ಬೆಂಗಳೂರು: ಆ ದಿನಗಳು ಚಿತ್ರ ಖ್ಯಾತಿಯ ನಟ ಚೇತನ್ ಅವರು ಫೆ.2ರಂದು ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಭಾವಿ ಪತ್ನಿ ಮೇಘಾ ಅವರೊಂದಿಗೆ ಮಾನವೀಯ ಕಾರ್ಯವೊಂದಕ್ಕೆ ಚೇತನ್ ಸಜ್ಜಾಗುತ್ತಿದ್ದಾರೆ.
ವಲ್ಲಭ್ ನಿಕೇತನ ವಿನೋಭಾ ಭಾವೆ ಆಶ್ರಮದಲ್ಲಿ, ಫೆ.2ರ ಸಂಜೆ 6 ಗಂಟೆಗೆ ಅನಾಥಾಶ್ರಮದ ಮಕ್ಕಳು ಹಾಗೂ ವೃದ್ಧರ ಸಮ್ಮುಖದಲ್ಲಿ ಸರಳವಾಗಿ ವಿವಾಹ ಮಾಡಿಕೊಳ್ಳುತ್ತಿದ್ದಾರೆ.
ಹೀಗಾಗಿ ಆಶ್ರಮದ ಮಕ್ಕಳಿಗೆ ಮದುವೆಯ ನೆನಪಿನಾರ್ಥ ಹಾಸಿಗೆಯನ್ನು ನೀಡಲು ಚೇತನ್ ಮತ್ತು ಭಾವಿ ಪತ್ನಿ ಹಾಸಿಗೆ ಸಂಗ್ರಹ ಕಾರ್ಯದಲ್ಲಿ ತೊಡಗಿದ್ದಾರೆ. ಈ ಕುರಿತು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿರುವ ಚೇತನ್ ಮೇಘಾ, ವಿನಯ್ ಮತ್ತು ನಾನು ಕೆಲಸ ಮಾಡುತ್ತಿದ್ದೇವೆ. ಆಶ್ರಮ ಮಕ್ಕಳಿಗೆ ಹಾಸಿಗೆ ನೀಡಲು ನಾವು ತಯಾರಾಗುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಅಂದಹಾಗೆ ಚೇತನ್ ಮದುವೆಯಾಗಲು ಹೊರಟಿರುವ ಮೇಘಾ ಅಸ್ಸಾಂ ಮೂಲದವರು. ಇಬ್ಬರ ನಡುವೆ ಪ್ರೇಮಾಂಕುರವಾಗಿದ್ದು, ಈಗ ವಿವಾಹವಾಗಲು ಮುಂದಾಗುತ್ತಿದ್ದಾರೆ. ವಿವಾಹದ ಆಮಂತ್ರಣ ಪತ್ರಿಕೆ ಕೂಡ ಸರಳವಾಗಿ ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಮುದ್ರಿಸಿದ್ದಾರೆ.
ವಿವಾಹದ ಅಂಗವಾಗಿ ವಚನ-ಸೂಫಿ ಗಾಯನ, ಸಿದ್ದಿ, ಲಂಬಾಣಿ, ಕೊರಗ ನೃತ್ಯ ಹಾಗೂ ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಚೇತನ್ ಈ ಹಿಂದೆಯೇ ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್)