ಸಿನಿವಾಣಿ

ಹಿಂದಿ ಹೇರಿಕೆ ವಿರುದ್ಧ ದರ್ಶನ್​ ಖಡಕ್​ ಪೋಸ್ಟ್​; ನಮ್ಮ ತೆರಿಗೆ ಹಣದಲ್ಲಿ ಹಿಂದಿ ದಿವಸ್​ ಆಚರಣೆ ಬೇಡವೆಂದ ದಚ್ಚು

ಬೆಂಗಳೂರು: ಕಳೆದ ಒಂದು ವಾರದಿಂದಲೂ ರಾಜ್ಯದಲ್ಲಿ ಹಿಂದಿ ಹೇರಿಕೆ ಮತ್ತು ಹಿಂದಿ ದಿವಸ್​ ಆಚರಣೆ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಸರ್ಕಾರಿ ಅಧಿಕಾರಿಗಳು, ಬ್ಯಾಂಕ್ ಉದ್ಯೋಗಿಗಳು ತಾವಿರುವಲ್ಲಿನ ಸ್ಥಳೀಯ ಭಾಷೆಯೊಂದಿಗೆ ಹಿಂದಿಯಲ್ಲೂ ವ್ಯವಹಾರ ಮಾಡಬೇಕು ಎಂದು ಗೃಹ ಸಚಿವ ಅಮಿತ್​ ಷಾ ಅವರು ಟ್ವೀಟ್​ ಮಾಡಿದ ನಂತರ ಕಾವು ಹೆಚ್ಚಾಗಿದೆ. ಹಿಂದಿ ಹೇರಿಕೆಯನ್ನು ಅನೇಕ ಕನ್ನಡ ಪರ ಸಂಘಟನೆಗಳು, ಹೋರಾಟಗಾರರು ವಿರೋಧಿಸುತ್ತಿದ್ದಾರೆ.

ಇದೀಗ ಸ್ಯಾಂಡಲ್​ವುಡ್​ ನಟ ದರ್ಶನ್​ ಅವರು ಫೇಸ್​​ಬುಕ್​ನಲ್ಲಿ ಕನ್ನಡ ಪರ ಪೋಸ್ಟ್ ಹಾಕಿದ್ದಾರೆ. ಸ್ವಾಭಿಮಾನಿ ಕನ್ನಡಿಗರಿಗೆ ಕನ್ನಡವೇ ರಾಷ್ಟ್ರಭಾಷೆ ಎಂದು ಬರೆದುಕೊಂಡಿದ್ದಾರೆ.

ಬಹಳ ವರ್ಷಗಳಿಂದಲೂ ಹಿಂದಿ ಹೇರಿಕೆ, ಕಾಲ ಕ್ರಮೇಣ ಹೆಚ್ಚಾಗುತ್ತಲೇ ಇದೆ. ಈಗಾಗಲೇ ಕರ್ನಾಟಕದ ಗಡಿ ಪ್ರದೇಶಗಳಲ್ಲಿ ಅನ್ಯ ಭಾಷೆಗಳ ಬಳಕೆಯಿಂದ ನಮ್ಮ ಕನ್ನಡದ ಅಸ್ತಿತ್ವಕ್ಕೆ ಧಕ್ಕೆಯುಂಟಾಗುತ್ತಿದೆ. ಈ ಬಗ್ಗೆ ಪ್ರತಿಭಟಿಸದೆ ನಾವು ಸುಮ್ಮನಿದ್ದರೆ ಮುಂದೊಮ್ಮೆ ಕನ್ನಡಿಗ ಎನ್ನುವ ಅಸ್ತಿತ್ವವೇ ದೂರವಾಗುವ ದಿನ ಬರಬಹುದು. ಕನ್ನಡಿಗರ ತೆರಿಗೆ ಹಣದಲ್ಲಿ ಹಿಂದಿ ದಿವಸ್ ಆಚರಣೆ ಯೋಗ್ಯವಲ್ಲ. ಅದು ಉತ್ತರ ಭಾರತದ ಕೆಲವು ರಾಜ್ಯಗಳಿಗೆ ಸೀಮಿತವಾಗಿದ್ದರೆ ಒಳಿತು.

ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವುದು ನಮ್ಮ ಭಾರತ ಸಂವಿಧಾನದ ಪ್ರತೀಕವಾಗಿದೆ. ಯಾವುದೋ ಉತ್ತರದ ಒಂದು ಪ್ರಾದೇಶಿಕ ಭಾಷೆಯನ್ನು ನಮ್ಮ ಮೇಲೆ ಹೇರಿ ನಮ್ಮ ಸಂಸ್ಕೃತಿ, ಭಾಷೆ, ನೆಲೆಯನ್ನು ಕಸಿದುಕೊಳ್ಳುವುದು ಹೀನಾಯಕರ ಸಂಗತಿಯೆಂದರೆ ತಪ್ಪಾಗಲಾರದು. ನಮ್ಮ ಕೊನೆಯುಸಿರಿರುವವರೆಗೂ ಕನ್ನಡ ಪರವಾಗಿ ನಿಲ್ಲುತೇವೆ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎಂದು ಖಡಕ್​ ಪೋಸ್ಟ್​ನ್ನು ದಚ್ಚು ಹಾಕಿದ್ದಾರೆ. ಜತೆಗೆ ತಾವು ಕನ್ನಡ ಬಾವುಟ ಹಿಡಿದು ನಿಂತಿರುವ ಫೋಟೋವೊಂದನ್ನೂ ಶೇರ್ ಮಾಡಿಕೊಂಡಿದ್ದಾರೆ.