ಸಿನಿವಾಣಿ

Srimurali Interview; ಪಾಠ ಕಲಿತೆ, ಬದಲಾಗಿದ್ದೇನೆ ಎಂದ ರೋರಿಂಗ್​ ಸ್ಟಾರ್​

| ಹರ್ಷವರ್ಧನ್​ ಬ್ಯಾಡನೂರು

"ಬಘೀರ' ಚಿತ್ರದ ಯಶಸ್ಸಿನ ಬಳಿಕ ನಟ ಶ್ರೀಮುರಳಿ ಸದ್ಯ ಬ್ಯಾಕ್​ ಟು ಬ್ಯಾಕ್​ ಮೂರು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. "ಪರಾಕ್​' ಮತ್ತು "ಉಗ್ರಾಯುಧಮ್​' ಕೇವಲ 10 ದಿನಗಳ ಅಂತರದಲ್ಲಿ ಮುಹೂರ್ತ ಆಚರಿಸಿಕೊಂಡಿದ್ದು, ಶೂಟಿಂಗ್​ಗೆ ಸಿದ್ಧತೆ ನಡೆಸಿವೆ. ಅದೇ ಖುಷಿಯಲ್ಲಿ ಇತ್ತೀಚೆಗಷ್ಟೆ ಶ್ರೀಮುರಳಿ ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದರು. ""ಪರಾಕ್​' ಈಗಿನ ಕಥೆಯಲ್ಲ. 1960, 70ರ ವಿಂಟೇಜ್​ ಸ್ಟೋರಿ. ಹಾಗೇ "ಉಗ್ರಾಯುಧಮ್​' 300 ವರ್ಷಗಳ ಹಿಂದಿನ ಕಥೆ. ಇನ್ನು ಪೀಪಲ್​ ಮೀಡಿಯಾ ್ಯಾಕ್ಟರಿ ನಿರ್ಮಾಣದಲ್ಲಿ ಬೇರೆ ಜಾನರ್​ ಸಿನಿಮಾ ಮೂಡಿಬರಲಿದೆ. ಹೀಗೆ ಮೂರು ಕಥೆಗಳು, ಜಾನರ್​ ಮತ್ತು ನನ್ನ ಪಾತ್ರ, ಲುಕ್​ ಒಂದಕ್ಕಿಂತ ಒಂದು ವಿಭಿನ್ನವಾಗಿರಲಿದೆ. ಜತೆಗೆ ಮೂರೂ ಕ್ಲ್ಯಾಷ್​ ಆಗದಂತೆ ಎಚ್ಚರವಹಿಸಿದ್ದೇನೆ. ಒಟ್ಟಿಗೆ ಪ್ರಾರಂಭವಾದರೂ, ರಿಲೀಸ್​ ಗ್ಯಾಪ್​ ಇರುವಂತೆ ಶೂಟಿಂಗ್​ಗೆ ಡೇಟ್ಸ್​ ಕೊಟ್ಟಿದ್ದೇನೆ. ಮುಂದಿನ ವರ್ಷದ ಮೊದರ್ಲಧ ಒಂದು, ದ್ವೀತಿಯಾರ್ಧದಲ್ಲಿ ಎರಡರ ಶೂಟಿಂಗ್​ ಮುಗಿಸಿ, ಮುಂದಿನ ವರ್ಷದಂತ್ಯಕ್ಕೆ ಇನ್ನೊಂದು ಹೊಸ ಸಿನಿಮಾ ಕೈಗೆತ್ತಿಕೊಳ್ಳಲಿದ್ದೇನೆ. ಈ ಬಾರಿ ಗೆದ್ದೇ ಗೆಲ್ಲುತ್ತೇನೆ. ಗೆಲ್ಲಲೇಬೇಕು ಅಂತ ಶ್ರಮವಹಿಸಿ, ಶ್ರದ್ಧೆಯಿಂದ ಕೆಲಸ ಮಾಡುತ್ತೇನೆ' ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಾರೆ ಶ್ರೀಮುರಳಿ.

200ರಲ್ಲಿ 3 ಓಕೆ!

