ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಕನ್ನಡದ "ಪುಟ್ಟಗೌರಿ ಮದುವೆ', "ಗೃಹಲಕ್ಷ್ಮಿ', ತಮಿಳಿನಲ್ಲಿ "ಚಿನ್ನತೆರೆ ಸಿನಿಮಾ' ಸೀರಿಯಲ್ಗಳಲ್ಲಿ ನಟಿಸಿರುವ, "ವಿಜಯಾನಂದ', "ದ್ವೈತ‘, "ಕ್ರಾಂತಿ', "ಮುಗುಳುನಗೆ', "ಬುಗುರಿ', "ದಾದಾ ಈಸ್ ಬ್ಯಾಕ್', "ಡಿಕೆ ಬೋಸ್', "ದೇವರು ಬೇಕಾಗಿದ್ದಾರೆ' ಸೇರಿ ಹಲವು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿರುವ ಖ್ಯಾತಿ ನಟ ಪ್ರಸಾದ್ ವಸಿಷ್ಠಗೆ ಸಲ್ಲುತ್ತದೆ. ಇದೀಗ ಅವರು "ಕಬಂಧ' ಮೂಲಕ ಮೊದಲ ಬಾರಿಗೆ ನಾಯಕನಾಗಿದ್ದಾರೆ. "ನೀರು ಕಳ್ಳರು' ಮತ್ತು ಲಂಡನ್ ಫಿಲಂ ಫೆಸ್ಟಿವಲ್ಗೆ ಆಯ್ಕೆಯಾಗಿ "ಧೂತ' ಚಿತ್ರಗಳನ್ನು ನಿರ್ದೇಶಿಸಿರುವ ಸತ್ಯನಾಥ್ "ಕಬಂಧ'ಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಇದೊಂದು ಹಾರರ್ ಥ್ರಿಲ್ಲರ್ ಜಾನರ್ ಚಿತ್ರವಾಗಿದ್ದು, ಅದನ್ನು ಮನರಂಜನಾತ್ಮಕವಾಗಿ ಜನರ ಮುಂದಿಡುವ ಪ್ರಯತ್ನ ಚಿತ್ರತಂಡದ್ದು. ಅದಕ್ಕೆ ತಕ್ಕಂತೆ ಈಗಾಗಲೇ "ಕಬಂಧ' ಟ್ರೇಲರ್ ರಿಲೀಸ್ ಆಗಿದ್ದು, ಕುತೂಹಲ ಮೂಡಿಸುವಂತಿದೆ. ಚಿತ್ರಕ್ಕೆ "ನಂಗಾಗಿದ್ದೆ… ನಿಂಗಾಗುತ್ತೆ…' ಎಂಬ ಅಡಿಬರಹವಿದೆ.
ಎರಡು ಶೇಡ್ಗಳ ಪಾತ್ರ
ನಾಯಕ ಪ್ರಸಾದ್ ವಸಿಷ್ಠ ಈ ಚಿತ್ರದಲ್ಲಿ ಎರಡು ಶೇಡ್ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. "ಮುಗ್ಧ, ದುರ್ಬಲ ಹುಡುಗ. ಆದರೆ ಒಂದು ದಿನ ಒಂದು ಸಂದರ್ಭ ಬಂದಾಗ ಆತ ಸಂಪೂರ್ಣವಾಗಿ ಬದಲಾಗುತ್ತಾನೆ. ಗಟ್ಟಿ ನಿರ್ಧಾರ ಮಾಡಿ, ಮುನ್ನುಗ್ಗುತ್ತಾನೆ. ಕಥೆಯ ಮುಖಾಂತರ ನಾಯಕನಾಗುತ್ತಾನೆ. ಮೊದಲರ್ಧ ನೆಗಟಿವ್ ಇರುವ ಪಾತ್ರಗಳು ದ್ವಿತಿಯಾರ್ಧದಲ್ಲಿ ಪಾಸಿಟಿವ್ ಆಗುತ್ತವೆ. ಹಾಗೇ ಮೊದರ್ಲಧ ಪಾಸಿಟಿವ್ ಅನ್ನಿಸುವ ಪಾತ್ರಗಳು ದ್ವೀತಿಯಾರ್ಧದಲ್ಲಿ ನೆಗಟವಿ ಆಗುತ್ತವೆ. ಅದು ಹೇಗೆ ಅನ್ನೋದನ್ನ ಚಿತ್ರದಲ್ಲಿ ನೋಡಿದರೆ ಚಂದ' ಎಂದು ಮಾಹಿತಿ ನೀಡುತ್ತಾರೆ ಪ್ರಸಾದ್. ವಿಶೇಷ ಅಂದರೆ ಈ ಚಿತ್ರದ ಟ್ರೇಲರ್ ನೋಡಿಯೇ ಪ್ರಸಾದ್ಗೆ ನಾಲ್ಕೈದು ಹೊಸ ಸಿನಿಮಾಗಳ ಆರ್ ಬಂದಿದೆಯಂತೆ. "ಐದು ಕಥೆಗಳನ್ನು ಕೇಳಿದ್ದೇನೆ. ಎಲ್ಲವೂ ನಾಯಕನ ಪಾತ್ರಗಳೇ. ಅವುಗಳಲ್ಲಿ ಒಂದು ತುಂಬ ಇಂಟರೆಸ್ಟಿಂಗ್ ಅನ್ನಿಸಿ, ಒಪ್ಪಿಕೊಂಡಿದ್ದೇನೆ. ಕೆಲವೇ ದಿನಗಳಲ್ಲಿ ಹೊಸ ಸಿನಿಮಾ ಘೋಷಣೆಯಾಗಲಿದೆ' ಎಂದು ಸಂತಸ ಹಂಚಿಕೊಳ್ಳುತ್ತಾರೆ.
