ಬೆಂಗಳೂರು:‘ಮ್ಯಾಕ್ಸ್’ ಯಶಸ್ಸಿನ ಬಳಿಕ ನಟ ಸುದೀಪ್ ಮತ್ತಷ್ಟು ಬಿಜಿಯಾಗುತ್ತಿದ್ದಾರೆ. ಒಂದು ಕಡೆ ‘ಬಿಗ್‌ಬಾಸ್’ ರಿಯಾಲಿಟಿ ಶೋ ನಿರೂಪಣೆಗೆ ಮರಳಿದ್ದು, ಇನ್ನೊಂದು ಕಡೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನೂ ಒಪ್ಪಿಕೊಳ್ಳುತ್ತಿದ್ದಾರೆ. ಸದ್ಯ ಅನೂಪ್ ಭಂಡಾರಿ ನಿರ್ದೇಶನದ ‘ಬಿಲ್ಲಾ ರಂಗ ಬಾಷಾ’ ಶೂಟಿಂಗ್ ನಡೆಯುತ್ತಿದ್ದು, ಅದರ ನಡುವೆ ಮತ್ತೊಂದು ಹೊಸ ಸಿನಿಮಾ ಘೋಷಿಸಿದ್ದಾರೆ. ‘ಮ್ಯಾಕ್ಸ್’ ನಿರ್ದೇಶಕ ವಿಜಯ್ ಕಾರ್ತಿಕೇಯನ್ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಚಿತ್ರಕ್ಕೆ ‘ಕೆ47’ ಎಂದು ತಾತ್ಕಾಲಿಕ ಟೈಟಲ್ ಇಡಲಾಗಿದ್ದು, ನಾಳೆಯಿಂದ ಶೂಟಿಂಗ್ ಆರಂಭವಾಗಲಿದೆ. ಈ ಮಧ್ಯೆ, ‘ಮ್ಯಾಕ್ಸ್’ ಯಶಸ್ಸಿನ ಬಳಿಕ ಮತ್ತೆ ಕಾಂಬಿನೇಷನ್ ಮರಳಿರುವ ಕಾರಣ ಇದು ‘ಮ್ಯಾಕ್ಸ್-2’ ಇರಬಹುದು ಎಂಬ ಸುದ್ದಿ ಹರಡಿತ್ತು. ಈ ಬಗ್ಗೆ ಸುದೀಪ್ ಸ್ಪಷ್ಟಪಡಿಸಿದ್ದು, ‘ಇದು ‘ಮ್ಯಾಕ್ಸ್-2’ ಅಲ್ಲ. ಬದಲಾಗಿ ಬೇರೆ ಕಥೆ. ಆದರೆ, ಬಹುತೇಕ ಅದೇ ತಂಡ ಮುಂದುವರಿಯುತ್ತದೆ. ‘ಮ್ಯಾಕ್ಸ್’ ಬಳಿಕ ಅದರ ಸೀಕ್ವೆಲ್‌ಗೆ ಯೋಚನೆ ಮಾಡಿದ್ದೆವು. ಕಥೆ ಸಾಗುತ್ತಾ ಬೇರೆಯೇ ಹಾದಿ ಹಿಡಿಯಿತು. ಹಾಗಾಗಿ, ಅದನ್ನು ಅಲ್ಲಿಗೆ ಬಿಟ್ಟೆವು. ಅದೇ ವೇಳೆ ವಿಜಯ್, ಈ ಕಥೆ ಹೇಳಿದರು. ನನಗೆ ಇಷ್ಟವಾಯಿತು. ಇಲ್ಲಿ ಮುತ್ತತ್ತಿ ಸತ್ಯರಾಜ್ ಪಾತ್ರದ ಸ್ಪರ್ಶದ ಜತೆಗೆ ಆಶ್ಚರ್ಯಕಾರಿ ಅಂಶಗಳನ್ನು ಕಾಣಬಹುದು. ನಾಳೆಯಿಂದ ಶೂಟಿಂಗ್ ಆರಂಭಿಸುತ್ತಿದ್ದೇವೆ. ಇದೇ ಡಿ.25ಕ್ಕೆ ಮತ್ತೆ ರಿಲೀಸ್‌ಗೆ ಯೋಚಿಸುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.
