ಹುಬ್ಬಳ್ಳಿ: ‘ವಿಜಯಾನಂದ’ ಸಿನಿಮಾ ಚಿತ್ರೀಕರಣದಲ್ಲಿ ನಿರತನಾಗಿದ್ದಾಗ ಪುನೀತ್ ರಾಜಕುಮಾರ್ ನಿಧನದ ಸುದ್ದಿ ಬರ ಸಿಡಿಲಿನಂತೆ ಬಂದೆರಗಿತು. ನಿಜಕ್ಕೂ ಇದೊಂದು ದೊಡ್ಡ ದುರಂತ. ರಾಜ್ಯದ ಜನತೆಗೆ, ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಇಷ್ಟು ಚಿಕ್ಕ ವಯಸ್ಸಿಗೆ ಅಪ್ಪುಗೆ ಹೀಗಾಯ್ತು ಎಂಬುದು ನಂಬಲಸಾಧ್ಯ ಎಂದು ಹಿರಿಯ ನಟ ಅನಂತನಾಗ್ ಹೇಳಿದರು. ಡಾ.ರಾಜ್ ಅವರ ಕುಟುಂಬದ ಜತೆ ನನಗೆ ಹೆಚ್ಚು ನಂಟಿದೆ. ಪುನೀತ್ ಬಾಲನಟನಾಗಿದ್ದಾಗಿನಿಂದ ನನಗೆ ಗೊತ್ತು.
‘ಭಕ್ತ ಪ್ರಹ್ಲಾದ’ ಸಿನಿಮಾದಲ್ಲಿ ನಾನು ನಾರದನ ಪಾತ್ರ ನಿರ್ವಹಿಸಿದ್ದೆ. ಆಗಿನ್ನೂ ಅಪ್ಪು ತೊದಲು ನುಡಿಯುತ್ತಿದ್ದ ಬಾಲಕ. ನಂತರ ‘ಪರಮಾತ್ಮ’ದಲ್ಲಿ ಅಪ್ಪು ತಂದೆ ಪಾತ್ರದಲ್ಲಿ ನಟಿಸಿದ್ದೆ. ಬಳಿಕ ಪುನೀತ್ ನಿರ್ವಣದ ‘ಕವಲುದಾರಿ’ಯಲ್ಲಿ ನಟಿಸಿದ್ದೆ. ಈ ಚಿತ್ರಕ್ಕಾಗಿ ಹಲವು ಬಾರಿ ನಮ್ಮ ಮನೆಗೆ ಅಪ್ಪು ಬಂದಿದ್ದರು. ಹೊಸ ಬಗೆಯ ಕಂಟೆಂಟ್ ಸಿನಿಮಾ ಮಾಡಬೇಕೆಂಬ ಆಸೆ ಅವರಿಗಿತ್ತು. ಇನ್ನೂ ಅನೇಕ ಕೊಡುಗೆಗಳನ್ನು ಚಿತ್ರರಂಗಕ್ಕೆ ಕೊಡಬೇಕೆಂದು ಯೋಜನೆ ರೂಪಿಸಿದ್ದರು ಎಂದರು. ಅವರ ಕುಟುಂಬದವರಿಗೆ ಈ ದುರಂತ ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ಕರುಣಿಸಲಿ. ಚಿತ್ರರಂಗ ಹಾಗೂ ಅವರ ಕುಟುಂಬ ಇದನ್ನು ಹೇಗೆ ತೆಗೆದುಕೊಳ್ಳುತ್ತೆ ಎಂಬುದು ದೊಡ್ಡ ಪ್ರಶ್ನೆ ಯಾಗಿದೆ ಎಂದು ಮೌನ ವಾದರು.
ದೈಹಿಕವಾಗಿ ಶಕ್ತಿಶಾಲಿಯಾಗಿರಬೇಕು ಎಂಬುದು ಎಲ್ಲ ನಟರ ಬಯಕೆ. ಅದಕ್ಕೆ ನನ್ನ ವಿರೋಧವಿಲ್ಲ. ಆದರೆ ಚಿಕ್ಕ ವಯಸ್ಸಲ್ಲಿ ಹೀಗೆ ಆಗುವುದು ದುರಂತ. ಯಾಕೆಂದರೆ ಸಿನಿಮಾ ನಟ, ನಟಿಯರ ಮೇಲೆ ಬಹಳಷ್ಟು ಒತ್ತಡಗಳು ಇರುತ್ತವೆ. ಹಾಗಾಗಿ ಜಿಮ್ ಕಸರತ್ತು ಮಾಡುವ ನಟರು 6 ತಿಂಗಳಿಗೊಮ್ಮೆ ವೈದ್ಯರ ಬಳಿ ಪರೀಕ್ಷಿಸಿಕೊಳ್ಳಬೇಕು. ಪಲ್ಸ್ ರೇಟ್, ಬಿಪಿ, ಇಸಿಜಿ ಮತ್ತಿತರ ತಪಾಸಣೆಗಳನ್ನು ಮಾಡಿಸಿಕೊಳ್ಳಬೇಕು. ಇದರಿಂದ ಮುನ್ಸೂಚನೆಗಳು ಗೊತ್ತಾಗುತ್ತವೆ ಎಂದು ಅನಂತನಾಗ್ ಸಲಹೆ ನೀಡಿದರು.