ಚಿತ್ರ: ನಿಮ್ದೆ ಕಥೆ
ನಿರ್ದೇಶನ: ರಾಘವೇಂದ್ರ ರಾಜ್
ತಾರಾಗಣ: ಅಭಿಲಾಷ್ ದಳಪತಿ, ರಾಶಿಕಾ ಶೆಟ್ಟಿ, ಸಿಹಿಕಹಿ ಚಂದ್ರು, ಮನೋಹರ್, ರೇಷ್ಮಾ ಮತ್ತಿತರರು.
| ಹರ್ಷವರ್ಧನ್ ಬ್ಯಾಡನೂರು
ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳ ಬಗ್ಗೆ ಓದುತ್ತಿರುತ್ತೇವೆ. ಲೈಂಗಿಕ ಸಮಸ್ಯೆಗಳಿಂದ ಹೇಳಿಕೊಳ್ಳಲಾಗದೇ, ಬಿಡಲಾಗದೇ ನೊಂದು-ಬೆಂದು ಬದುಕು ಚೆಲ್ಲಿದವರೂ ಇದ್ದಾರೆ. ನೋಟ್ ಬ್ಯಾನ್ನಿಂದ ನಷ್ಟ ಅನುಭವಿಸಿದವರು, ಕರೊನಾದಿಂದ ಕೆಲಸ ಕಳೆದುಕೊಂಡವರಿಗೂ ಕಡಿಮೆಯಿಲ್ಲ. ಈ ಸಮಸ್ಯೆಗಳಿಂದ ಸುಖಿ ಕುಟುಂಬಗಳು ಒಡೆದ, ಮಾನಸಿಕ ಖಿನ್ನತೆಗೆ ಒಳಗಾದ, ಸಮಸ್ಯೆ ಎದುರಿಸಲಾಗದೇ ಕಣ್ಮರೆಯಾದವರೂ ಇದ್ದಾರೆ. ಇಂತಹ ಜನಸಾಮಾನ್ಯರ ಹಲವು ಸಮಸ್ಯೆಗಳಿಗೆ ಅಲ್ಲಲ್ಲಿ ಕಾಮಿಡಿ ಸ್ಪರ್ಶ ಕೊಟ್ಟು ನಿರ್ದೇಶಕ ರಾಘವೇಂದ್ರ ರಾಜ್ "ನಿಮ್ದೆ ಕಥೆ' ನಿರೂಪಿಸಿದ್ದಾರೆ.
ಇನ್ಶೂರೆನ್ಸ್ ಮ್ಯಾನೇಜರ್ ವಿಕ್ರಮ್ದು (ಅಭಿಲಾಷ್) ಸುಂದರ ಕುಟುಂಬ, ಸುಖಿ ಜೀವನ. ಕಷ್ಟದಲ್ಲಿರುವವರಿಗೆ ತನ್ನ ಕೈಲಾದ ಸಹಾಯ ಮಾಡುತ್ತಾ ಎಲ್ಲರ ಮೆಚ್ಚುಗೆಗೆ ಪಾತ್ರನಾದ ಮಾದರಿ ವ್ಯಕ್ತಿ. ಹೆಂಡತಿ ಕಾವ್ಯ (ರಾಶಿಕಾ), ಮಗ, ಅಪ್ಪ, ಅಮ್ಮನ ಜತೆ ತಾನಾಯಿತು, ತನ್ನ ಕೆಲಸವಾಯಿತು ಅಂತಿರುವ ವಿಕ್ರಮ್ ಲೈಂಗಿಕ ಸಮಸ್ಯೆಗೆ ಒಳಗಾಗುತ್ತಾನೆ. ಅದನ್ನು "ಕಂಟ್ರೋಲ್'ಗೆ ತರಲು ಡಾಕ್ಟರ್ (ಸಿಹಿಕಹಿ ಚಂದ್ರು) ಭೇಟಿಯಾಗುತ್ತಾನೆ. ಆ ಸಮಸ್ಯೆ ಬಗೆಹರಿಸಿಕೊಂಡ ಬೆನ್ನಲ್ಲೇ ವಿಕ್ರಮ್ ಮತ್ತೊಂದು ಸಂಕಷ್ಟಕ್ಕೆ ಸಿಲುಕುತ್ತಾನೆ. ಹೀಗೆ ಒಂದಾದ ಮೇಲೆ ಒಂದರಂತೆ ಎದುರಾದ ಸಮಸ್ಯೆಗಳು ಆತನ ಕೌಟುಂಬಿಕ ಜೀವನವನ್ನೂ ಅಸ್ತವ್ಯಸ್ತಗೊಳಿಸುತ್ತವೆ. ಹಾಗಾದರೆ ವಿಕ್ರಮ್ ಎದುರಿಸುತ್ತಿರುವ ಲೈಂಗಿಕ ಸಮಸ್ಯೆ ಏನು? ಜನಮೆಚ್ಚಿದ ವಿಕ್ರಮ್ ಸಾಲದ ಸುಳಿಗೆ ಹೇಗೆ ಸಿಲುಕುತ್ತಾನೆ? ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಾನಾ? "ನಿಮ್ದೆ ಕಥೆ' ನೋಡಿ.
"ಲವ್ ಮಾಕ್ಟೇಲ್' ಸರಣಿಯಲ್ಲಿ ನಾಯಕನ ಗೆಳೆಯನಾಗಿ ಕಾಣಿಸಿಕೊಂಡಿದ್ದ ಅಭಿಲಾಷ್ ಈ ಚಿತ್ರದಲ್ಲಿ ನಾಯಕನಾಗಿ ಮಿಂಚಿದ್ದಾರೆ. ವಿಕ್ರಮ್ ಪಾತ್ರವನ್ನು ಹಲವರು ರಿಲೇಟ್ ಮಾಡಿಕೊಳ್ಳಬಹುದು. ಕಷ್ಟ ಕಾಲದಲ್ಲಿ ಗಂಡನಿಗೆ ಕೈಕೊಡದೇ, ಆತನ ಜತೆಗೆ ನಿಲ್ಲುವ ಕಾವ್ಯ ಪಾತ್ರದಲ್ಲಿ ರಾಶಿಕಾ ಇಷ್ಟವಾಗುತ್ತಾರೆ. ಡಾಕ್ಟರ್ ಆಗಿ ಸಿಹಿಕಹಿ ಚಂದ್ರು ಪ್ರೇಕ್ಷಕರ ಕಣ್ತೆರೆಸಲು ಪ್ರಯತ್ನಿಸಿದ್ದಾರೆ. ಉಳಿದ ಪಾತ್ರಗಳು ಅಚ್ಚುಕಟ್ಟಾಗಿ ಮೂಡಿಬಂದಿವೆ. 130 ನಿಮಿಷಗಳ ಕಥೆಯಲ್ಲಿ ರಾಘವೇಂದ್ರ ರಾಜ್ ಹಲವು ವಿಷಯಗಳನ್ನು ಸೇರಿಸಿದ್ದಾರೆ. ಚಿತ್ರಕಥೆ ಇನ್ನಷ್ಟು ಗಟ್ಟಿಯಾಗಿದ್ದರೆ ಪ್ರೇಕ್ಷಕರಿಗೆ ಸಿನಿಮಾ ಮತ್ತಷ್ಟು ಹತ್ತಿರವಾಗುತ್ತಿತ್ತು. ಆದರೂ, ಹೀರೋಯಿಸಂ, ಬಿಲ್ಡಪ್, ಮಸಾಲಾ, ಮಚ್ಚು-ಲಾಂಗು ಎಲ್ಲದರಿಂದ ಹೊರತಾಗಿ ಕಂಟೆಂಟ್ ಪ್ರಧಾನ "ನಿಮ್ದೆ ಕಥೆ'ಯನ್ನು ಒಮ್ಮೆ ನೋಡಲಡ್ಡಿಯಿಲ್ಲ.