ಶ್ರೀರಾಮ್​ 
ಸಿನಿವಾಣಿ

Shree Ram : ಪ್ರೇಮದ ಊರಲಿ ಶ್ರೀಕೃಷ್ಣನಾದ ಶ್ರೀರಾಮ್​

"ನೀಲಿ', "ಇಷ್ಟದೇವತೆ' ಸೇರಿ ಕೆಲ ಧಾರಾವಾಹಿಗಳಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ, "ಇರುವುದೆಲ್ಲವ ಬಿಟ್ಟು', "ಗಜಾನನ ಆ್ಯಂಡ್​ ಗ್ಯಾಂಗ್​', "ಹೊಂದಿಸಿ ಬರೆಯಿರಿ' ಚಿತ್ರಗಳಲ್ಲಿ ನಾಯಕನಾಗಿ ನಟಿಸಿರುವ ನಟ ಶ್ರೀಮಹಾದೇವ್​ ಇದೀಗ "ಪ್ರೇಮದ ಊರಲಿ' ಚಿತ್ರದ ಮೂಲಕ "ಶ್ರೀರಾಮ್​' ಎಂದು ಹೆಸರು ಬದಲಿಸಿಕೊಂಡಿದ್ದಾರೆ.

ಬೆಂಗಳೂರು: "ನೀಲಿ', "ಇಷ್ಟದೇವತೆ' ಸೇರಿ ಕೆಲ ಧಾರಾವಾಹಿಗಳಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ, "ಇರುವುದೆಲ್ಲವ ಬಿಟ್ಟು', "ಗಜಾನನ ಆ್ಯಂಡ್​ ಗ್ಯಾಂಗ್​', "ಹೊಂದಿಸಿ ಬರೆಯಿರಿ' ಚಿತ್ರಗಳಲ್ಲಿ ನಾಯಕನಾಗಿ ನಟಿಸಿರುವ ನಟ ಶ್ರೀಮಹಾದೇವ್​ ಇದೀಗ "ಪ್ರೇಮದ ಊರಲಿ' ಚಿತ್ರದ ಮೂಲಕ "ಶ್ರೀರಾಮ್​' ಎಂದು ಹೆಸರು ಬದಲಿಸಿಕೊಂಡಿದ್ದಾರೆ. ಇದು "ಅ' ಖ್ಯಾತಿಯ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮನೋಜ್​ ಕುಮಾರ್​ ನಿರ್ದೇಶನದ ಚಿತ್ರವಾಗಿದ್ದು, ಇಲ್ಲಿ ಹಳ್ಳಿ ಹುಡುಗ ಸಂತು ಪಾತ್ರದಲ್ಲಿ ಶ್ರೀರಾಮ್​ ಕಾಣಿಸಿಕೊಳ್ಳಲಿದ್ದಾರೆ. ಶುಕ್ರವಾರ (ಸೆ. 25) ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರಲಿದ್ದು, "ನಿರ್ದೇಶಕರು ಈ ಸಿನಿಮಾದಿಂದ ನೀವು ಬೇರೆ ಹೆಸರಿಟ್ಟುಕೊಂಡರೆ ಹೇಗೆ? ಎಂದು ಕೇಳಿದರು. ಶ್ರೀ ಅಂತ ಹೆಚ್ಚು ಮಂದಿ ನನ್ನನ್ನು ಕರೆಯುತ್ತಾರೆ. ಹೀಗಾಗಿ ಅದು ಹೆಸರಿನಲ್ಲಿರಲಿ ಎಂದೆ. ಎಲ್ಲರೂ ತುಂಬ ಯೋಚಿಸಿ ಶ್ರೀರಾಮ್​ ಎಂದರು. ಮನೋಜ್​ ಅವರಂತಹ ನಿರ್ದೇಶಕರು, ಇಂತಹ ಚಿತ್ರತಂಡ, ತಾರಾಗಣ ಸಿಕ್ಕರೆ ನಾನು ಏನು ಬೇಕಾದರೂ ಮಾಡಲು ರೆಡಿ. ಕೊನೆಗೆ ಸಿನಿಮಾ ನೋಡಿದ ಜನರ ಮನಸ್ಸಿನಲ್ಲಿ ನನ್ನ ಪಾತ್ರದ ಹೆಸರು ಸಂತು ನೆನಪಿನಲ್ಲಿ ಉಳಿದರೆ ಅಷ್ಟು ಸಾಕು' ಎನ್ನುತ್ತಾರೆ. ಶ್ರೀರಾಮ್​ ಜತೆ ರಂಗಾಯಣ ರು, ತಪಸ್ವಿನಿ ಪೂಣಚ್ಚ ಮತ್ತು ರಮಿಕಾ ಶಿವು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

