ಸಿನಿವಾಣಿ

ಆ ಸುನಾಮಿಯ ಎದುರು ಹೇಗೆ ನಿಂತೆವು ಅಂತ ಈಗಲೂ ಗೊತ್ತಿಲ್ಲ: ಆಮೀರ್​

ಮುಂಬೈ: ಬಾಲಿವುಡ್​ನ ಇತಿಹಾಸದಲ್ಲಿ ಸೂಪರ್ ಹಿಟ್​ ಚಿತ್ರಗಳೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಆಮೀರ್​ ಖಾನ್​ ಅಭಿನಯದ 'ಲಗಾನ್​' ಮತ್ತು ಸನ್ನಿ ಡಿಯೋಲ್​ ಅಭಿನಯದ 'ಗದರ್​ - ಏಕ್​ ಪ್ರೇಮ್​ ಕಥಾ' ಚಿತ್ರಗಳು ಬಿಡುಗಡೆಯಾಗಿ ಇಂದಿಗೆ ಎರಡು ದಶಕಗಳಾಗಿವೆ. 20 ವರ್ಷಗಳ ಹಿಂದೆ ಸರಿಯಾಗಿ ಇದೇ ದಿನದಂದು (15 ಜೂನ್​ 2001), ಈ ಎರಡೂ ಚಿತ್ರಗಳು ಬಿಡುಗಡೆಯಾಗಿದ್ದವು ಮತ್ತು ಎರಡೂ ಸೂಪರ್​ ಹಿಟ್​​ ಆಗಿದ್ದು ವಿಶೇಷ.

ಆಮೀರ್​ ಖಾನ್​ ಮತ್ತು ಸಂಜಯ್​ ದತ್​​ ಅವರ ಚಿತ್ರಗಳು ಒಂದೇ ದಿನ ಕ್ಲಾಶ್​ ಆಗಿದ್ದು ಹೊಸದೇನಲ್ಲ. 1990ರಲ್ಲಿ ಆಮೀರ್​ ಅಭಿನಯದ 'ದಿಲ್​' ಮತ್ತು ಸನ್ನಿ ಡಿಯೋಲ್​ ಅಭಿನಯದ 'ಘಾಯಲ್​' ಒಂದೇ ದಿನ ಬಿಡುಗಡೆಯಾಗಿತ್ತಂತೆ. ಅಷ್ಟೇ ಅಲ್ಲ, ಎರಡೂ ಚಿತ್ರಗಳು ಯಶಸ್ವಿಯಾಗಿದ್ದವು. ಆ ನಂತರ 1996ರಲ್ಲಿ 'ರಾಜ ಹಿಂದೂಸ್ತಾನಿ' ಮತ್ತು 'ಘಾತಕ್​' ಚಿತ್ರಗಳು ಬಿಡುಗಡೆಯಾಗಿ ಯಶಸ್ಸು ಪುನರಾವರ್ತನೆಗೊಂಡಿತು. ಅದಾಗಿ 2001ರಲ್ಲಿ 'ಲಗಾನ್​' ಮತ್ತು 'ಗದರ್​' ಚಿತ್ರಗಳು ಬರೀ ಒಂದೇ ದಿನ ಬಿಡುಗಡೆಯಾಗಿ ಯಶಸ್ವಿಯಾಗಿದ್ದಷ್ಟೇ ಅಲ್ಲ, ಎರಡೂ ಚಿತ್ರಗಳು ಸೂಪರ್​ ಹಿಟ್​ ಎಂದನಿಸಿಕೊಂಡವು.

