| ಹರ್ಷವರ್ಧನ್ ಬ್ಯಾಡನೂರು
‘ಗೀತಾ ಬ್ಯಾಂಗಲ್ ಸ್ಟೋರ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ನಾಯಕನಾಗಿ ಪದಾರ್ಪಣೆ ಮಾಡಿದವರು ಪ್ರಮೋದ್. ಬಳಿಕ ‘ಪ್ರೀಮಿಯರ್ ಪದ್ಮಿನಿ’, ‘ರತ್ನನ್ ಪ್ರಪಂಚ’, ಸೇರಿ ಕೆಲವು ಚಿತ್ರಗಳಲ್ಲಿ ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಮಿಂಚಿದ್ದಾರೆ. ಇಂತಹ ಪ್ರಮೋದ್ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ಪ್ಯಾನ್ ಇಂಡಿಯಾ ‘ಸಲಾರ್’ ಮೂಲಕ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಹೊರಟಿದ್ದಾರೆ.
‘ಪ್ರಶಾಂತ್ ನೀಲ್ ಸರ್ ‘ಸಲಾರ್’ನಲ್ಲಿ ಒಂದೊಳ್ಳೆ ಪಾತ್ರ ನೀಡಿದ್ದಾರೆ. ‘ರತ್ನನ್ ಪ್ರಪಂಚ’ ಸಿನಿಮಾ ನೋಡಿ ನನಗೆ ಪಾತ್ರ ನೀಡಿದ್ದು. ಸುಮ್ಮನೆ ಹಾಗೆ ಬಂದು ಹೀಗೆ ಹೋಗುವ ಪಾತ್ರವಲ್ಲ. ಪೃಥ್ವಿರಾಜ್ ಸುಕುಮಾರಸನ್, ಪ್ರಭಾಕರನ್ ಅವರಂತಹ ದಿಗ್ಗಜರ ಸಮಾನಾಗಿ ನಿಲ್ಲುವ ಪಾತ್ರ. ಮೂರು ಜನರ ಕಾಂಬಿನೇಷನ್‌ನಲ್ಲಿ ಸನ್ನಿವೇಶಗಳಿವೆ. ಅಷ್ಟು ದೊಡ್ಡ ಸೆಟ್‌ಗಳು, ಸ್ಟಾರ್‌ಗಳು ನಿರೀಕ್ಷೆ ಹೆಚ್ಚಿದೆ. ನಾನು ತೆರೆಯ ಮೇಲೆ ಹೇಗೆ ಕಾಣಿಸುತ್ತೇನೆ ಎಂಬ ಕುತೂಹಲವಿದೆ. ಡಬ್ಬಿಂಗ್ ಸಮಯದಲ್ಲಿ ಗೊತ್ತಾಗುತ್ತದೆ. ಇದೇ ಸೆಪ್ಟೆಂಬರ್‌ನಲ್ಲಿ ‘ಸಲಾರ್’ ರಿಲೀಸ್ ಆಗಲಿದೆ’ ಎಂದು ಮಾಹಿತಿ ನೀಡುತ್ತಾರೆ ಪ್ರಮೋದ್.
ಜತೆಗೆ ‘ಭುವನಂ ಗಗನಂ’ ಚಿತ್ರದಲ್ಲೂ ಪ್ರಮೋದ್ ನಟಿಸುತ್ತಿದ್ದಾರೆ. ‘ಇಲ್ಲಿ ಮೊದಲ ಬಾರಿಗೆ ಲವರ್‌ಬಾಯ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಈ ಹಿಂದೆ ರಫ್ ಆ್ಯಂಡ್ ಟಫ್ ಪಾತ್ರಗಳಲ್ಲಿ ನಟಿಸಿದ್ದೆ. ಇಡೀ ಸಿನಿಮಾ ನನ್ನ ಲವ್‌ಸ್ಟೋರಿ ಸುತ್ತ ನಡೆಯುತ್ತದೆ. ಒಂದೊಳ್ಳೆ ಫೀಲ್ ಗುಡ್ ಸಿನಿಮಾ. ಈಗಾಗಲೇ ಶೇಕಡಾ 60ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಕೊನೆಯ ಶೆಡ್ಯುಲ್ ಕನ್ಯಾಕುಮಾರಿಯಲ್ಲಿ ನಡೆಯಲಿದ್ದು, ನನ್ನ ಮತ್ತು ಪೃಥ್ವಿ ಅಂಬಾರ್ ಕಾಂಬಿನೇಷನ್ ಸನ್ನಿವೇಶಗಳ ಚಿತ್ರೀಕರಣ ಮಾಡಲಿದ್ದಾರೆ’ ಎಂದು ಹೇಳಿಕೊಳ್ಳುತ್ತಾರೆ.
ಈ ಎರಡು ಸಿನಿಮಾಗಳ ಜತೆ ಜುಲೈನಲ್ಲಿ ಪ್ರಮೋದ್ ಅವರ ಹೊಸ ಸಿನಿಮಾ ಘೋಷಣೆಯಾಗಲಿದೆ. ‘ಪ್ರೀಮಿಯರ್ ಪದ್ಮಿನಿ’ ಚಿತ್ರ ನಿರ್ದೇಶಿಸಿದ್ದ ರಮೇಶ್ ಇಂದಿರಾ ಮತ್ತು ನಿರ್ಮಿಸಿದ್ದ ಶ್ರುತಿ ನಾಯ್ಡು, ಈ ಚಿತ್ರದಲ್ಲೆ ಮತ್ತೆ ಕೈಜೋಡಿಸಲಿದ್ದಾರೆ. ‘‘ಪ್ರೀಮಿಯರ್ ಪದ್ಮಿನಿ’ ಬಳಿಕ ಮತ್ತೆ ಅದೇ ತಂಡದ ಜತೆ ಕೆಲಸ ಮಾಡಲಿರುವ ಖುಷಿಯಿದೆ. ನಿರ್ದೇಶಕ ರಮೇಶ್ ಇಂದಿರಾ ಸರ್ ತುಂಬ ಒಳ್ಳೆ ಕಂಟೆಂಟ್ ಸಿದ್ಧ ಮಾಡಿಕೊಂಡಿದ್ದಾರೆ. ದೊಡ್ಡ ಮಟ್ಟದಲ್ಲಿ ಈ ಸಿನಿಮಾ ಮೂಡಿಬರಲಿದೆ’ ಎಂದು ಭರವಸೆ ವ್ಯಕ್ತಪಡಿಸುತ್ತಾರೆ ಪ್ರಮೋದ್. ಇದಲ್ಲದೇ ಇನ್ನೂ ಕೆಲ ಚಿತ್ರಗಳ ಮಾತುಕತೆ ನಡೆಯುತ್ತಿದ್ದು, ಎರಡು ಕಥೆಗಳು ಇಷ್ಟವಾಗಿವೆಯಂತೆ. ಸದ್ಯಕ್ಕಿರುವ ಪ್ರಾಜೆಕ್ಟ್‌ಗಳನ್ನು ಪೂರ್ಣಗೊಳಿಸಿ ಡಿಸೆಂಬರ್‌ನಲ್ಲಿ ಹೊಸ ಸಿನಿಮಾಗಳತ್ತ ಗಮನ ಹರಿಸುವ ಆಲೋಚನೆ ಪ್ರಮೋದ್ ಅವರದು.