ಸಿನಿವಾಣಿ

ದೇವರು ನಾಯಕಿಯರ ಆಯ್ಕೆ ಮಾಡಿದನು! ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಶರಣ್​, ಶ್ರುತಿ ಸಹೋದರಿ ಪುತ್ರಿ ಕೀರ್ತಿ ಕೃಷ್ಣ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

"ಒಂದು ಸರಳ ಪ್ರೇಮಕಥೆ' ಚಿತ್ರದ ಯಶಸ್ಸಿನ ಬೆನ್ನಲ್ಲೇ ನಿರ್ದೇಶಕ ಸಿಂಪಲ್​ ಸುನಿ ಹೊಸ ಕಥೆ ಮತ್ತು ಹೊಚ್ಚ ಹೊಸ ಪ್ರತಿಭೆಗಳ ತಂಡದೊಂದಿಗೆ ವಾಪಸ್ಸಾಗಿದ್ದಾರೆ. ಚಿತ್ರದ ಹೆಸರು "ದೇವರು ರುಜು ಮಾಡಿದನು'. ಹೊಸ ಟ್ಯಾಲೆಂಟ್​ಗಳನ್ನು ಪರಿಚಯಿಸುವಲ್ಲಿ ಮುಂಚೂಣಿಯಲ್ಲಿರುವ ಸುನಿ, "… ಪ್ರೇಮಕಥೆ'ಯ ಮೂಲಕ ತಮಿಳಿನ "ವಿಕ್ರಮ್​' ಚಿತ್ರದ ಖ್ಯಾತಿಯ ಸ್ವಾತಿಷ್ಠ ಕೃಷ್ಣನ್​ ಮತ್ತು ಹಿಂದಿಯ ಜನಪ್ರಿಯ "ರಾಧಾಕೃಷ್ಣ' ಧಾರಾವಾಹಿಯ ರಾಧೆ ಮಲ್ಲಿಕಾ ಸಿಂಗ್​ರನ್ನು ಸ್ಯಾಂಡಲ್​ವುಡ್​ಗೆ ಪರಿಚಯಿಸಿದ್ದರು. ಇದೀಗ "ದೇವರು ರುಜು ಮಾಡಿದನು' ಚಿತ್ರದ ಮೂಲಕ ಸುನಿ, ಯುವ ಪ್ರತಿಭೆ ವಿರಾಜ್​ ಸ್ಯಾಂಡಲ್​ವುಡ್​ಗೆ ನಾಯಕನಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಜತೆಗೆ ಅವರಿಗೆ ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದು, ಹೊಸ ಪ್ರತಿಭೆಗಳನ್ನೇ ಸುನಿ ಪರಿಚಯಿಸುತ್ತಿದ್ದಾರೆ.

ಕೀರ್ತಿ ಕೃಷ್ಣ ರುಜು ಮಾಡಿದರು
ನಟ ಶರಣ್​ ಮತ್ತು ನಟಿ ಶ್ರುತಿ ಇಬ್ಬರೂ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅಣ್ಣ&ತಂಗಿ. ಜತೆಗೆ ಶರಣ್​ ಪುತ್ರ ಹೃದಯ್​ ಈಗಾಗಲೇ "ಗುರು ಶಿಷ್ಯರು' ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ. ಅವರ ಬೆನ್ನಲ್ಲೇ ಶರಣ್​ ಮತ್ತೊಬ್ಬ ಸಹೋದರಿ ಉಷಾ ಪುತ್ರಿ ಕೀರ್ತಿ ಕೃಷ್ಣ ಕೂಡ ಇದೀಗ ನಾಯಕಿಯಾಗಿ "ದೇವರು ರುಜು ಮಾಡಿದನು' ಚಿತ್ರದ ಮೂಲಕ ಪದಾರ್ಪಣೆ ಮಾಡುತ್ತಿದ್ದಾರೆ. ಪುಷ್ಕರ್​ ಮಲ್ಲಿಕಾರ್ಜುನಯ್ಯ ಸ್ಟುಡಿಯೋದಲ್ಲಿ ನಟನಾ ತರಬೇತಿ ಪಡೆದಿರುವ ಕೀರ್ತಿ, ಈ ಚಿತ್ರದಲ್ಲಿ ಸಂಗೀತವೇ ತನ್ನ ಪ್ರಪಂಚ ಎಂದು ಜೀವಿಸುವ "ಸುಶ್ರಾವ್ಯ' ಎಂದು ವೀಣಾ ವಾದಕಿಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಮಾಡೆಲ್​ ದಿವಿತಾ, ಚಿತ್ರರಂಗಕ್ಕೆ ಜಿಗಿತ
ಕೀರ್ತಿ ಕೃಷ್ಣ ಜತೆ 2022ರ ಮಿಸ್​ ಇಂಡಿಯಾ ಯೂನಿವರ್ಸ್​ ಕಿರೀಟ ಮುಡಿಗೇರಿಸಿಕೊಂಡಿದ್ದ ಮಂಗಳೂರು ಹುಡುಗಿ ದಿವಿತಾ ರೈ, ಇದೀಗ "ದೇವರು ರುಜು ಮಾಡಿದನು' ಚಿತ್ರಕ್ಕೆ ನಾಯಕಿಯಾಗುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಈಗಾಗಲೇ ಒಂದು ಬಾಲಿವುಡ್​ ಚಿತ್ರದಲ್ಲಿ ನಟಿಸಿರುವ ಅವರು, ಅದರ ಬಿಡುಗಡೆಗೆ ಎದುರು ನೋಡುತ್ತಿದ್ದು, ಅದರ ನಡುವೆ ಸಿಂಪಲ್​ ಸುನಿ ಚಿತ್ರದ ಮೂಲಕ ಸ್ಯಾಂಡಲ್​ವುಡ್​ ಡೆಬ್ಯೂ ಮಾಡುತ್ತಿದ್ದಾರೆ. ಕೊಂಕಣಿ ಸಮುದಾಯಕ್ಕೆ ಸೇರಿದ ಸಿಂಗರ್​ ಪಾತ್ರದಲ್ಲಿ ದಿವಿತಾ ರೈ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ನಾಯಕ ಮತ್ತು ನಾಯಕಿಯರನ್ನು ಚಿತ್ರತಂಡ ಪರಿಚಯಿಸಿದ್ದು, ಉಳಿದ ತಾರಾಗಣದ ಬಗ್ಗೆ ಇನ್ನಷ್ಟೇ ಮಾಹಿತಿ ನೀಡಬೇಕಿದೆ.

ಉಳಿದಂತೆ ಚಿತ್ರಕ್ಕೆ ಜೆಜೆ, ಜೇಡ್​ ಸ್ಯಾಂಡಿ, ಜೂಡಾ ಸ್ಯಾಂಡಿ ಸಂಗೀತ, ಸಂತೋಷ್​ ರೈ ಪಾತಾಜೆ ಛಾಯಾಗ್ರಹಣವಿರಲಿದೆ. ನಾಳೆ "ದೇವರು ರುಜು ಮಾಡಿದನು' ಚಿತ್ರಕ್ಕೆ ಮುಹೂರ್ತ ನೆರವೇರಲಿದ್ದು, ನಂತರ ಶೂಟಿಂಗ್​ ಮುಂದುವರಿಸಲು ಸುನಿ ಪ್ಲಾನ್​ ಮಾಡಿಕೊಂಡಿದ್ದಾರೆ.