ಈ ಬಾರಿಯ ದಸರಾಕ್ಕೆ ಸಿನಿಮಾ ಜಾತ್ರೆ ನಡೆಯಲಿದೆ. ಕನ್ನಡ ಸೇರಿ ತೆಲುಗು, ತಮಿಳು, ಹಿಂದಿಯಲ್ಲೂ ಬಹುನಿರೀಕ್ಷಿತ ಚಿತ್ರಗಳು ರಿಲೀಸ್ ಆಗುತ್ತಿವೆ. ಹೀಗಾಗಿ, ಈ ನವರಾತ್ರಿಗೆ ಸಿನಿಮಾ ಕ್ರೇಜ್ ರಂಗೇರಲಿದೆ. ಇನ್ನು ದಸರಾಕ್ಕೆ ಕಾಲಿವುಡ್‌ನಲ್ಲಿ ಬಹುನಿರೀಕ್ಷಿತ ಸಿನಿಮಾಗಳು ತೆರೆಗೆ ಬರುತ್ತಿವೆ. ಅದರಲ್ಲೂ ರಜಿನಿಕಾಂತ್ ಮತ್ತು ನೆಲ್ಸನ್ ದಿಲೀಪ್ ಕುಮಾರ್ ಕಾಂಬಿನೇಷನ್‌ನ ‘ಜೈಲರ್ 2’ ಇದೇ ಅ. 15ಕ್ಕೆ ತೆರೆ ಕಾಣಲಿದೆ. ಈ ಮೊದಲು ‘ಜೈಲರ್ 2’ ಜತೆಗೆ ಧನುಷ್ ಅಭಿನಯದ ‘ಓಂ’ ಕೂಡ ರಿಲೀಸ್ ಆಗಲಿದೆ ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ಬಾಕ್ಸಾಫೀಸ್‌ನಲ್ಲಿ ಅಳಿಯ ಹಾಗೂ ಮಾಜಿ ಮಾವನ ನಡುವೆ ಸ್ಪರ್ಧೆ ನಡೆಯಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಧನುಷ್ ಚಿತ್ರ ‘ಓಂ’ ಬಿಡುಗಡೆ ಮುಂದೂಡಿದ್ದು, ರಜಿನಿಕಾಂತ್ ಜತೆಗೆ ಸ್ಪರ್ಧೆಗಿಳಿಯುತ್ತಿಲ್ಲ ಎಂದು ಘೋಷಿಸಿದ್ದಾರೆ. ‘ನಾವೆಲ್ಲರೂ ಬಹುವರ್ಷಗಳಿಂದ ಮೆಚ್ಚಿ, ಆರಾಧಿಸುತ್ತಾ ಬಂದಿರುವ ನಮ್ಮ ಸೂಪರ್‌ಸ್ಟಾರ್ ರಜಿನಿಕಾಂತ್ ಅಭಿನಯದ ‘ಜೈಲರ್ 2’ ಇದೇ ಅ.15ಕ್ಕೆ ರಿಲೀಸ್ ಆಗುತ್ತಿದೆ. ಅವರ ಮೇಲಿನ ಅಪಾರ ಗೌರವ ಹಾಗೂ ಅಭಿಮಾನದಿಂದಾಗಿ ನಮ್ಮ ‘ಓಂ’ ಚಿತ್ರವನ್ನು ಮುಂದೂಡಲು ನಿರ್ಧರಿಸಿದ್ದೇವೆ. ರಜಿನಿಕಾಂತ್ ಸರ್ ಅವರನ್ನು ಕೇವಲ ನಟನಾಗಿ ಅಲ್ಲ, ಬದಲಾಗಿ ಅದಕ್ಕಿಂತ ಮಿಗಿಲಾಗಿ ಗೌರವಿಸುತ್ತೇವೆ. ಸಿನಿಮಾ ಅಷ್ಟೇ ಅಲ್ಲ, ಅವರ ವ್ಯಕ್ತಿತ್ವದ ಅಭಿಮಾನಿ ನಾನು’ ಎಂದಿರುವ ಧನುಷ್ ಶೀಘ್ರದಲ್ಲಿ ‘ಓಂ’ ಹೊಸ ರಿಲೀಸ್ ಡೇಟ್ ಅನೌನ್ಸ್ ಮಾಡುವುದಾಗಿ ತಿಳಿಸಿದ್ದಾರೆ. -ಏಜೆನ್ಸೀಸ್