ಆತ ರಂಗರಾಜ್. ಅದಾಗಲೇ ಮದುವೆಯಾಗಿ ಇಬ್ಬರು ಮುದ್ದಾದ ಗಂಡುಮಕ್ಕಳಿದ್ದಾರೆ. ಆದರೆ, ಇತ್ತೀಚೆಗಷ್ಟೆ ಮತ್ತೊಬ್ಬ ಯುವತಿಯನ್ನು ಆತ ಮದುವೆಯಾಗಿದ್ದಾನೆ. ಆದರೆ, ಈ ಕಥೆಯಲ್ಲಿ ಟ್ವಿಸ್ಟ್ ಏನೆಂದರೆ, ಆ ಯುವತಿ ರಂಗರಾಜ್ ತಾಳಿ ಕಟ್ಟಿದ ದಿನವೇ, ತಾನು ಆರು ತಿಂಗಳ ಗರ್ಭವತಿ ಎಂದು ಘೋಷಿಸಿದ್ದಾರೆ. ಹಾಗಂತ ಇದು ಯಾವುದೋ ಸಿನಿಮಾ ಕಥೆಯಲ್ಲ. ಬದಲಾಗಿ ಕಾಲಿವುಡ್ನಲ್ಲಿ ಸಿನಿಮಾಗಳನ್ನೂ ಮೀರಿಸುವಂತೆ ಇತ್ತೀಚೆಗಷ್ಟೆ ಪ್ರಾರಂಭವಾಗಿರುವ ನೈಜ ಘಟನೆ!
ಶೆಫ್ ಆಗಿ ನಟ ಕಾರ್ತಿ ಸೇರಿ ತಮಿಳುನಾಡಿನ ಹಲವು ವಿಐಪಿಗಳಿಗೆ ಕ್ಯಾಟರಿಂಗ್ ಸೇವೆ ಒದಗಿಸಿರುವ ಹೆಗ್ಗಳಿಕೆ ಮಾದಂಪಟ್ಟಿ ರಂಗರಾಜ್ಗೆ ಸಲ್ಲುತ್ತದೆ. ಥರಹೇವಾರಿ ಖಾದ್ಯಗಳನ್ನು ತಯಾರಿಸುತ್ತಲೇ ಜನಪ್ರಿಯತೆ ಗಳಿಸಿದ ಅವರು "ಮೆಹೆಂದಿ ಸರ್ಕಸ್', "ಪೆಂಗ್ವಿನ್' ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದು, "ಕುಕ್ ವಿತ್ ಕೋಮಾಲಿ' ಶೋನಲ್ಲೂ ಕಾಣಿಸಿಕೊಂಡಿದ್ದರು. ಇಂತಹ ರಂಗರಾಜ್ ಈ ಜನಪ್ರಿಯತೆ ದೊರೆಯುವ ಮುನ್ನ ಶ್ರುತಿ ಎಂಬುವರನ್ನು ಮದುವೆಯಾಗಿದ್ದು, ಅವರಿಗೆ ಇಬ್ಬರು ಗಂಡುಮಕ್ಕಳಿದ್ದಾರೆ. ಆದರೆ, ಇತ್ತೀಚೆಗಷ್ಟೆ ರಂಗರಾಜ್ ಜಾಯ್ ಕ್ರಿಜಿಲ್ಡಾ ಎಂಬ ಕಾಲಿವುಡ್ ಸ್ಟೈಲಿಸ್ಟ್ ಜತೆ ಮತ್ತೊಮ್ಮೆ ಮದುವೆಯಾಗಿದ್ದಾರೆ. ಮದುವೆಯ ದಿನವೇ ಜಾಯ್, ತಾನೀಗ ಆರು ತಿಂಗಳ ಗರ್ಭಿಣಿ ಎಂದು ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಸದ್ಯ ಚರ್ಚೆಗೀಡಾಗಿದೆ. ಹಾಗೇ ರಂಗರಾಜ್, ಶ್ರುತಿಯಿಂದ ವಿಚ್ಛೇದನ ಪಡೆಯದೇ ಜಾಯ್ ಜತೆ ಎರಡನೇ ಮದುವೆಯಾಗಿದ್ದಾರೆ ಎನ್ನಲಾಗುತ್ತಿದೆ. ಜಾಲತಾಣದಲ್ಲಿ ಶ್ರುತಿ, ರಂಗರಾಜ್ ಹೆಸರನ್ನು ತೆಗೆದಿಲ್ಲ ಹಾಗೇ ಮಾದಂಪಟ್ಟಿ ರಂಗರಾಜ್ ಪತ್ನಿ ಎಂದೂ ಪ್ರೊೈಲ್ನಲ್ಲಿ ಬರೆದುಕೊಂಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಫ್ಯಾಷನ್ ಡಿಸೈನ್ ಮಾಡಿದ್ದ ಶ್ರುತಿ ಇದೇ ಏಪ್ರಿಲ್ನಲ್ಲಿ ಕಾನೂನು ಪದವಿ ಪಡೆದಿದ್ದು, ಬಾರ್ ಕೌನ್ಸಿಲ್ ಪರೀಕ್ಷೆಯಲ್ಲೂ ಉತ್ತೀರ್ಣರಾಗಿ, ವಕೀಲಿಕೆ ಪ್ರಾರಂಭಿಸಿದ್ದಾರೆ. ಹೀಗಾಗಿ ರಂಗರಾಜ್, ಶ್ರುತಿ ಮತ್ತು ಜಾಯ್ ನಡುವಿನ ಈ ತ್ರಿಕೋನ ಮದುವೆ ಕಥೆಯಲ್ಲಿ ಮುಂದೆ ಏನಾಗಲಿದೆ ಎಂಬ ಕುತೂಹಲ ಅವರ ಅಭಿಮಾನಿಗಳದ್ದು.
ಇದೇ ಮೊದಲಲ್ಲ
ಗರ್ಭಧರಿಸಿವುದು ಗೊತ್ತಾಗಿ ನಂತರ ತರಾತುರಿಯಲ್ಲಿ ಮದುವೆಯಾದ ಸೆಲೆಬ್ರಿಟಿಗಳಲ್ಲಿ ರಂಗರಾಜ್, ಜಾಯ್ ಮೊದಲೇನಲ್ಲ. ಈ ಹಿಂದೆ ಬಾಲಿವುಡ್ ಜೋಡಿ ಅಂಗದ್ ಬೇಡಿ ಮತ್ತು ನೇಹಾ ಧೂಪಿಯಾ, ನಟಿ ಕಲ್ಕಿ ಕೇಕ್ಲಾ, ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ನಟಿ ನತಾಶಾ ಸ್ಟಾಂಕೊವಿಕ್, ಕೊಂಕಣ ಸೇನ್ ಶರ್ಮಾ, ಶ್ರೀದೇವಿ ಸೇರಿ ಕೆಲ ತಾರೆಯರು ಮದುವೆ ಸಮಯದಲ್ಲಿ ಪ್ರಗ್ನೆಂಟ್ ಆಗಿದ್ದರು ಎನ್ನಲಾಗಿದೆ.