ಬೆಂಗಳೂರು: ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಎಂದುಕೊಂಡು ಬಂದಿದ್ದ ತಬಲಾ ನಾಣಿ ಹಾಗೂ ಸುಚೇಂದ್ರ ಪ್ರಸಾದ್ ಈಗ ಕ್ರಿಟಿಕಲ್ ಕೀರ್ತನೆಗಳನ್ನು ಹಾಡಲು ಬರುತ್ತಿದ್ದಾರೆ. ಅರ್ಥಾತ್, ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದ ಬಳಿಕ ಅವರಿಬ್ಬರೂ ಜತೆಯಾಗಿ ‘ಕ್ರಿಟಿಕಲ್ ಕೀರ್ತನೆಗಳು’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ವಿಶೇಷವೆಂದರೆ ‘..ಕರಿಯಪ್ಪ’ನಿಗೆ ಆಕ್ಷನ್-ಕಟ್ ಹೇಳಿರುವ ಕುಮಾರ್ ಅವರೇ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.
‘ಈ ಸಿನಿಮಾ ಮೂಲಕ ಒಂದು ಗಂಭೀರ ವಿಷಯವನ್ನು ಹಾಸ್ಯಮಯವಾಗಿ ಹೇಳಲು ಹೊರಟಿದ್ದೇವೆ. ಸಮಾಜದ ದೊಡ್ಡ ಪಿಡುಗಿನ ಮೇಲೆ ಬೆಳಕು ಚೆಲ್ಲುವ ಯತ್ನವಿದು’ ಎಂದು ಚಿತ್ರದ ಬಗ್ಗೆ ಮಾಹಿತಿ ನೀಡುವ ನಿರ್ದೇಶಕ ಕುಮಾರ್, ಆ ಪಿಡುಗು ಏನು ಎಂಬುದನ್ನು ಈಗಲೇ ಬಹಿರಂಗ ಪಡಿಸಲು ಇಚ್ಛಿಸುವುದಿಲ್ಲ.
‘ಸಿನಿಮಾದಲ್ಲಿ 4 ಕಥೆ ಬರುತ್ತದೆ, ಒಂದೊಂದು ಕಥೆ ಒಂದೊಂದು ಪ್ರದೇಶದಲ್ಲಿ ನಡೆಯುತ್ತಿರುತ್ತದೆ. ಮಂಡ್ಯದಲ್ಲಿ ಬಾಲ್ಯದ ಕಥೆ ಇರುತ್ತದೆ. ಇದರಲ್ಲಿ ಅರುಣಾ ಬಾಲರಾಜ್, ಡ್ರಾಮಾ ಜೂನಿಯರ್ಸ್ ಕಲಾವಿದರಾದ ಪುಟ್ಟರಾಜು, ಮಹೇಂದ್ರ ಅಭಿನಯಿಸಿರುತ್ತಾರೆ. ಬೆಳಗಾವಿಯಲ್ಲಿ ನಡೆಯುವ ಅವಿವಾಹಿತ ಜೀವನದ ಕಥೆಯಲ್ಲಿ ತರಂಗ ವಿಶ್ವ ಆಟೋ ಡ್ರೖೆವರ್ ಆಗಿ ಕಾಣಿಸಿಕೊಳ್ಳುತ್ತಾರೆ. ಕುಂದಾಪುರದಲ್ಲಿ ಒಂದು ಯುವಜೋಡಿಯ ಪ್ರೇಮಕಥೆ ಸಾಗುತ್ತದೆ. ಅದರಲ್ಲಿ ಯಶಸ್ ಅಭಿ ಹಾಗೂ ತೆಲುಗು ಕಿರುತೆರೆ ನಟಿ ದೀಪಾ ನಟಿಸಿದ್ದಾರೆ. ಬೆಂಗಳೂರು ಪ್ರದೇಶದಲ್ಲಿ ಸಾಗುವ ಕಥೆಯಲ್ಲಿ ರಾಜೇಶ್ ನಟರಂಗ, ಅಪೂರ್ವ ಭಾರದ್ವಾಜ್ ಅಭಿನಯಿಸಿದ್ದಾರೆ. ಈ ನಾಲ್ಕು ಕಥೆಯಲ್ಲಿ ಬರುವ ಪಾತ್ರಗಳು ಬೇರೆ ಬೇರೆಯಾದರೂ ನಾಲ್ಕಕ್ಕೂ ಒಂದು ಸಮಾನ ಎಳೆ ಇದೆ’ ಎಂದು ಮತ್ತೆ ಕಥೆಯ ಗುಟ್ಟು ಕಾಪಾಡಿಕೊಳ್ಳುತ್ತಾರೆ ನಿರ್ದೇಶಕರು.
ಒಂದರ್ಥದಲ್ಲಿ ಇದು ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದ ಸೀಕ್ವೆಲ್ ಎಂದರೂ ತಪ್ಪಿಲ್ಲ. ಆದರೆ ಆ ಚಿತ್ರದಲ್ಲಿದ್ದ ತಬಲಾ ನಾಣಿ, ಸುಚೇಂದ್ರ ಪ್ರಸಾದ್ ಮಾತ್ರ ಇಲ್ಲಿರುತ್ತಾರೆ. ಈ ಚಿತ್ರದಲ್ಲಿನ ನಾಲ್ಕೂ ಕಥೆಗಳಿಗೆ ಪ್ರಧಾನವಾಗಿ ಅವರ ಪಾತ್ರ ಇಲ್ಲಿ ಸಾಗುತ್ತದೆ. | ಕುಮಾರ್ ನಿರ್ದೇಶಕ