ಸಿನಿವಾಣಿ

'ಟೈಗರ್ ಶ್ರಾಫ್​ ಕಾರಿನ ಹಿಂದೆಯೇ ನನ್ನ ಕಾರಿತ್ತು, ರಕ್ತದ ಕಲೆ ನೋಡಿದೆ'; ಗುಂಡಿನ ದಾಳಿ ಬಗ್ಗೆ ನಟ ಕರಣ್ ವೀರ್ ಮೆಹ್ರಾ ಮಾತು..Karan Veer Mehra

  • ಟೈಗರ್​​ ಶ್ರಾಫ್ ಅವರ ಮೇಲೆ ಗುಂಡಿನ ದಾಳಿ ನಡೆದ ಬಗ್ಗೆ ಮಾತನಾಡಿದ ಬಿಗ್​ಬಾಸ್​ 18ರ ವಿಜೇತ ಕರಣ್ ವೀರ್ ಮೆಹ್ರಾ

  • 'ನಟನ ಕಾರಿನ ಹಿಂದೆಯೇ ನನ್ನ ಕಾರಿತ್ತು. ನಾನು ರಕ್ತದ ಕಲೆಗಳನ್ನು ಕಂಡೆ' ಎಂದ ಕರಣ್ ವೀರ್ ಮೆಹ್ರಾ

  • 'ನಾನು ಗೇಟ್ ಪಾಸ್ ಮಾಡಿ ಬರುವವೇಳೆಗೆ ಟೈಗರ್​, ಕಾರು ಚಾಲಕನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು'.

  • ಗುಂಡಿನ ದಾಳಿಯ ಘಟನಾ ಸ್ಥಳವನ್ನು ಕಂಡ ಪ್ರತ್ಯಕ್ಷದರ್ಶಿ ಕರಣ್ ವೀರ್ ಮೆಹ್ರಾ ಹೇಳಿದ್ದಿಷ್ಟು .

ಮುಂಬೈ: 'ಟೈಗರ್​ ಶ್ರಾಫ್​ ಅವರ ಮೇಲೆ ಗುಂಡಿನ ದಾಳಿ ನಡೆದಾಗ ನನ್ನ ಕಾರು ಅವರ ಕಾರಿನ ಹಿಂದೆಯೇ ಇತ್ತು. ಟೈಗರ್​ ಶ್ರಾಫ್​ ಅವರು ಗುಂಡಿನ ದಾಳಿಯಿಂದ ಪಾರಾಗಿದ್ದು ಖುಷಿಯಿದೆ. ಅವರ ಕಾರು ಚಾಲಕ ಬೇಗನೆ ಗುಣಮುಖರಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ' ಎಂದು ನಟ ಮತ್ತು ಬಿಗ್​ಬಾಸ್ ಹಿಂದಿ ಸೀಸನ್​ 18ರ ವಿಜೇತ ಸ್ಪರ್ಧಿ ಕರಣ್ ವೀರ್ ಮೆಹ್ರಾ ಹೇಳಿದರು.

ಬಾಲಿವುಡ್‌ನ ಖ್ಯಾತ ನಟ ಟೈಗರ್ ಶ್ರಾಫ್​ ಅವರನ್ನು ಗುರಿಯಾಗಿಸಿ ಭಾನುವಾರ(ಅ.18) ಸಂಜೆ ಗುಂಡಿನ ದಾಳಿ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಮುಂಬೈನ ಜುಹು ಪ್ರದೇಶದಲ್ಲಿನ ಫುಟ್ಬಾಲ್ ಕ್ರೀಡಾಂಗಣದಿಂದ ಹೊರಬರುತ್ತಿದ್ದ ಶ್ರಾಫ್ ಅವರ ಮೇಲೆ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳ ತಂಡ ಗುಂಡಿನ ದಾಳಿ ನಡೆಸಿದೆ. ಶ್ರಾಫ್ ಯಾವುದೇ ಅಪಾಯವಿಲ್ಲದೆ ಪಾರಾದರೆ, ಅವರ ಕಾರು ಚಾಲಕ ಹಾಗೂ ಆಟೋ ಡ್ರೈವರ್ ಗಾಯಗೊಂಡಿದ್ದಾರೆ.

ಫುಟ್​ಬಾಲ್​ ಕ್ರೀಡಾಂಗಣದಲ್ಲಿ ಟೈಗರ್​ ಶ್ರಾಫ್​​, ಅಪರಶಕ್ತಿ ಖುರಾನಾ , ಅಭಿಮನ್ಯು ದಸ್ಸಾನಿ, ಸೀಸರ್ ಗೊನ್ಸಾಲ್ವೆಸ್, ಅಭಿಷೇಕ್ ಬಜಾಜ್ ಹಾಗೂ ಕರಣ್ ವೀರ್ ಮೆಹ್ರಾ ಸೇರಿದಂತೆ ಬಾಲಿವುಡ್​ ಸಿನಿಮಾ ರಂಗ ಮತ್ತು ಕಿರುತರೆ ನಟರಿದ್ದರು. ಗುಂಡಿನ ದಾಳಿ ನಡೆಸಿದಾಗ ಅವರ ಕಾರಿನ ಹಿಂದೆ ಕರಣ್​ ವೀರ್​ ಮೆಹ್ರಾರ ಕಾರಿತ್ತು ಎಂದು ಹೇಳಿಕೊಂಡಿದ್ದಾರೆ.

