ಬೆಂಗಳೂರು: ‘ಲೂಸಿಯಾ’ ಪವನ್ ಒಂದಿಲ್ಲೊಂದು ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ. ಈ ಬಾರಿ ಅವರು ಕನ್ನಡದ ನಿರ್ದೇಶಕರನ್ನು ಒಟ್ಟುಗೂಡಿಸಿ, ಒಂದೇ ವೇದಿಕೆಯಲ್ಲಿ ತರುವುದಕ್ಕೆ ಮುಂದಾಗುತ್ತಿದ್ದಾರೆ. ಬರೀ ನಿರ್ದೇಶಕರನ್ನಷ್ಟೇ ಅಲ್ಲ, ಇದು ನಿರ್ದೇಶಕರು ಮತ್ತು ಪ್ರೇಕ್ಷಕರು ಒಟ್ಟುಗೂಡುವ ವೇದಿಕೆಯೂ ಹೌದು. ಈ ನಿಟ್ಟಿನಲ್ಲಿ ಎಫ್.ಯು.ಸಿ ಎಂಬ ಹೊಸ ಸಿನಿಮಾ ಕ್ಲಬ್ ಹುಟ್ಟುಹಾಕಿದ್ದಾರೆ.
ಏನಿದು ಎಫ್.ಯು.ಸಿ? ಫಿಲ್ಮಮೇಕರ್ಸ್ ಯುನೈಟೆಡ್ ಕ್ಲಬ್ ಎನ್ನುವುದು ಇದರ ಪೂರ್ತಿ ಹೆಸರು. ಈ ಕ್ಲಬ್ನಲ್ಲಿ ಒಂದಿಷ್ಟು ಸಮಾನಮನಸ್ಕ ನಿರ್ದೇಶಕರು ಜತೆಯಾಗಿದ್ದು, ಮುಂದಿನ ದಿನಗಳಲ್ಲಿ ಚಿತ್ರಗಳ ಕುರಿತಾಗಿ ಸಂವಾದ, ವಿಮರ್ಶೆ ಮತ್ತು ವಿಶ್ಲೇಷಣೆ ನಡೆಸಲಿದ್ದಾರೆ. ಈ ಕುರಿತು ಮಾತನಾಡುವ ಪವನ್ ಕುಮಾರ್, ‘ಕನ್ನಡದಲ್ಲಿ ನಿರ್ದೇಶಕರಿಗೆ ಪ್ರತ್ಯೇಕವಾದ ವೇದಿಕೆ ಇರಲಿಲ್ಲ. ಪ್ರಮುಖವಾಗಿ ಸಿನಿಮಾಗಳ ಬಗ್ಗೆ ಚರ್ಚೆಗಳಾಗಬೇಕು. ಅದರಲ್ಲೂ ಸಿನಿಮಾದ ಕಂಟೆಂಟ್ ಬಗ್ಗೆ ಇನ್ನಷ್ಟು ಚರ್ಚೆಯಾಗಬೇಕಿದೆ.
ಇದನ್ನೂ ಓದಿ ಸೀಲ್ಡೌನ್ ತೆರವಿಗೆ ಆಗ್ರಹಿಸಿ ಪ್ರತಿಭಟನೆ
ನಮ್ಮಲ್ಲಿ ಕಂಟೆಂಟ್ ಇರುವ ಸಿನಿಮಾಗಳಿವೆ ಮತ್ತು ಅದನ್ನು ನೋಡುವ ಪ್ರೇಕ್ಷಕರು ಸಹ ಇದ್ದಾರೆ. ಆದರೆ, ಸರಿಯಾಗಿ ತಲುಪುತ್ತಿಲ್ಲ. ಹಾಗಾಗಿ ನಿರ್ದೇಶಕರೆಲ್ಲಾ ಸೇರಿ ಒಂದು ವೇದಿಕೆ ಮಾಡಿಕೊಂಡು, ತಮ್ಮ ಅನುಭವಗಳನ್ನು ಹಂಚಿಕೊಂಡರೆ, ಇದರಿಂದ ಬಹಳಷ್ಟು ಜನರಿಗೆ ಅನುಕೂಲವಾಗುತ್ತದೆ. ಜಯತೀರ್ಥ, ಆದರ್ಶ ಈಶ್ವರಪ್ಪ, ಈರೇಗೌಡ, ಅರವಿಂದ ಶಾಸ್ತ್ರಿ, ಅಭಯ ಸಿಂಹ, ಮಂಸೋರೆ ಮುಂತಾದವರು ಇದರಲ್ಲಿ ಕೈ ಜೋಡಿಸಿದ್ದಾರೆ. ಸದ್ಯಕ್ಕೆ ಒಂದು ವೆಬ್ಸೈಟ್ ಶುರು ಮಾಡಿದ್ದೇವೆ’ ಎನ್ನುತ್ತಾರೆ ಅವರು. ಕ್ಲಬ್ನ ಈ ವೆಬ್ಸೈಟ್ ಬರೀ ಚರ್ಚೆಗಳಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಚಿತ್ರ ಬಿಡುಗಡೆ ಮತ್ತು ಪ್ರದರ್ಶನಕ್ಕೂ ಸಹಾಯವಾಗಬಲ್ಲದು ಎನ್ನುತ್ತಾರೆ ಅವರು. ‘ಸದ್ಯಕ್ಕೆ ಈ ವೆಬ್ಸೈಟ್, ಕ್ಲಬ್ನ ಧ್ಯೇಯೋದ್ದೇಶ ವಿವರಿಸುವುದಕ್ಕೆ ಮತ್ತು ಒಂದಿಷ್ಟು ಚರ್ಚೆ ಮತ್ತು ಸಂವಾದಗಳಿಗೆ ಮೀಸಲಾಗಿದೆ. ಮುಂದಿನ ದಿನಗಳಲ್ಲಿ ಈ ವೆಬ್ಸೈಟ್ ಮೂಲಕವೇ ಚಿತ್ರ ಪ್ರದರ್ಶನ ಮಾಡುವ ಸಾಧ್ಯತೆಯೂ ಇದೆ. ಚಿತ್ರಗಳನ್ನು ಇಲ್ಲಿ ಬಿಡುಗಡೆ ಸಹ ಮಾಡಬಹುದು’ ಎನ್ನುತ್ತಾರೆ ಪವನ್.