ವಿಷಯವೇ ವಿಶೇಷತೆ
"ಕಬಂಧ' ಚಿತ್ರತಂಡ ಕಥೆಯ ಬಗ್ಗೆ ಎಲ್ಲಿಯೂ ಗುಟ್ಟುಬಿಟ್ಟುಕೊಟ್ಟಿಲ್ಲ. "ಇದೊಂದು ಹಾಲಿವುಡ್ನ ಹಾರರ್ ಫಾರ್ಮ್ಯಾಟ್ ಸಿನಿಮಾ' ಎನ್ನುವ ಪ್ರಸಾದ್, "ಸಿನಿಮಾ ಶುರುವಾದ ಬಳಿಕ ಟೆಂಪೋ ಬಿಲ್ಡ್ ಆಗುತ್ ಆಗುತ್ತಾ ಸಾಗುತ್ತದೆ. ಕೃಷಿ ಹಿನ್ನೆಲೆಯಲ್ಲಿ ನಡೆಯುವ ಕಥೆ. ಇದು ಪ್ರತಿಯೊಬ್ಬರೂ ನೋಡಲೇಬೇಕಾದ ವಿಷಯವಿರುವ ಸಿನಿಮಾ. ಸೂಕ್ಷ್ಮ ವಿಚಾರವನ್ನು ಮನರಂಜನಾತ್ಮಕವಾಗಿ ಹೇಳುವ ಪ್ರಯತ್ನ ಮಾಡಿದ್ದೇವೆ. ದೇವರಾಯನದುರ್ಗದ ಕಾಡು, ತುಮಕೂರು ಮತ್ತು ಬೆಂಗಳೂರಿನಲ್ಲಿ 55 ದಿನಗಳ ಒಂದೇ ಶೆಡ್ಯೂಲ್ನಲ್ಲಿ ಶೂಟಿಂಗ್ ನಡೆಸಿದ್ದೇವೆ. ತುಂಬ ಕುತೂಹಲಕಾರಿಯಾಗಿ ಸಿನಿಮಾ ಮೂಡಿಬಂದಿದೆ' ಎಂದು ಹೇಳಿಕೊಳ್ಳುತ್ತಾರೆ. ಚಿತ್ರದಲ್ಲಿ ಪ್ರಸಾದ್ ವಸಿಷ್ಠಗೆ ಪ್ರಿಯಾಂಕಾ ಮಳಲಿ ನಾಯಕಿಯಾಗಿದ್ದು, ಕಿಶೋರ್, ಅವಿನಾಶ್, ಪ್ರಶಾಂತ್ ಸಿದ್ದಿ, ಛಾಯಶ್ರೀ, ನಿಹಾಲ್, ವಂದನ, ವಚನ ಮುಖ್ಯ ಭೂಮಿಕೆಯಲ್ಲಿದ್ದಾರೆ. ಉಳಿದಂತೆ ಚಿತ್ರಕ್ಕೆ ರಘೋತ್ತಮ ಮತ್ತು ಶ್ರೇಯಸ್ ರಾವ್ ಸಂಗೀತ, ಸತ್ಯಜಿತ್ ಸಿದ್ಧಕಟ್ಟೆ ಸಂಕಲನ, ವಿಷ್ಣುಪ್ರಸಾದ್ ಛಾಯಾಗ್ರಹಣ ಮತ್ತು ಸಾಯಿತೇಜ ಹಿನ್ನೆಲೆ ಸಂಗೀತವಿರಲಿದೆ.