ಮೂರು ಲೇಯರ್ ಕಥೆ:ನಿರ್ದೇಶಕ ವಿಜಯ್ ಕಾರ್ತಿಕೇಯ್ ಬಗ್ಗೆ ಸುದೀಪ್, ‘ವಿಜಯ್ ಕಥೆಗೆ ವೇಗ ನೀಡುತ್ತಾರೆ. ಎಲ್ಲವೂ ಒಂದು ಕ್ಷಣಾರ್ಧದಲ್ಲಿ ಮುಗಿದಂತೆ ಭಾಸವಾಗುತ್ತದೆ. ಅದಕ್ಕೆ ಅವರು ನನಗೆ ಇಷ್ಟ. ಈ ಬಾರಿ ಅವರು ಕಥೆ ಬರೆದುಕೊಂಡು ಬಂದಾಗ ಬದಲಾವಣೆ ಮಾಡುವಂತಹದ್ದು ಏನಿರಲಿಲ್ಲ. ಈ ಎಂಟು ತಿಂಗಳಲ್ಲಿ ಅವರು ಕನ್ನಡದ ಸಿನಿಮಾಗಳ ಕಂಟೆಂಟ್ ಏನು ಎಂಬುದನ್ನು ಅರಿತುಕೊಂಡು ಹಿಡಿತ ಸಾಧಿಸಿದ್ದಾರೆ. ‘ಮ್ಯಾಕ್ಸ್’ ಒಂದೇ ಲೇಯರ್ ಸಿನಿಮಾ. ಆದರೆ, ‘ಕೆ47’ನಲ್ಲಿ ಮೂರು ಲೇಯರ್ ಇದೆ. ತಮಿಳಿನ ಉದಯೋನ್ಮುಖ ನಿರ್ದೇಶಕನನ್ನು ಕನ್ನಡ ಪ್ರೇಕ್ಷಕರು ಕೈ ಹಿಡಿದಿದ್ದಾರೆ. ಒಂದು ಸಿನಿಮಾ ಹಿಟ್ ಆದ ಬಳಿಕ ಅವರು ತಮ್ಮ ಭಾಷೆಗೆ ಹೋಗದೆ, ಮತ್ತೆ ನಮ್ಮಲ್ಲಿಯೇ ಮುಂದುವರಿದಿರುವುದು ಮೆಚ್ಚುವಂತದ್ದು’ ಎಂದು ಗುಣಗಾನ ಮಾಡಿದರು.
ಮಾಸ್ ಟೀಸರ್: ನಟ ಸುದೀಪ್ 47ನೇ ಚಿತ್ರವನ್ನು ವಿಶೇಷ ಟೀಸರ್ ಮೂಲಕ ಘೋಷಿಸಲಾಗಿದೆ. ತಮಿಳಿನ ಸತ್ಯಜ್ಯೋತಿ ಫಿಲಂಸ್ ಈ ಚಿತ್ರದ ನಿರ್ಮಾಣದ ಹೊಣೆ ಹೊತ್ತಿದೆ. 1986ರಲ್ಲಿ ಡಾ. ವಿಷ್ಣುವರ್ಧನ್ ಅಭಿನಯದ ‘ಸತ್ಯಜ್ಯೋತಿ’ ಎಂಬ ಚಿತ್ರವನ್ನು ನಿರ್ಮಿಸಿದ್ದ ಈ ಸಂಸ್ಥೆ ಇದೀಗ 39 ವರ್ಷಗಳ ಬಳಿಕ ಮತ್ತೆ ಸುದೀಪ್ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ರಿ-ಎಂಟ್ರಿ ಕೊಟ್ಟಿದೆ. ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಸಿನಿಮಾ ಮೂಡಿಬರಲಿದೆ.