ಸಿನಿವಾಣಿ

ನಾವೂ ಬರ್ತಿದ್ದೀವಿ!; ಇಲ್ಲಿದೆ ಬಾಲಿವುಡ್ ಚಿತ್ರಗಳ ಬಿಡುಗಡೆ ಪಟ್ಟಿ

ಕನ್ನಡ ಸೇರಿ ಬೇರೆ ಭಾಷೆಗಳಲ್ಲಿ ಬಿಗ್ ಬಜೆಟ್​ನ ಮತ್ತು ಸ್ಟಾರ್ ಚಿತ್ರಗಳ ಬಿಡುಗಡೆ ದಿನಾಂಕ ಘೋಷಣೆಯಾಗುತ್ತಿದ್ದರೂ, ಅದೇಕೋ ಬಾಲಿವುಡ್​ನಲ್ಲಿ ಮಾತ್ರ ದೊಡ್ಡ ಚಿತ್ರಗಳ ಬಿಡುಗಡೆಯ ಸುದ್ದಿಯೇ ಇರಲಿಲ್ಲ. ಈಗ ಒಂದೊಂದೇ ಚಿತ್ರಗಳ ಘೋಷಣೆಯಾಗುತ್ತಿದ್ದು, ಯಾವ ಮತ್ತು ಯಾರ ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಚಿತ್ರಣ ಇದೀಗ ಕ್ರಮೇಣ ಸಿಗುತ್ತಿದೆ.

ಬಿಗ್ ಚಿತ್ರಗಳ ಪೈಕಿ ಮೊದಲಿಗೆ ಅಕ್ಷಯ್ ಕುಮಾರ್ ಅಭಿನಯದ ‘ಸೂರ್ಯವಂಶಿ’ ಬಿಡುಗಡೆಯಾಗುತ್ತಿದೆ. ಕಳೆದ ವರ್ಷದ ಮಾರ್ಚ್ 23ಕ್ಕೆ ಈ ಚಿತ್ರ ಬಿಡುಗಡೆಯಾಗಬೇಕಿತ್ತು. ಅಷ್ಟರಲ್ಲಿ ಲಾಕ್​ಡೌನ್ ಘೋಷಣೆಯಾಗಿದ್ದರಿಂದ, ಈ ವರ್ಷ ಏಪ್ರಿಲ್ 02ಕ್ಕೆ ಬಿಡುಗಡೆಯಾಗಲಿದೆ. ಈ ಮೂಲಕ, ಬಿಗ್ ಚಿತ್ರಗಳ ಬಿಡುಗಡೆಗೆ ಮುನ್ನುಡಿ ಬರೆಯಲಿದೆ. ಆ ನಂತರ ಮೇ 12ಕ್ಕೆ ಸಲ್ಮಾನ್ ಖಾನ್ ಅಭಿನಯದ ‘ರಾಧೇ’, ಮೇ 28ಕ್ಕೆ ಅಕ್ಷಯ್ ಕುಮಾರ್ ಅಭಿನಯದ ‘ಬೆಲ್​ಬಾಟಮ್, ಜೂ 04ಕ್ಕೆ ಅಮಿತಾಭ್ ಬಚ್ಚನ್ ಅಭಿನಯದ ‘ಜುಂಡ್’, ಜುಲೈ 16ಕ್ಕೆ ಟೈಗರ್ ಶ್ರಾಫ್ ಅಭಿನಯದ ‘ಹೀರೋಪಂತಿ 2’ ಮುಂತಾದ ಚಿತ್ರಗಳು ಬಿಡುಗಡೆಯಾಗುತ್ತಿವೆ.

ಯಶ್​ರಾಜ್ ಫಿಲಂಸ್​ನ ಐದು ಚಿತ್ರಗಳು: ಬಿಗ್ ಚಿತ್ರಗಳ ಪಟ್ಟಿಯಲ್ಲಿ ಯಶ್​ರಾಜ್ ಫಿಲಂಸ್ ನಿರ್ವಣದ ಐದು ಚಿತ್ರಗಳು ಈ ವರ್ಷ ಬಿಡುಗಡೆಯಾಗಲಿವೆ. ಮಾರ್ಚ್​ನಿಂದ ಪ್ರಾರಂಭವಾಗುವ ಯಶ್​ರಾಜ್ ಚಿತ್ರಗಳ ಬಿಡುಗಡೆಯ ಪರ್ವ ನವೆಂಬರ್​ವರೆಗೂ ಮುಂದುವರೆಯಲಿದೆ. ಈ ಪೈಕಿ ಅರ್ಜುನ್ ಕಪೂರ್ ಮತ್ತು ಪರಿಣಿತಿ ಚೋಪ್ರಾ ಅಭಿನಯದ ‘ಸಂದೀಪ್ ಔರ್ ಪಿಂಕಿ ಫರಾರ್’ ಚಿತ್ರವು ಮಾ.19ಕ್ಕೆ ಬಿಡುಗಡೆಯಾಗಲಿದೆ. ಸೈಫ್ ಅಲಿ ಖಾನ್ ಮತ್ತು ರಾಣಿ ಮುಖರ್ಜಿ ಅಭಿನಯದ ‘ಬಂಟಿ ಔರ್ ಬಬ್ಲಿ 2’ ಚಿತ್ರವು ಏಪ್ರಿಲ್ 23ಕ್ಕೆ ಬಿಡುಗಡೆಯಾದರೆ, ರಣಬೀರ್ ಕಪೂರ್ ಮತ್ತು ಸಂಜಯ್ ದತ್ ಅಭಿನಯದ ‘ಶಂಶೇರಾ’ ಚಿತ್ರವು ಜೂ.25ಕ್ಕೆ ತೆರೆಕಾಣಲಿದೆ. ರಣವೀರ್ ಸಿಂಗ್ ಅಭಿನಯದ ‘ಜಯೇಶ್​ಭಾಯ್ ಜೋರ್​ದಾರ್’ ಆ.27ಕ್ಕೆ ಬಿಡುಗಡೆಯಾಗಲಿದ್ದು, ನ.5ರಂದು ಅಕ್ಷಯ್ ಕುಮಾರ್ ಅಭಿನಯದ ‘ಪೃಥ್ವಿರಾಜ್’ ತೆರೆಕಾಣಲಿದೆ.

ಅಕ್ಷಯ್ ಅಭಿನಯದ ನಾಲ್ಕು ಚಿತ್ರಗಳು: ಅಕ್ಷಯ್ ಕುಮಾರ್ ಅಭಿನಯದ ‘ಸೂರ್ಯವಂಶಿ, ‘ಬೆಲ್​ಬಾಟಮ್ ಮತ್ತು ‘ಪೃಥ್ವಿರಾಜ್’ ಚಿತ್ರಗಳು ಬಿಡುಗಡೆಯಾಗುತ್ತಿರುವುದು ಗೊತ್ತೇ ಇದೆ. ಅದರ ಜತೆಗೆ, ‘ಅತರಂಗಿ ರೇ’ ಚಿತ್ರವು ಆಗಸ್ಟ್ 6ರಂದು ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಇವೆಲ್ಲ ಸೇರಿದರೆ, ಅಕ್ಷಯ್ ಅಭಿನಯದ ನಾಲ್ಕು ಚಿತ್ರಗಳು ಬಿಡುಗಡೆಯಾಗುತ್ತಿರುವುದು ಇನ್ನೊಂದು ವಿಶೇಷ.