ಸಿನಿವಾಣಿ

ಮಗನ ಸಿನಿಮಾ ಗೆದ್ದರೆ, ಸಿಗರೇಟ್​ ಮುಟ್ಟಲ್ವಂತೆ ಆಮಿರ್​ ಖಾನ್​!!

ಸಿನಿಮಾ ತಾರೆಯರು ರಿಲೀಸ್​ ಸಮಯದಲ್ಲಿ ಟೆಂಪಲ್​ ರನ್​ ಮಾಡುವುದು, ಬಾಕ್ಸಾಫಿಸಿನಲ್ಲಿ ಚೆನ್ನಾಗಿ ಗಳಿಕೆ ಮಾಡಿಕೊಳ್ಳಲಿ ಎಂದು ಹರಕೆ ಹೊರುವುದು ಸಾಮಾನ್ಯ. ಆದರೆ, ಬಾಲಿವುಡ್​ ನಟ ಆಮಿರ್​ ಖಾನ್​ ಮಗನ ಚಿತ್ರಕ್ಕಾಗಿ ಶಪಥ ಮಾಡಿದ್ದಾರಂತೆ. ಪುತ್ರ ಜುನೈದ್​ ಖಾನ್​ ನಟಿಸಿರುವ "ಲವ್​ಯಾಪಾ' ಸಿನಿಮಾ ಯಶಸ್ಸು ಗಳಿಸಿದರೆ, ಧೂಮಪಾನ ತ್ಯಜಿಸುವುದಾಗಿ ಅವರು ಪ್ರಮಾಣ ಮಾಡಿದ್ದಾರಂತೆ.

ಅಂದಹಾಗೆ, "ಲವ್​ಯಾಪಾ' ಜುನೈದ್​ ಖಾನ್​ ನಟಿಸಿರುವ ಎರಡನೇ ಚಿತ್ರ. ಅವರು ನಾಯಕನಾಗಿ ಡೆಬ್ಯೂ ಮಾಡಿದ್ದ ಮೊದಲ ಸಿನಿಮಾ "ಮಹಾರಾಜ' ಕಳೆದ ವರ್ಷ ನೇರವಾಗಿ ಒಟಿಟಿಯಲ್ಲಿ ರಿಲೀಸ್​ ಆಗಿತ್ತು. "ಲವ್​ಯಾಪಾ' ಥಿಯೇಟರ್​ಗಳಲ್ಲಿ ರಿಲೀಸ್​ ಆಗಲಿರುವ ಮೊದಲ ಸಿನಿಮಾ. ಹೀಗಾಗಿ ಆಮಿರ್​ಗೆ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯಿದೆ. ಇತ್ತೀಚೆಗಷ್ಟೆ ಸಿನಿಮಾ ನೋಡಿದ ಆಮಿರ್​, ಇಡೀ ತಂಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದು 2022ರ ತಮಿಳಿನ ಹಿಟ್​ "ಲವ್​ ಟುಡೇ' ಚಿತ್ರದ ಹಿಂದಿ ರಿಮೇಕ್​ ಆಗಿದ್ದು, ಅದ್ವೈತ್​ ಚಂದನ್​ ನಿರ್ದೇಶಿಸಿದ್ದಾರೆ. ನಟಿ ಶ್ರೀದೇವಿ ಪುತ್ರಿ ಖುಷಿ ಕಪೂರ್​, ಜುನೈದ್​ಗೆ ನಾಯಕಿಯಾಗಿದ್ದು ಇದೇ ಫೆ. 7ರಂದು "ಲವ್​ಯಾಪಾ' ತೆರೆಗೆ ಬರಲಿದೆ. &ಏಜೆನ್ಸೀಸ್​