ಸಿನಿವಾಣಿ

ನಮ್ಮಪ್ಪ ನನಗಾಗಿ ಒಂದು ಸಿನಿಮಾನೂ ಮಾಡ್ಲಿಲ್ಲ: ಅಭಿಷೇಕ್​ ಬಚ್ಚನ್​

ಮುಂಬೈ: ನೆಪೋಟಿಸಂ (ಸ್ವಜನಪಕ್ಷಪಾತ)ದ ಕುರಿತಾಗಿ ಹಲವು ತಿಂಗಳುಗಳಿಂದ ಚರ್ಚೆ ನಡೆಯುತ್ತಿದ್ದು, ಇನ್ನೂ ಆಗಾಗ ಈ ಬಗ್ಗೆ ಮಾತುಗಳು ಕೇಳಿ ಬರುತ್ತಲೇ ಇರುತ್ತವೆ. ಯಾವಾಗೆಲ್ಲಾ ನೆಪೋಟಿಸಂ ಕುರಿತ ಚರ್ಚೆಯಾದರೂ, ಅಲ್ಲಿ ಅಭಿಷೇಕ್​ ಬಚ್ಚನ್​ ಅವರ ಹೆಸರು ಒಮ್ಮೆಯಾದರೂ ಇಣುಕುತ್ತದೆ.

ಏಕೆಂದರೆ, ಬಾಲಿವುಡ್​ ಸೂಪರ್​ಸ್ಟಾರ್​ ಅಮಿತಾಭ್​ ಬಚ್ಚನ್​ ಅವರ ಮಗ ಈ ಅಭಿಷೇಕ್​ ಬಚ್ಚನ್​. ಅಭಿಷೇಕ್​ ಬಚ್ಚನ್​ ತನ್ನ ತಂದೆಯ ನೆರವಿನಲ್ಲೇ ಚಿತ್ರರಂಗದಲ್ಲಿ ಉಳಿದಿದ್ದಾರೆ ಎಂಬ ನಂಬಿಕೆ ಹಲವರಲ್ಲಿದೆ. ಇದೇ ವಿಷಯವಾಗಿ ಅಭಿಷೇಕ್​ ಆಗಾಗ ಸೋಷಿಯಲ್​ ಮೀಡಿಯಾದಲ್ಲಿ ಟ್ರೋಲ್​ ಆಗುತ್ತಿರುತ್ತಾರೆ.

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅಭಿಷೇಕ್​. 'ನಮ್ಮಪ್ಪ ಇದುವರೆಗೂ ಒಂದೇ ಒಂದು ದಿನ ಯಾರಿಗೂ ಫೋನ್​ ಮಾಡಿ, ನನ್ನ ಮಗನಿಗೆ ಅವಕಾಶ ಕೊಡಿ ಎಂದು ಹೇಳಿಲ್ಲ. ಅಷ್ಟೇ ಅಲ್ಲ, ಅವರ ನಿರ್ಮಾಣದ ಸಂಸ್ಥೆಯಲ್ಲಿ ನನ್ನದೊಂದು ಸಿನಿಮಾನೂ ಇದುವರೆಗೆ ಮಾಡಿಲ್ಲ. ಇನ್ನು ನಾನೇ ಅವರನ್ನು ಹಾಕಿಕೊಂಡು 'ಪಾ' ಎನ್ನುವ ಸಿನಿಮಾ ಮಾಡಿದ್ದೇನೆ. ಹೀಗಿರುವಾಗ ಇಲ್ಲಿ ನೆಪೋಟಿಸಂ ಎಲ್ಲಿಂದ ಬಂತು' ಎಂದು ಪ್ರಶ್ನಿಸಿದ್ದಾರೆ.

ಅಮಿತಾಭ್​ ಬಚ್ಚನ್​ ಅವರಿಂದ ತಮಗೆ ಚಿತ್ರರಂಗಕ್ಕೆ ಬರುವುದಕ್ಕೆ ಸ್ವಲ್ಪ ಸುಲಭವಾದರೂ, ಇಲ್ಲಿ ಸಾಕಷ್ಟು ಹೋರಾಟಗಳನ್ನು ಮಾಡಬೇಕಾಯಿತು ಎಂದು ಹೇಳಿದ್ದಾರೆ. 'ಇಲ್ಲಿ ಬರುವುದು ಸುಲಭ. ಆದರೆ, ಚಿತ್ರರಂಗದಲ್ಲಿ ಉಳಿಯಬೇಕು ಎಂದರೆ ಸಾಕಷ್ಟು ಕಷ್ಟಪಡಬೇಕು ಮತ್ತು ಹೋರಾಟಗಳನ್ನು ಮಾಡಬೇಕು. ಅದನ್ನು ನಾನು ನಿರಂತರವಾಗಿ ಮಾಡುತ್ತಲೇ ಬಂದಿದ್ದೇನೆ' ಎಂದು ಅವರು ಹೇಳಿಕೊಂಡಿದ್ದಾರೆ.