ಮುಂಬೈ: ಬಾಲಿವುಡ್ನಲ್ಲಿ ಪ್ರತೀ ವರ್ಷ ಹಲವು ಪ್ರಶಸ್ತಿ ಪ್ರದಾನ ಸಮಾರಂಭಗಳು ನಡೆಯುತ್ತಲೇ ಇರುತ್ತವೆ. ಆ ಸಮಾರಂಭಗಳಲ್ಲಿ ಬಾಲಿವುಡ್ನ ಹಲವು ಸೆಲೆಬ್ರಿಟಿಗಳು ಭಾಗವಹಿಸುತ್ತಾರೆ. ಹಾಡು, ತಮಾಷೆ ಎಲ್ಲವೂ ಇಲ್ಲಿರುತ್ತದೆ. ಆದರೆ, ಅದೆಷ್ಟೇ ಸಮಾರಂಭಗಳು ನಡೆದರೂ ಆಮೀರ್ ಖಾನ್ ಅವರನ್ನು ಈ ಸಮಾರಂಭಗಳಲ್ಲಿ ನೋಡುವುದು ಕಷ್ಟ.
ಏಕೆಂದರೆ, ಆಮೀರ್ ಖಾನ್ಗೂ ಪ್ರಶಸ್ತಿಗಳಿಗೂ ಅಷ್ಟಕ್ಕಷ್ಟೇ. ಅವರಿಗೇ ಪ್ರಶಸ್ತಿ ಬಂದರೂ, ಅದನ್ನು ಸ್ವೀಕರಿಸುವುದಕ್ಕೆ ಆಮೀರ್ ಖಾನ್ ಹೋಗುವುದಿಲ್ಲ. ತುಂಬಾ ಪ್ರತಿಷ್ಠಿತ ಸಮಾರಂಭವಾದರೆ, ಆಮೀರ್ ಖಾನ್ ಅವರನ್ನು ನೋಡಬಹುದು. ಸುಖಾಸುಮ್ಮನೆ ಎಲ್ಲ ಸಮಾರಂಭಗಳಲ್ಲೂ ಅವರನ್ನು ನೋಡುವುದಕ್ಕೆ ಸಾಧ್ಯವಿಲ್ಲ ಮತ್ತು ಆಮೀರ್ ಖಾನ್ ಅಷ್ಟು ಸುಲಭಕ್ಕೆ ಪ್ರಶಸ್ತಿಗಳನ್ನು ಒಪ್ಪುವುದೂ ಇಲ್ಲ. ಇಷ್ಟಕ್ಕೂ ಆಮೀರ್ಗೆ ಯಾಕೆ ಪ್ರಶಸ್ತಿಗಳೆಂದರೆ ನಂಬಿಕೆ ಇಲ್ಲ ಎಂಬ ಪ್ರಶ್ನೆ ಬರುವುದು ಸಹಜ.
ಈ ಕುರಿತು ಮಾತನಾಡಿರುವ ಅವರು, 'ನನಗೆ ಪ್ರಶಸ್ತಿಗಳ ಬಗ್ಗೆ ನಂಬಿಕೆ ಕಡಿಮೆಯೇ. ಏಕೆಂದರೆ, ಸಿನಿಮಾಗಳನ್ನು ಹೋಲಿಸುವುದಕ್ಕೆ ಸಾಧ್ಯವಿಲ್ಲ. ಈಗ 'ಲಗಾನ್' ಮತ್ತು 'ದಂಗಲ್' ಚಿತ್ರಗಳನ್ನೇ ತೆಗೆದುಕೊಳ್ಳಿ. ಅವರೆಡರಲ್ಲಿ ಯಾವುದು ಚೆನ್ನಾಗಿದೆ? ಯಾವುದು ಚೆನ್ನಾಗಿದೆ ಎಂದು ಹೇಳುವುದು ಹೇಗೆ? ಎರಡೂ ಚಿತ್ರಗಳನ್ನು ಹೋಲಿಸುವುದು ಸರಿಯಾ? ಎರಡೂ ಬೇರೆಬೇರೆ ಚಿತ್ರಗಳು. ಎರಡೂ ಜನರ ಮೆಚ್ಚುಗೆ ಪಡೆದಿವೆ. ಒಂದು ಪಕ್ಷ ಆ ಎರಡೂ ಚಿತ್ರಗಳು ಒಂದೇ ವರ್ಷ ಬಿಡುಗಡೆಯಾಗಿದ್ದರೆ, ಎರಡರಲ್ಲಿ ಒಂದಕ್ಕೆ ಮಾತ್ರ ಪ್ರಶಸ್ತಿ ಸಿಗುವ ಸಾಧ್ಯತೆ ಇರುತ್ತದೆ. ಹಾಗಂತ ಇನ್ನೊಂದು ಚಿತ್ರ ಕಡಿಮೆ ಎಂದರ್ಥವಾ? ಖಂಡಿತಾ ಇಲ್ಲ' ಎನ್ನುತ್ತಾರೆ ಆಮೀರ್.