ಪ್ರೇಮದ ಊರಲಿ ಚಿತ್ರದ ಪೋಸ್ಟರ್

ಹಾಲು ಕರೆದಿದ್ದೇನೆ, ಸಗಣಿ ಸಾರಿಸಿದ್ದೇನೆ

ಪ್ರಾರಂಭದಲ್ಲಿ ಶ್ರೀರಾಮ್​ ಹಳ್ಳಿ ಹುಡುಗನ ಪಾತ್ರಕ್ಕೆ ಹೊಂದಲ್ಲ ಎಂದಿದ್ದರಂತೆ ನಿರ್ದೇಶಕ ಮನೋಜ್​. ಹೀಗಾಗಿ ಶ್ರೀರಾಮ್​, "ಇದುವರೆಗೂ ನಾನು ಸಿನಿಮಾಗಳಲ್ಲಿ ನಟಿಸಿದ್ದೇನೆ. ಆದರೆ, ಈ ಚಿತ್ರದಲ್ಲಿ ಪಾತ್ರವನ್ನು ಜೀವಿಸಿದ್ದೇನೆ. ಹಳ್ಳಿಹಳ್ಳಿಗಳಿಗೆ ಹೋಗಿ, ಅಲ್ಲೇ ಒಂದು ತಿಂಗಳು ವಾಸ ಮಾಡಿ, ಹಾಲು ಕರೆಯವುದು, ಸಗಣಿ ಸಾರಿಸುವುದು, ಬೇಸಾಯ... ಹೀಗೆ ಹಳ್ಳಿ ಹುಡುಗರ ಜೀವನವನ್ನು ಅನುಭವಿಸಿದ್ದೇನೆ. ನಿವೃತ್ತಿಯಾದ ಬಳಿಕ ತೋಟ ಮಾಡಿಕೊಂಡು, ಅದರಲ್ಲಿ ಮನೆ ಕಟ್ಟಿಸಿಕೊಂಡು ಇರಬೇಕು ಅಂತ ಅಂದುಕೊಂಡಿದ್ದೆ. ಆದರೆ, ಈ ಸಿನಿಮಾ ಬಳಿಕ ನನ್ನ ಆಲೋಚನೆ ಬದಲಾಗಿದೆ. ಅಲ್ಲಿಯವರೆಗೂ ಕಾಯದೇ ಈಗಲೇ ತೋಟ ಮಾಡಬೇಕು ಅಂತ ಅಂದುಕೊಂಡಿದ್ದೇನೆ' ಎಂದು ಹೇಳಿಕೊಳ್ಳುತ್ತಾರೆ.

ಪ್ರೇಮದ ಊರಲಿ ಪೋಸ್ಟರ್

ರೈತರಿಗಷ್ಟೇ ಅಲ್ಲ, ಕಲಾವಿದರಿಗೂ ಇಲ್ಲ!

"ರೈತರಿಗೆ ಹೇಗೆ ಹೆಣ್ಣು ಸಿಗುತ್ತಿಲ್ಲವೋ, ಹಾಗೇ ಕಲಾವಿದರಿಗೂ ಹೆಣ್ಣು ಸಿಗುತ್ತಿಲ್ಲ' ಎನ್ನುವ ಶ್ರೀರಾಮ್​, ಎಲ್ಲರೂ "ತಮ್ಮ ಜೀವನ ಸುರತವಾಗಿರಬೇಕು ಅಂತ ಬಯಸುತ್ತಾರೆ. ಆದರೆ, ರೈತರಂತೆಯೇ ಕಲಾವಿದರ ಜೀವನದಲ್ಲೂ ಏರಿಳಿತಗಳು ಹೆಚ್ಚು. ಯಾವ ಕೆಲಸಕ್ಕೆ ಹೋದರೂ, ತಿಂಗಳಿಗೊಮ್ಮೆ ಸಂಬಳ ಆಗುತ್ತದೆ. ಆದರೆ, ಚಿತ್ರರಂಗ ಹಾಗಲ್ಲ. ಇದು ಕನಸಿನ ಮೇಲೆ ನಿಂತಿರುವ ಪ್ಯಾಷನ್​. ಗೆಲುವು ಯಾವಾಗ? ಹೇಗೆ? ಬರುತ್ತದೆ ಅಂತ ಗೊತ್ತಿಲ್ಲ. ಆದರೆ, ನಿಷ್ಠೆಯಿಂದ ಕೆಲಸ ಮಾಡುತ್ತಿರಬೇಕು' ಎನ್ನುತ್ತಾರೆ.