ಸಿನಿವಾಣಿ

ಭೂಗತಲೋಕದಲ್ಲೊಂದು ಸುತ್ತು; 'ಕಾಗೆ ಮೊಟ್ಟೆ' ಸಿನಿಮಾ ವಿಮರ್ಶೆ

Webdesk - Ravikanth

| ಮಂಜು ಕೊಟಗುಣಸಿ

ಪಿಳ್ಳ, ಗೋವಿ ಮತ್ತು ಕೃಷ್ಣ ದೊಡ್ಡ ತಲೆಯನ್ನೇ ಎತ್ತಲು ಹಳ್ಳಿಯಿಂದ ಮಾಯಾನಗರಿ ಬೆಂಗಳೂರಿಗೆ ಬರುತ್ತಾರೆ. ಆರಂಭದಲ್ಲಿ ಪುಡಿರೌಡಿಗಳನ್ನು ಹುಟ್ಟಡಗಿಸಿ, ಪಾತಕ ಲೋಕಕ್ಕೂ ಎಂಟ್ರಿಕೊಡುತ್ತಾರೆ. ದಿನಕಳೆದಂತೆ ಶತ್ರುಗಳ ಸಂಖ್ಯೆಯೂ ಹೆಚ್ಚಾಗುತ್ತದೆ. ಕೊನೆಗೆ ಅವರ ಆಸೆ ಈಡೇರುತ್ತದೆಯೇ? ಪಿಳ್ಳ, ಗೋವಿ ಮತ್ತು ಕೃಷ್ಣ, ರೌಡಿಗಳ ಸಾಮ್ರಾಜ್ಯದ ಅಧಿಪತಿಗಳಾಗುತ್ತಾರಾ? ಇದಕ್ಕುತ್ತರ ‘ಕಾಗೆ ಮೊಟ್ಟೆ’ಯಲ್ಲಿದೆ.

ಪಟ್ಟಕ್ಕಾಗಿ ಒಬ್ಬ, ಹಣಕ್ಕಾಗಿ ಮತ್ತೊಬ್ಬ, ಇಷ್ಟಪಟ್ಟವಳಿಗಾಗಿ ಮಗದೊಬ್ಬ ... ಈ ಮೂವರ ರಕ್ತಸಿಕ್ತ ಕಥೆಯೇ ‘ಕಾಗೆ ಮೊಟ್ಟೆ’. ರೌಡಿಸಂ, ಪ್ರೀತಿ, ಸೆಂಟಿಮೆಂಟ್ ಅನ್ನೋ ಚೌಕಟ್ಟಿನಲ್ಲಿಯೇ ಸುತ್ತಿ ಕೊನೆಗೆ ಅಲ್ಲಿಯೇ ಮಣ್ಣಾಗುವ ಈ ಚಿತ್ರದಲ್ಲಿ ಸಿದ್ಧ ಸರಕನ್ನೇ ತೆರೆಮೇಲೆ ಸುರಿದಿರುವುದರಿಂದ, ಹೊಸತು ಎಂಬುದು ಅಷ್ಟಾಗಿ ಕಾಣಿಸದು! ರೌಡಿಸಂ ಜತೆಯಲ್ಲಿಯೇ ಸಾಗುವ ವೇಶ್ಯೆಯೊಬ್ಬಳ ಬದುಕು, ಬವಣೆಯೂ ರೋಚಕ ತಿರುವು ಪಡೆದುಕೊಳ್ಳುತ್ತದೆ. ರೌಡಿಸಂ ಕಥೆಗೂ ‘ಕಾಗೆ ಮೊಟ್ಟೆ’ಗೂ ಏನು ಸಂಬಂಧ ಎಂದು ಹುಡುಕಹೊರಟರೆ, ಅದಕ್ಕೂ ಚಿತ್ರದಲ್ಲಿ ಉತ್ತರ ಸಿಗುವುದಿಲ್ಲ.

ರೌಡಿಸಂ ಸಿನಿಮಾ ಎಂದ ತಕ್ಷಣ ನಮ್ಮ ಕಣ್ಣಮುಂದೆ ಬರುವುದು ಝುಳಪಿಸುವ ಲಾಂಗು ಮತ್ತು ತೊಟ್ಟಿಕ್ಕುವ ರಕ್ತ. ಆ ಸಿದ್ಧಮಾದರಿಯನ್ನೇ ಅನುಸರಿಸಿಕೊಂಡು ನಿರ್ದೇಶಕ ಚಂದ್ರಹಾಸ ‘ಕಾಗೆ ಮೊಟ್ಟೆ’ ಕಟ್ಟಿಕೊಟ್ಟಿದ್ದಾರೆ. ನಟನೆ ಮತ್ತು ಸಾಹಸದಲ್ಲಿ ಗುರುರಾಜ್ ತುಂಬ ಘಾಟಿ. ಇತ್ತ ಇಡೀ ಸಿನಿಮಾದಲ್ಲಿ ಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ್ ಅವರಿಂದ ಈ ಚಿತ್ರಕ್ಕೆ ಒಳ್ಳೊಳ್ಳೆ ಸಂಭಾಷಣೆಗಳು ಸಂದಾಯವಾಗಿವೆ. ಶ್ರೀವತ್ಸ ಸಂಗೀತ ಸಂಯೋಜಿಸಿರುವ ಎರಡು ಹಾಡುಗಳಿದ್ದರೂ ನೆನಪಿನಲ್ಲಿ ಉಳಿಯುವುದಿಲ್ಲ. ಛಾಯಾಗ್ರಹಣದಲ್ಲಿ ಪಿ.ಎಲ್. ರವಿ ಮತ್ತಷ್ಟು ಪ್ರಯೋಗಗಳನ್ನು ಮಾಡಬಹುದಿತ್ತು.

ಚಿತ್ರ: ಕಾಗೆ ಮೊಟ್ಟೆ

ನಿರ್ವಣ: ರೆಡ್ ಚಿಲ್ಲಿ ಸಿನಿಮಾಸ್

ನಿರ್ದೇಶನ: ಚಂದ್ರಹಾಸ

ಪಾತ್ರವರ್ಗ: ಗುರುರಾಜ್, ಮಾದೇಶ್, ಹೇಮಂತ್, ತನುಜಾ, ಲೋಹಿತಾಶ್ವ, ಯತಿರಾಜ್, ಸತ್ಯ ಮುಂತಾದವರು.