ಬೆಂಗಳೂರು: ಶ್ರೀಮುರಳಿ ಅಭಿನಯದ ‘ಮದಗಜ’ ಚಿತ್ರದ ಕೊನೆಯ ಹಂತದ ಚಿತ್ರೀಕರಣ ಸೋಮವಾರ ರಾತ್ರಿಯಷ್ಟೇ, ಎಚ್ಎಂಟಿಯಲ್ಲಿ ಪ್ರಾರಂಭವಾಗಿತ್ತು. ಅರ್ಜುನ್ ಅವರ ಸಾಹಸ ನಿರ್ದೇಶನದಲ್ಲಿ ಒಂದು ಫೈಟ್ವೊಂದರ ಚಿತ್ರೀಕರಣ ನಡೆಯುತ್ತಿತ್ತು.
ಹೀಗಿರುವಾಗಲೇ ಮಂಗಳವಾರ ರಾತ್ರಿ ಶ್ರೀಮುರಳಿ ಕಾಲಿಗೆ ಪೆಟ್ಟುಬಿದ್ದು, ವೈದ್ಯರು 15 ದಿನಗಳ ವಿಶ್ರಾಂತಿ ಹೇಳಿದ ಹಿನ್ನೆಲೆಯಲ್ಲಿ, ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ. ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ನಿರ್ದೇಶಕ ಮಹೇಶ್, ‘ಶ್ರೀಮುರಳಿ ಅವರ ಮೇಲೆ 10 ಜನ ಅಟ್ಯಾಕ್ ಮಾಡುವ ಮತ್ತು ಅವರೆಲ್ಲರಿಂದ ತಪ್ಪಿಸಿಕೊಳ್ಳುವ ದೃಶ್ಯವನ್ನು ಚಿತ್ರೀಕರಣ ಮಾಡುತ್ತಿದ್ದೆವು.
ಈ ಸಂದರ್ಭದಲ್ಲಿ, ಒಬ್ಬರಿಂದ ತಪ್ಪಿಸಿಕೊಳ್ಳು ವುದಕ್ಕೆ ಹೋಗಿ ಬಿದ್ದು, ಮಂಡಿಗೆ ಏಟಾಗಿದೆ. ತಕ್ಷಣವೇ ಅವರನ್ನು ಫೋರ್ಟಿಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ವೈದ್ಯರು ಅವರಿಗೆ 15 ದಿನಗಳ ರೆಸ್ಟ್ ಹೇಳಿದ್ದಾರೆ’ ಎನ್ನುತ್ತಾರೆ ಅವರು. ಸದ್ಯಕ್ಕೆ ಚಿತ್ರೀಕರಣ ಸ್ಥಗಿತಗೊಳಿಸಲಾಗಿದ್ದು, ಶ್ರೀಮುರಳಿ ಹುಷಾರಾಗಿ ಬಂದ ಮೇಲೆ ಪುನಃ ಚಿತ್ರೀಕರಣ ಮುಂದುವರೆಸಲಾಗುತ್ತದಂತೆ. ಒಂದು ಫೈಟ್ ಮತ್ತು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದ್ದು, 10 ದಿನಗಳ ಚಿತ್ರೀಕರಣ ಮುಗಿದರೆ ಚಿತ್ರ ಮುಗಿದಂತೆ ಎನ್ನುತ್ತಾರೆ ಮಹೇಶ್. ಮುರಳಿಗೆ ನಾಯಕಿಯಾಗಿ ಆಶಿಕಾ ರಂಗನಾಥ್ ನಟಿಸಿದ್ದು, ಮಿಕ್ಕಂತೆ ಜಗಪತಿ ಬಾಬು, ಚಿಕ್ಕಣ್ಣ ಸೇರಿ ಹಲವರು ನಟಿಸಿದ್ದಾರೆ.