ತಮಿಳುನಾಡು: ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ಬಹುನಿರೀಕ್ಷಿತ ಆ್ಯಕ್ಷನ್ ಪ್ಯಾಕ್ಡ್ 'ದಿ ಪ್ಯಾರಡೈಸ್' (The Paradise) ಸಿನಿಮಾ ಬಿಡುಗಡೆಗೊಂಡ ದಿನದಿಂದ ಇಂದಿನವರೆಗೆ ಮಿಶ್ರ ಪ್ರತಿಕ್ರಿಯೆಗಳನ್ನು ಸ್ವೀಕರಿಸಿದೆ. ಇದರ ಬೆನ್ನಲ್ಲೇ ಅನೇಕ ಕಡೆಯಿಂದ ನೆಗೆಟಿವ್ ವಿಮರ್ಶೆಗಳು ಹರಿದುಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ನಟನ ಸಿನಿಮಾವನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗಿದೆ. ದುಪ್ಪಟ್ಟು ನಿರೀಕ್ಷೆಗಳ ಸಮಯದಲ್ಲೇ ಹೀಗಾಗಿದ್ದು ಸದ್ಯ ಚಿತ್ರತಂಡಕ್ಕೆ ಬೇಸರ ನೀಡಿದಂತಾಗಿದ್ದು, ಸ್ವತಃ ನಾನಿ ಅವರೇ ಇದೀಗ ಟ್ವೀಟ್ ಮೂಲಕ ಓಪನ್ ಆಗಿ ಮಾತನಾಡಿದ್ದಾರೆ.
ಶ್ರೀಕಾಂತ್ ಒಡೆಲಾ ನಿರ್ದೇಶನದ ಹಾಗೂ ನಾನಿ ಅಭಿನಯದ 'ದಿ ಪ್ಯಾರಡೈಸ್' ಚಿತ್ರವು ಇದೇ ಸೆಪ್ಟೆಂಬರ್ 24ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಭಾರಿ ನಿರೀಕ್ಷೆಗಳ ನಡುವೆ ರಿಲೀಸ್ ಆದ ಈ ಸಿನಿಮಾವು ವಿಭಜಿತ ಚರ್ಚೆಗೆ ಗ್ರಾಸವಾಗಿದ್ದು, ತೆಲುಗು ರಾಜ್ಯಗಳು ಮತ್ತು ಕರ್ನಾಟಕದಲ್ಲಿ ನೆಗೆಟಿವ್ ರಿವ್ಯೂಗಳು ಹೆಚ್ಚಾಗಿವೆ. ಪ್ರೇಕ್ಷಕರು, ಅಭಿಮಾನಿಗಳು ಮತ್ತು ವಿಮರ್ಶಕರು ಚಿತ್ರದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿರುವ ನಾನಿ, ಭಾವನಾತ್ಮಕ ಪೋಸ್ಟ್ ಅನ್ನೇ ಹಂಚಿಕೊಂಡಿದ್ದಾರೆ.
"ನಿಮ್ಮ ಎಲ್ಲಾ ಪ್ರತಿಕ್ರಿಯೆಗಳನ್ನು ನಾನು ನೋಡಿದೆ. ನೀವು ತೋರಿಸಿದ ಪ್ರೀತಿಯನ್ನು ನಾನು ಸ್ವೀಕರಿಸಿದ್ದೇನೆ. ಅದೇ ಸಮಯದಲ್ಲಿ, ನೀವು ಮಾಡಿದ ತಮಾಷೆಯ ಟ್ರೋಲ್‌ಗಳನ್ನು ನಾನು ಎಂಜಾಯ್ ಮಾಡಿದೆ. ಪ್ರೇಕ್ಷಕರು ಚಿತ್ರವನ್ನು ತಮ್ಮದೇ ಎಂದು ಸ್ವೀಕರಿಸಿದ ರೀತಿ ನನ್ನ ಹೃದಯವನ್ನು ಮುಟ್ಟಿತು. ಇದೇ ಸಂದರ್ಭದಲ್ಲಿ, ವಿಮರ್ಶಕರು ಮತ್ತು ಸಿನಿಪ್ರೇಮಿಗಳು ನಮ್ಮ ಚಿತ್ರದ ಕುರಿತಂತೆ ನೀಡುತ್ತಿರುವ ಅಭಿಪ್ರಾಯಗಳಿಂದ ನಾವು ಕಲಿತಿದ್ದೇವೆ. ನಾವೆಲ್ಲರೂ ದಿ ಪ್ಯಾರಡೈಸ್‌ಗಾಗಿ ತುಂಬಾ ಶ್ರಮ ಹಾಕಿದ್ದೀವಿ. ನಿಮಗೆ ಒಂದು ಅನನ್ಯ ಅನುಭವವನ್ನು ನೀಡುವ ಉದ್ದೇಶದಿಂದ ಈ ಚಿತ್ರಕ್ಕಾಗಿ ರಕ್ತ, ಬೆವರು ಹರಿಸಿದ್ದೇವೆ. ಈಗ ಈ ಸಿನಿಮಾ ನಿಮ್ಮದು. ನೀವಿದನ್ನು ಸಂಭ್ರಮಿಸುತ್ತೀರೋ ಇಲ್ಲ, ಟೀಕಿಸುತ್ತೀರೋ, ಅದು ನಿಮಗೆ ಬಿಟ್ಟದ್ದು" ಎಂದು ಬರೆದುಕೊಂಡಿದ್ದಾರೆ.
ಚಿತ್ರ ಬಿಡುಗಡೆಯಾಗುವ ಮೊದಲು ಪ್ರೇಕ್ಷಕರು ತಮ್ಮ ಮೇಲಿನ ಉತ್ಸಾಹ ಮತ್ತು ತೋರಿದ ಪ್ರೀತಿಗೆ ವಿಶೇಷವಾಗಿ ಧನ್ಯವಾದ ಅರ್ಪಿಸಿರುವ ನಾನಿ, 'ಚಿತ್ರಕ್ಕಾಗಿ ನೀವು ತೋರಿಸಿದ ಉತ್ಸಾಹ ಮತ್ತು ನನ್ನ ಮೇಲಿನ ಪ್ರೀತಿ ನನ್ನ ಹೃದಯಕ್ಕೆ ಹತ್ತಿರವಾಗಿದೆ. ನಿಮ್ಮೆಲ್ಲರಿಗೂ ಧನ್ಯವಾದ ಹೇಳುವುದನ್ನು ಬಿಟ್ಟು ಬೇರೇನೂ ಹೇಳಲು ಸಾಧ್ಯವಿಲ್ಲ ಎಂದು ಭಾವನಾತ್ಮಕವಾಗಿ ಹೇಳಿಕೊಂಡಿದ್ದಾರೆ. ನಟನ ಈ ಪೋಸ್ಟ್ ನೋಡಿದ ಅಭಿಮಾನಿಗಳು, ನೆಗೆಟಿವ್ ರಿವ್ಯೂ ಮತ್ತು ಟ್ರೋಲ್ಗಳು ಒಂದು ಚಿತ್ರತಂಡಕ್ಕೆ ಎಷ್ಟು ದೊಡ್ಡ ಮಟ್ಟದಲ್ಲಿ ನಷ್ಟ ಉಂಟು ಮಾಡುತ್ತದೆ ಎಂದು ತೀವ್ರ ಅಸಮಾಧಾನ ಹೊರಹಾಕಿದ್ದಾರೆ,(ಏಜೆನ್ಸೀಸ್).