ಸಿನಿವಾಣಿ

'ನಮ್ಮವರೇ ನಮ್ಮ ಕಾಲೆಳೆಯುತ್ತಾರೆ'; ಚಿತ್ರರಂಗದಿಂದ ದೂರ ಸರಿಯುವ ಬಗ್ಗೆ ನಟ ಜೆಕೆ ಸ್ಪಷ್ಟನೆ

ಬೆಂಗಳೂರು: ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಮಿಂಚಿರುವ ಖ್ಯಾತಿ ನಟ ಕಾರ್ತಿಕ್ ಜಯರಾಮ್‌ಗೆ ಸಲ್ಲುತ್ತದೆ. ಆದರೆ, ಕೆಲವು ದಿನಗಳ ಹಿಂದೆ ಚಿತ್ರರಂಗಕ್ಕೆ ಗುಡ್ ಬೈ ಹೇಳುವುದಾಗಿ ಜೆಕೆ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಅದಕ್ಕೆ, ಹಲವು ತಾರೆಯರು, ಅಭಿಮಾನಿಗಳು ಆ ಆಲೋಚನೆಯನ್ನು ಕೈ ಬಿಡುವಂತೆ ಒತ್ತಾಯಿಸಿದ್ದರು. ಅದಾದ ಸ್ವಲ್ಪ ಹೊತ್ತಿಗೆ ಜೆಕೆ ಗುಡ್‌ಬೈ ಪೋಸ್ಟ್ ಡಿಲೀಟ್ ಮಾಡಿದ್ದರು.

ಇದೀಗ ‘ಐರಾವನ್’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ಜೆಕೆ, ‘ಬಹುಶಃ ಇದು ನನ್ನ ಕೊನೆಯ ಸಿನಿಮಾಗಳಲ್ಲಿ ಒಂದು. ಆದರೆ, ಉತ್ತಮ ತಂಡಗಳು ಸಿಕ್ಕರೆ ಮತ್ತೆ ನಟಿಸುತ್ತೇನೆ’ ಎಂದಿದ್ದಾರೆ. ‘ನಾನು ಬೇರೆ ಭಾಷೆಗಳ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದೇನೆ. ಬೇರೆ ಇಂಡಸ್ಟ್ರಿಗಳಲ್ಲಿ ಎಷ್ಟು ಮರ್ಯಾದೆ ನೀಡುತ್ತಾರೆ. ಹಿಂದಿ ಧಾರಾವಾಹಿಗಳಲ್ಲಿ ಅವಕಾಶಗಳಿದ್ದರೂ, ನನ್ನ ಕನ್ನಡದಲ್ಲಿ ನಟಿಸಬೇಕು ಅಂತ ಇಲ್ಲಿಗೆ ಬಂದೆ.

‘ಐರಾವನ್’ ಚಿತ್ರದ ನಿರ್ಮಾಪಕರು ನನ್ನನ್ನು ತಲುಪಲು ಪ್ರಯತ್ನ ಪಟ್ಟಾಗ ನನ್ನ ಆತ್ಮೀಯ ಸ್ನೇಹಿತನೇ ಅದಕ್ಕೆ ಅಡ್ಡಿ ಹಾಕಿದ್ದ. ನಾನು ಅವಕಾಶಗಳನ್ನು ಹುಡುಕುವಾಗ ನಮ್ಮವರೇ ಸಿಗದಂತೆ ಮಾಡಿದರು. ಈ ರೀತಿ ಹಲವು ಅನುಭವಗಳಾದಾಗ ಬೇಸರವಾಗಿ ಚಿತ್ರರಂಗದಿಂದ ದೂರ ಇರಬೇಕು ಅಂತನ್ನಿಸಿತು. ಇಲ್ಲಿ ಈ ರೀತಿಯ ನೋವುಗಳನ್ನು ಅನುಭಿಸುವುದಕ್ಕಿಂತ, ಇಲ್ಲಿಂದ ದೂರ ಹೋಗಿ ನೆಮ್ಮದಿಯಿಂದ ಇರಬೇಕು ಅಂತ ನಿರ್ಧರಿಸಿದ್ದೆ. ಸ್ಟ್ರಕ್ಚರಲ್ ಎಂಜಿನಿಯರಿಂಗ್ ಓದಿಕೊಂಡಿದ್ದೇನೆ. ಬೇರೆ ಕೆಲಸ ಮಾಡುತ್ತೇನೆ’ ಎಂದು ಹೇಳಿಕೊಳ್ಳುತ್ತಾರೆ ಜೆಕೆ.

ರಾಮ್ ರಂಗ ನಿರ್ದೇಶನದ ‘ಐರಾವನ್’ ಇದೇ ತಿಂಗಳ 16ರಂದು ತೆರೆಗೆ ಬರಲಿದೆ. ಜತೆಗೆ ಜೆಕೆ ‘ಕಾಡ’ ಎಂಬ ಮತ್ತೊಂದು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.