"ಬಘೀರ' ಬಳಿಕ ಶ್ರೀಮುರಳಿ ಬರೋಬ್ಬರಿ 200ಕ್ಕೂ ಅಧಿಕ ಕಥೆಗಳನ್ನು ಕೇಳಿ ಕೇವಲ ಮೂರನ್ನು ಒಪ್ಪಿದ್ದಾರೆ. "ಹಾಗಂತ ನಾನು ಕೇಳಿದ ಉಳಿದ ಕಥೆಗಳು ಚೆನ್ನಾಗಿರಲಿಲ್ಲ ಅಂತಲ್ಲ. ಎಲ್ಲವೂ ಒಳ್ಳೆಯ ಕಥೆಗಳೇ ಆಗಿದ್ದವು. "ಸು ್ರಮ್​ ಸೋ' ಎಷ್ಟು ಚಂದದ ಸಬ್ಜೆಕ್ಟ್​. ಅಂತಹ ಸರಳ ಕಥೆಗಳು ನನಗಿಷ್ಟ. ಲವ್​ಸ್ಟೋರಿಸ್​, ಕಾಮಿಡಿ, ಪಾತ್ರಗಳಲ್ಲಿ ನಟಿಸುವುದು ಇಷ್ಟ. ಏನೇ ಬಜೆಟ್​ ಇದ್ದರೂ ಪರವಾಗಿಲ್ಲ ಕಥೆ ಮತ್ತು ಪಾತ್ರ ಚೆನ್ನಾಗಿರಬೇಕು. ಅಂತಹ ಕಥೆ, ಪಾತ್ರಕ್ಕಾಗಿ ಎದುರು ನೋಡುತ್ತಿದ್ದೆ' ಎನ್ನುತ್ತಾರೆ.

ನಾನೀಗ ಮೊದಲಿನಂತಲ್ಲ!

ಶ್ರೀಮುರಳಿ ಸಾಮಾನ್ಯವಾಗಿ ಒಂದು ಸಿನಿಮಾ ಮುಗಿಯುವವರೆಗೂ ಮತ್ತೊಂದು ಸಿನಿಮಾ ಕೈಗೆತ್ತಿಕೊಳ್ಳುತ್ತಿರಲಿಲ್ಲ. ಆದರೆ, ಈಗ ಆ ನಿರ್ಧಾರದಿಂದ ಹೊರಬಂದಿರುವ ಅವರು, "ಇದುವರೆಗೂ ನಾನು ಈ ರೀತಿ ಮಾಡಿರಲಿಲ್ಲ. ಇದೇ ಮೊದಲ ಬಾರಿಗೆ ಹೀಗೆ ಒಟ್ಟಿಗೆ ಮೂರು ಸಿನಿಮಾಗಳನ್ನು ಮಾಡುತ್ತಿದ್ದೇನೆ. ಮೊದಲಿನಂತೆ ಒಂದರ ಬಳಿಕ ಇನ್ನೊಂದು ಅಂತಿದ್ದರೆ ಜೀವನ ನಡೆಯುವುದಿಲ್ಲ ಅಂತ ನನಗೂ ಗೊತ್ತಾಯಿತು. ತಿಂಗಳುಗಟ್ಟಲೆ, ವರ್ಷಗಟ್ಟಲೆ ಕಾದು ನನಗೂ ಸಾಕಾಗಿದೆ. ನಾನಿನ್ನೂ ಚಿತ್ರರಂಗದಲ್ಲಿ ಏನೂ ಮಾಡೇ ಇಲ್ಲ ಅಂತನ್ನಿಸುತ್ತಿದೆ. ಈಗ ಪಾಠ ಕಲಿತಿದ್ದೇನೆ. ಒಳ್ಳೆ ಸಿನಿಮಾಗಳನ್ನು ಕೊಡಬೇಕು ಅಂತ ಸ್ಟೋರಿ ಬ್ಯಾಂಕ್​ ಮಾಡಿಕೊಂಡಿದ್ದೇನೆ. ನಿರ್ಮಾಪಕರು ಬಂದಾಗ, ನನ್ನ ಬಳಿ ಇರುವ ಕಥೆಗಳನ್ನೇ ಅವರಿಗೆ ಕೊಡುತ್ತೇನೆ. ಅವರು ಒಪ್ಪಿದರೆ ಆ ಸಿನಿಮಾ ಪ್ರಾರಂಭಿಸುತ್ತೇನೆ' ಎಂದು ಮಾಹಿತಿ ನೀಡುತ್ತಾರೆ.

