ಬೆಂಗಳೂರು: ಸಿನಿಮಾ ಕೆಲಸಗಳು ಸ್ಥಬ್ಧವಾದ ಬೆನ್ನಲ್ಲೆ, ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಹಿಂದಿಗೆ ಹೊರಟು ನಿಂತಿದ್ದಾರೆ. ಬರೀ ಅವರೊಬ್ಬರೇ ಹೊರಟಿಲ್ಲ ಜತೆಗೆ ‘ಯಜಮಾನ’ನನ್ನೂ ಕರೆದೊಯ್ಯುತ್ತಿದ್ದಾರೆ. ಅರೇ.. ದರ್ಶನ್‌ಗೆ ಒಮ್ಮಿಂದೊಮ್ಮೆ ಅಂಥದ್ದೇನಾಯ್ತು? ಎಂದು ಅಚ್ಚರಿಗೊಳಗಾಗಬೇಡಿ. ಏಕೆಂದರೆ, ದರ್ಶನ್ ಹೊರಟು ನಿಂತಿರುವುದು ಕಳೆದ ವರ್ಷ ತೆರೆಕಂಡ ‘ಯಜಮಾನ’ ಚಿತ್ರದ ಜತೆಗೆ.
ಹೌದು, ಹಿಂದಿ ಕಿರುತೆರೆಯಲ್ಲಿ ಮತ್ತು ಯೂಟ್ಯೂಬ್‌ನಲ್ಲಿ ದರ್ಶನ್ ಡಬ್ಬಿಂಗ್ ಸಿನಿಮಾಗಳಿಗೆ ಭಾರೀ ಬೇಡಿಕೆ ಇದೆ. ಈಗಾಗಲೇ ಯೂಟ್ಯೂಬ್‌ನಲ್ಲಿರುವ
‘ತಾರಕ್’, ‘ಐರಾವತ’ ಮತ್ತು ‘ಚಕ್ರವರ್ತಿ’ ಸಿನಿಮಾಗಳು ಮಿಲಿಯನ್‌ಗಟ್ಟಲೆ ಜನರಿಂದ ನೋಡಲ್ಪಟ್ಟಿವೆ. ಈಗ ಅದೇ ರೀತಿ ‘ಯಜಮಾನ’ ಸಿನಿಮಾ ಅದೇ ಶೀರ್ಷಿಕೆಯಲ್ಲಿ ಮೂಡಿಬರಲಿದೆ. ಪಿ ಕುಮಾರ್ ಮತ್ತು ಹರಿಕೃಷ್ಣ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಚಿತ್ರಕ್ಕೆ ಶೈಲಜಾ ನಾಗ್ ಬಂಡವಾಳ ಹೂಡಿದ್ದರು. ಸದ್ಯ ಹಿಂದಿಯ ಡಬ್ಬಿಂಗ್ ಹಕ್ಕನ್ನು ಸಂಜಯ್ ಲಲ್ವಾನಿ, ಪ್ರಕಾಶ್ ಲಲ್ವಾನಿ ಪಡೆದುಕೊಂಡಿದ್ದು, ಶೀಘ್ರದಲ್ಲಿ ಸಿನಿಮಾ ಯೂಟ್ಯೂಬ್‌ನಲ್ಲಿ ಲಭ್ಯವಾಗಲಿದೆ. ದರ್ಶನ್ ಜತೆಗೆ ತಾನ್ಯಾ ಹೋಪ್, ರಶ್ಮಿಕಾ ಮಂದಣ್ಣ ಸೇರಿ ಹಲವು ಪೋಷಕ ಕಲಾವಿದರು ಪಾತ್ರವರ್ಗದಲ್ಲಿದ್ದಾರೆ.