ಮುಂಬೈ: ಮಂಗಳವಾರ ಬೆಳಿಗ್ಗೆಯಿಂದ ಸೋಷಿಯಲ್ ಮೀಡಿಯಾದಲ್ಲೊಂದು ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. 24 ವರ್ಷಗಳ ಹಿಂದೆ ತೆಗೆದ ಒಂದು ಭಾವಚಿತ್ರದ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಯಾಕೆ ಗೊತ್ತಾ? ಈ ಥ್ರೋಬ್ಯಾಕ್ ಫೋಟೋದಲ್ಲಿ ಬಾಲಿವುಡ್ನ ಇಬ್ಬರು ಸೂಪರ್ಸ್ಟಾರ್ಗಳಾದ ಶಾರೂಖ್ ಖಾನ್ ಹಾಗೂ ಅಕ್ಷಯ್ ಕುಮಾರ್ ಆಡುತ್ತಿದ್ದಾರೆ.
ಕ್ರಿಕೆಟ್ ಆಡುವ ಸಂದರ್ಭದಲ್ಲಿ ತೆಗೆದ ಈ ಫೋಟೋದಲ್ಲಿ ಅಕ್ಷಯ್ ಕುಮಾರ್ ಬ್ಯಾಟಿಂಗ್ ಮಾಡುತ್ತಿದ್ದರೆ, ಶಾರೂಖ್ ಖಾನ್ ವಿಕೆಟ್ ಕೀಪಿಂಗ್ ಮಾಡುತ್ತಿದ್ದಾರೆ. ಈ ಅಪರೂಪವಾದ ಈ ಚಿತ್ರಪಟವನ್ನು ಶಾರೂಖ್ ಖಾನ್ ಮತ್ತು ಅಕ್ಷಯ್ ಕುಮಾರ್ ಇಬ್ಬರ ಅಭಿಮಾನಿಗಳು ಹಂಚಿಕೊಂಡು, ಇದನ್ನು ಇನ್ನಷ್ಟು ವೈರಲ್ ಮಾಡುತ್ತಿದ್ದಾರೆ ಎನ್ನುವುದು ವಿಶೇಷ.
ಮೊದಲೇ ಹೇಳಿದಂತೆ, ಈ ಫೋಟೋ ತೆಗೆದಿದ್ದು 24 ವರ್ಷಗಳ ಹಿಂದೆ. ಯಶ್ ಚೋಪ್ರಾ ಅಭಿನಯದ 'ದಿಲ್ ತೋ ಪಾಗಲ್ ಹೇ' ಚಿತ್ರದದಲ್ಲಿ ಶಾರೂಖ್ ಮತ್ತು ಅಕ್ಷಯ್ ಕುಮಾರ್ ಇಬ್ಬರೂ ಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದರು. ಈ ಚಿತ್ರದ ಚಿತ್ರೀಕರಣ ಬಿಡುವಿನಲ್ಲಿ ಚಿತ್ರತಂಡದವರೆಲ್ಲ ಕ್ರಿಕೆಟ್ ಆಡಿದ್ದು, ಈ ಸಂದರ್ಭದಲ್ಲಿ ತೆಗೆದ ಚಿತ್ರ ಇದಾಗಿದೆ.
ಶಾರೂಖ್ ಖಾನ್ ಮತ್ತು ಅಕ್ಷಯ್ ಕುಮಾರ್ ಜತೆಯಾಗಿ ನಟಿಸಿದ ಏಕೈಕ ಚಿತ್ರವೆಂದರೆ ಅದು 'ದಿಲ್ ತೋ ಪಾಗಲ್ ಹೇ'. ಆ ನಂತರ ಅವರಿಬ್ಬರೂ ಒಟ್ಟಿಗೆ ಯಾವ ಚಿತ್ರದಲ್ಲೂ ನಟಿಸಿಲ್ಲ. ಕೆಲವು ವರ್ಷಗಳ ಹಿಂದೆ ಈ ಕುರಿತು ಮಾತನಾಡಿದ್ದ ಶಾರೂಖ್, 'ನಾನು ಮತ್ತು ಅಕ್ಷಯ್ ಕುಮಾರ್ ಪುನಃ ಜತೆಯಾಗಿ ನಟಿಸುವುದಕ್ಕೆ ಸಾಧ್ಯವೇ ಇಲ್ಲ. ಏಕೆಂದರೆ, ಅಕ್ಷಯ್ ಬೆಳಿಗ್ಗೆ ಏಳುವ ಹೊತ್ತಿಗೆ ನಾನು ಮಲಗಿರುತ್ತೇನೆ. ನಾನು ಮಲಗುವ ಹೊತ್ತಿಗೆ ಅಕ್ಷಯ್ ಎದಿರುತ್ತಾರೆ. ಹಾಗಾಗಿ, ಇಬ್ಬರೂ ಒಟ್ಟಿಗೆ ನಟಿಸುವುದ ಕಷ್ಟ' ಎಂದು ಹೇಳಿದ್ದರು.