ಕರಣ್ ವೀರ್ ಮೆಹ್ರಾ ಹೇಳಿದ್ದೇನು?

'ನನ್ನ ಕಾರು ಟೈಗರ್ ಕಾರಿನ ಹಿಂದೆನೇ ಇತ್ತು. ನಾವು ಗೇಟ್ ದಾಟಿ ಬರುವಷ್ಟರಲ್ಲಿ, ನನ್ನ ಕಾರು ತಲುಪಿದಾಗ ಅಲ್ಲಿ ರಕ್ತದ ಕಲೆಗಳು ಮಾತ್ರ ಕಂಡವು. ಟೈಗರ್ ಚಾಲಕನಿಗೆ ಗುಂಡೇಟು ಬಿದ್ದಿದೆ ಎಂಬುದು ನನಗೆ ತಿಳಿಯಿತು. ಟೈಗರ್ ಸುರಕ್ಷಿತವಾಗಿದ್ದಾರೆ ಎಂದು ಕೇಳಿ ನಿಜಕ್ಕೂ ಸಂತೋಷವಾಯ್ತು. ಆದರೆ ಗಾಯಗೊಂಡ ಚಾಲಕ ಆದಷ್ಟು ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ' ಎಂದು ಕರಣ್​ ಹೇಳಿದರು,.

ಮುಂದುವರೆದು ಮಾತನಾಡಿದ ಅವರು, 'ಆತಂಕವಾಗಿದ್ದು ಏನೆಂದರೆ ಘಟನೆ ನಡೆದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಕೆಲ ಮಕ್ಕಳು ಹಬ್ಬದ ಸಂಭ್ರಮದಲ್ಲಿದ್ದರು. ಗುಂಡಿನ ದಾಳಿ ಕೇಳುತ್ತಿದ್ದಂತೆ ಚೆಲ್ಲಾಪಿಲ್ಲಿಯಾಗಿ ಓಡಿದರು. ನನ್ನ ಕಾರು ಸ್ವಲ್ಪ ಹಿಂದೆ ಇತ್ತು, ಅಲ್ಲಿದ್ದ ಕೆಲವರು ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಮೊದಲು ಯಾರೋ ಪಟಾಕಿ ಸಿಡಿಸುತ್ತಿದ್ದಾರೆ ಎಂದೇ ನಾವು ಭಾವಿಸಿದ್ದೆವು. ಆದರೆ ಅದು ಗುಂಡಿನ ದಾಳಿಯಾಗಿತ್ತು. ನಂತರ ಸೆಕ್ಯುರಿಟಿ ಅಲರ್ಟ್ ಆಗಿ ಪೊಲೀಸರಿಗೆ ಕರೆ ಮಾಡಲಾಯಿತು. ಅಷ್ಟರಲ್ಲಿ ಟೈಗರ್ ತಮ್ಮ ಡ್ರೈವರ್ ಜೊತೆ ಅಲ್ಲಿಂದ ಹೊರಟು ಹೋಗಿದ್ದರು'ಎಂದರು.

ನನಗೆ ಟೈಗರ್​ ಶ್ರಾಫ್ ಪರಿಚಯವಿದೆ

'ನಾನು ಬಹಳ ಕಾಲದಿಂದ ಟೈಗರ್​ ಶ್ರಾಫ್​ ಅವರನ್ನು ಬಲ್ಲೆ. ಎಲ್ಲರಿಗೂ ಬಹಳ ಗೌರವ ನೀಡುವ ಅತ್ಯುತ್ತಮ ವ್ಯಕ್ತಿ. ಅವರ ಕುಟುಂಬವೂ ನನಗೆ ಚೆನ್ನಾಗಿ ಗೊತ್ತು. ಟೈಗರ್ ಮತ್ತು ಅವರ ಕುಟುಂಬ ಈ ಪರಿಸ್ಥಿತಿಯನ್ನು ಎದುರಿಸುತ್ತಿರುವುದನ್ನು ನೋಡುವುದು ನಿಜಕ್ಕೂ ಆಘಾತಕಾರಿ ಎಂದು ಬೇಸರ ವ್ಯಕ್ತಪಡಿಸಿದರು ಕರಣ್ ವೀರ್ ಮೆಹ್ರಾ.

ತನಿಖೆಗೆ ಸೂಚನೆ

ನಟ ಶ್ರಾಫ್ ಅವರ ಕಾರಿನ ಮೇಲೆ ಏಳು ಸುತ್ತು ಗುಂಡಿನ ದಾಳಿ ನಡೆಸಲಾಗಿದೆ. ನಟನನ್ನು ನೋಡಲು ದೊಡ್ಡ ಮಟ್ಟದಲ್ಲಿ ಜನಸ್ತೋಮ ನೆರೆದಿತ್ತು. ಈ ವೇಳೆ ಗುಂಪಿನ ಒಳಗಿನಿಂದಲೇ ವಾಹನದತ್ತ ಬಂದ ಆರೋಪಿಗಳು ಹಲವು ಸುತ್ತು ಗುಂಡು ಹಾರಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.. ಶೀಘ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಿಎಂ ದೇವೇಂದ್ರ ಫಡ್ನವಿಸ್ ಸೂಚಿಸಿದ್ದಾರೆ, (ಏಜೆನ್ಸೀಸ್).