ಈ ಬಗ್ಗೆ ಇನ್ನಷ್ಟು ಮಾತನಾಡುವ ಅವರು, 'ಅದೇ ಕ್ರೀಡೆಯಲ್ಲಿ ಹಾಗಿರುವುದಿಲ್ಲ. ಯಾರು ಬೇಗ ಓಡುತ್ತಾರೋ, ಯಾರು ಎತ್ತರಕ್ಕೆ ಜಿಗಿಯುತ್ತಾರೋ ಅವರನ್ನು ಗೆದ್ದವರು ಎಂದು ತೀರ್ಮಾನಿಸಲಾಗುತ್ತದೆ. ಅಲ್ಲೊಂದು ಸ್ಪಷ್ಟತೆ ಇದೆ. ಯಾರು ಮೊದಲು ಬಂದಿರುತ್ತಾರೋ ಅಥವಾ ಯಾರು ಹೆಚ್ಚು ಸಾಧಿಸುತ್ತಾರೋ, ಅವರೇ ವಿಜೇತರು ಎಂದು ತೀರ್ಮಾನಿಸಲಾಗುತ್ತದೆ ಯಾರು ಗೆದ್ದಿದ್ದು ಎಂದು ಅಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತದೆ. ಸಿನಿಮಾದಲ್ಲಿ ಹಾಗಿಲ್ಲ. ಅಲ್ಲಿ ಒಬ್ಬೊಬ್ಬರಿಗೆ ಒಂದೊಂದು ಚಿತ್ರ ಇಷ್ಟವಾಗುತ್ತದೆ. ಈ ಜ್ಯೂರಿಗೆ ಒಂದು ಚಿತ್ರ ಇಷ್ಟವಾದರೆ, ಇನ್ನೊಂದು ಜ್ಯೂರಿಗೆ ಇನ್ನೊಂದು ಚಿತ್ರ ಇಷ್ಟವಾಗುವ ಸಾಧ್ಯತೆ ಇದೆ. ಹಾಗಾಗಿ, ಆಸ್ಕರ್ ಬಿಟ್ಟರೆ ಬೇರೆ ಪ್ರಶಸ್ತಿಗಳ ಬಗ್ಗೆ ನನಗೆ ಹೆಚ್ಚು ನಂಬಿಕೆ ಇಲ್ಲ ಅಥವಾ ನಾನು ಹೆಚ್ಚು ಮಾನ್ಯತೆ ಕೊಡುವುದಿಲ್ಲ. ಆಸ್ಕರ್ಗೆ ಯಾಕೆ ಮಾನ್ಯತೆ ಕೊಡುತ್ತೇನೆ ಎಂದರೆ ಅದಕ್ಕೂ ಕಾರಣವಿದೆ. ಅಲ್ಲಿ ಆಯ್ಕೆಯ ಮಾನದಂಡಗಳು ಬೇರೆಯದೇ ಇರುತ್ತವೆ' ಎನ್ನುತ್ತಾರೆ ಆಮೀರ್ ಖಾನ್.
ತಮ್ಮ ಮಟ್ಟಿಗೆ ಪ್ರೇಕ್ಷಕರ ಮೆಚ್ಚುಗೆಯೇ ನಿಜವಾದ ಪ್ರಶಸ್ತಿ ಎನ್ನುವ ಆಮೀರ್, ಜನರ ಮೆಚ್ಚುಗೆಗಿಂತ ಇನ್ನೊಂದು ದೊಡ್ಡ ಪ್ರಶಸ್ತಿ ಈ ಜಗತ್ತಿನಲ್ಲಿ ಯಾವುದೂ ಇಲ್ಲ ಎಂದು ಹೇಳುತ್ತಾರೆ.