. ಟಿ.ಜೆ. ಜ್ಞಾನವೇಲ್ ನಿರ್ದೇಶನದಲ್ಲಿ ಮೂಡಿಬರಲಿರುವ ಈ ಚಿತ್ರಕ್ಕೆ ಸಾಯಿ ಅಭ್ಯಂಕರ್ ಸಂಗೀತ ಸಂಯೋಜಿಸಲಿದ್ದಾರೆ. ಎಸ್.ಆರ್. ಕಥಿರ್ ಮತ್ತು ಫಿಲೋಮಿನ್ ರಾಜ್ ಛಾಯಾಗ್ರಹಣ ಮತ್ತು ಸಂಕಲನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಸಿನಿ ವರದಿಗಳ ಪ್ರಕಾರ, ಸೂರ್ಯ ನಟಿಸಲಿರುವ ಈ ಚಿತ್ರವು ಜನಪ್ರಿಯ 5 ರೂ. ಡಾಕ್ಟರ್ ಅವರ ಜೀವನ ಆಧರಿತ ಎನ್ನಲಾಗಿದೆ. ಆದರೆ, ಈ ಕುರಿತಾಗಿ ಇಲ್ಲಿಯವರೆಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿಯೂ ಹೊರಬಿದ್ದಿಲ್ಲ. ತಮ್ಮ ನೆಚ್ಚಿನ ನಟನ ಹೊಸ ಸಿನಿಮಾ ಬಗ್ಗೆ ಖುಷಿ ವ್ಯಕ್ತಪಡಿಸಿರುವ ಸೂರ್ಯ ಅವರ ಅಭಿಮಾನಿಗಳು, ಚಿತ್ರದ ಕಥೆ ಮತ್ತು ಟೈಟಲ್ ಏನಿರಬಹುದು ಎಂಬ ಕುತೂಹಲದಿಂದ ಕಾಯತೊಡಗಿದ್ದಾರೆ,(ಏಜೆನ್ಸೀಸ್).