ರೋರಿಂಗ್​ ಫಿಟ್ನೆಸ್​...

"ಒಮ್ಮೆ ಫಿಟ್​ ಆಗಿಬಿಟ್ಟರೆ ಸಾಕು. ಬ್ಯಾಕ್​ ಟು ಬ್ಯಾಕ್​ ಸಿನಿಮಾ ಮಾಡಿಕೊಂಡು, ಆಯಾ ಪಾತ್ರಕ್ಕೆ ತಕ್ಕಂತೆ ಬದಲಿಸಿಕೊಂಡು ಹೋಗಿಬಿಡಬಹುದು. ಮುಂದಿನ ಒಂದೂವರೆ ವರ್ಷದವರೆಗೂ ಡಯಟ್​, ಫಿಟ್ನೆಸ್​ ಮುಂದುವರಿಸಲಿದ್ದೇನೆ' ಎನ್ನುವ ಶ್ರೀಮುರಳಿ ಸದ್ಯ ಕಟ್ಟುನಿಟ್ಟಿನ ರೂಟೀನ್​ ಪಾಲಿಸುತ್ತಿದ್ದಾರೆ. "ಬೆಳಗ್ಗೆ ನಾಲ್ಕು ತಾಸು ವರ್ಕೌಟ್​,  ಫೈಟಿಂಗ್​ ತರಬೇತಿ, ಪಾತ್ರಗಳಿಗೆ ಸಿದ್ಧತೆ, ಕೆಲ ತಾಸು ಮೀಟಿಂಗ್​, ಇನ್ನೂ ಸಣ್ಣ ಆಗಬೇಕಿದೆ ಹೀಗಾಗಿ ಸ್ವಿಮ್ಮಿಂಗ್​ ಹೋಗುತ್ತಿದ್ದೇನೆ. ಕುದುರೆ ಸವಾರಿ ಕಲಿಯುತ್ತಿದ್ದೇನೆ. ವಾರದ ದಿನಗಳಲ್ಲಿ ಮಕ್ಕಳಿಗೆ ಕೇವಲ 10 ನಿಮಿಷ ಸಮಯ ಕೊಡುವುದಕ್ಕೂ ಆಗುತ್ತಿಲ್ಲ. ವಾರಾಂತ್ಯ ಕುಟುಂಬಕ್ಕೆ ಮೀಸಲು' ಎಂದು ನಗುತ್ತಾರೆ.

ಪರಭಾಷೆಗಳಲ್ಲೂ ಆಫರ್​, ಕನ್ನಡಕ್ಕಷ್ಟೇ ಆದ್ಯತೆ

ಕನ್ನಡದ ಹಲವು ನಟ, ನಟಿಯರು ಪರಭಾಷೆಗಳಲ್ಲೂ ಮಿಂಚುತ್ತಿದ್ದಾರೆ. ಅದೇ ರೀತಿ ಶ್ರೀಮುರಳಿಗೂ ತೆಲುಗು, ತಮಿಳಿನಿಂದ, ಒಟಿಟಿ ವೆಬ್​ಸರಣಿಗಳಲ್ಲೂ ಅವಕಾಶ ಬಂದಿದ್ದವಂತೆ. ಆದರೆ, """ಬಘೀರ'ದಲ್ಲಿ ಬಿಜಿಯಿದ್ದೆ. ನನಗೂ ಪಾತ್ರಗಳು ಸೂಕ್ತ ಅನ್ನಿಸಲಿಲ್ಲ. ನನ್ನನ್ನು ಕನ್ನಡಿಗರೇ ತುಂಬ ಚೆನ್ನಾಗಿ ನೋಡಿಕೊಳ್ಳುತ್ತಿರುವಾಗ, ಬೇರೆಡೆ ಹೋಗುವುದು ಬೇಡ ಅಂತನ್ನಿಸಿತು. ಜತೆಗೆ ಅಮ್ಮನ ಮಡಿಲು ಬಿಟ್ಟು ಹೋಗೋಕೆ ನನಗೂ ಭಯ. ಹಾಗೇ ನಾನು ಕನ್ನಡಿಗ. ನನಗೆ ಮೊದಲು ಕನ್ನಡ' ಎನ್ನುತ್ತಾರೆ ಶ್ರೀಮುರಳಿ.