ಎರಡೂ ಚಿತ್ರಗಳು ಒಂದೇ ದಿನ ಬಿಡುಗಡೆಯಾದ ಬಗ್ಗೆ ಮಾತನಾಡಿರುವ ಆಮೀರ್​, 'ನಾನು 'ಗದರ್​' ಕಥೆ ಕೇಳಿದ್ದೆ. ಆ ಕಾಲಕ್ಕೆ ಅದೊಂದು ದೊಡ್ಡ ಬಜೆಟ್​ನ ಚಿತ್ರವಾಗಿದ್ದಷ್ಟೇ ಅಲ್ಲ, ಬಹಳ ಎಮೋಷನಲ್​ ಕಥೆ ಇತ್ತು. ಆ ಚಿತ್ರ ಸೂಪರ್​ ಹಿಟ್​ ಆಗುತ್ತದೆ ಎಂದು ಮನಸ್ಸು ಹೇಳುತ್ತಿತ್ತು. ಈ ಹಿಂದೆ ಸಹ ಎರಡು ಬಾರಿ ಸನ್ನಿ ಜತೆಗೆ ನನ್ನ ಚಿತ್ರಗಳು ಬಾಕ್ಸ್​ ಆಫೀಸ್​ನಲ್ಲಿ ಕ್ಲಾಶ್​ ಆಗಿವೆ. ನನಗೆ ಆ ಬಗ್ಗೆ ಭಯವಿರಲಿಲ್ಲ. ಆದರೂ 'ಗದರ್​' ಚಿತ್ರದ ಬಗ್ಗೆ ನಮ್ಮ ತಂಡದವರಿಗೆ ಎಚ್ಚರಿಸಿದ್ದೆ. ಆ ಚಿತ್ರ ಬಹಳ ಚೆನ್ನಾಗಿ ಮೂಡಿ ಬಂದಿರುತ್ತದೆ, ಹುಷಾರಾಗಿರಿ ಎಂದು ನಮ್ಮ ತಂಡದವರಿಗೆ ಹೇಳಿದ್ದೆ' ಎಂದು ಆಮೀರ್​ ಹೇಳಿಕೊಂಡಿದ್ದಾರೆ.

'ಗದರ್​' ಚೆನ್ನಾಗಿರುತ್ತದೆ ಎಂದು ಗೊತ್ತಿತ್ತು. ಆದರೆ, ಅದು ಸೂಪರ್​ ಹಿಟ್​​ ಆಗುತ್ತದೆ ಎಂದು ಗೊತ್ತಿರಲಿಲ್ಲ ಎಂದು ಹೇಳಿರುವ ಆಮೀರ್, 'ಆ ಚಿತ್ರ ಸೂಪರ್​ ಹಿಟ್​ ಆಯ್ತು. ಹಲವು ರಾಜ್ಯಗಳಲ್ಲಿ ಚಿತ್ರ ನೋಡೋದಕ್ಕೆ ಜನ ಟ್ರಾಕ್ಟರ್​ಗಳಲ್ಲಿ ಚಿತ್ರಮಂದಿರಕ್ಕೆ ಹೋಗುತ್ತಿದ್ದರು. ಅದು 'ಲಗಾನ್​'ಗಿಂತ ಮೂರು ಪಟ್ಟು ದೊಡ್ಡದಿತ್ತು. ಅಂತ ಸುನಾಮಿ ಚಿತ್ರದ ಎದುರು ಹೇಗೆ ನಿಂತು ಬಿಡುಗಡೆ ಮಾಡಿದೆವು ಅಂತ ಈಗಲೂ ಗೊತ್ತಿಲ್ಲ. ಆ ಚಿತ್ರದ ಬಿಜಿನೆಸ್​ ಎದುರು ನಮ್ಮದೇನೂ ಇಲ್ಲ. ಆದರೂ ಜನ ನಮ್ಮ ಚಿತ್ರವನ್ನೂ ಮೆಚ್ಚಿಕೊಂಡು ಗೆಲ್ಲಿಸಿದರು. 'ಲಗಾನ್​' ಸಹ ಒಳ್ಳೆಯ ಬಿಜಿನೆಸ್​ ಮಾಡಿತು. ನಮ್ಮ ಚಿತ್ರ ಅದರಷ್ಟು ಬಿಜಿನೆಸ್​ ಮಾಡದಿದ್ದರೂ, ಜನರಿಂದ ಮೆಚ್ಚುಗೆ ಪಡೆಯಿತು ಎನ್ನುವುದೇ ಖುಷಿಯ ವಿಚಾರ' ಎಂದು ಆಮೀರ್​ ಹೇಳಿದ್ದಾರೆ.