ಸಿನಿವಾಣಿ

ರಿಷಬ್​ಗೆ ಅಭಿಮಾನಿಯ ಉಡುಗೊರೆ

chandru

ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶನದ ‘ಸಹಿಪ್ರಾ ಶಾಲೆ, ಕಾಸರಗೋಡು, ಕೊಡುಗೆ: ರಾಮಣ್ಣ ರೈ’ ಬಿಡುಗಡೆಯಾಗಿ ಒಂದೂವರೆ ವರ್ಷವಾದರೂ ಈಗಲೂ ಮೆಚ್ಚುಗೆ ಪಡೆಯುತ್ತಲೇ ಇದೆ. ಈ ಚಿತ್ರವನ್ನು ಭರತ್ ರಾಮಸ್ವಾಮಿ ಅವರು ನೋಡಿ ಇಷ್ಟಪಟ್ಟು, ಮೆಚ್ಚುಗೆ ರೂಪವಾಗಿ ರಿಷಬ್​ಗೆ ಟಿಕೆಟ್ ಮೊತ್ತ 200 ರೂ. ಕಳಿಸಿ ಕೊಟ್ಟಿದ್ದಾರೆ. ಅಲ್ಲದೆ, ಪತ್ರ ಕೂಡ ಬರೆದಿದ್ದಾರೆ.

‘ಇಂಥ ಒಳ್ಳೆಯ ಸಿನಿಮಾ ಚಿತ್ರಮಂದಿರದಲ್ಲಿ ನೋಡದ ಪಾಪಪ್ರಜ್ಞೆ ಕಾಡುತ್ತಿದೆ. ಆದ್ದರಿಂದ ಈ ಪತ್ರದೊಡನೆ ಟಿಕೆಟ್ ದರ 200 ರೂ. ನನ್ನ ಮೆಚ್ಚುಗೆಯ ಸಂಕೇತವಾಗಿ ಕಳುಹಿಸಿರುತ್ತೇನೆ. ಇದು ಹಾಸ್ಯಾಸ್ಪದವೆನಿಸಿದರೂ, ನನ್ನೊಳಗಿನ ಸಿನಿಮಾ ರಸಿಕನಿಗೆ ತೃಪ್ತಿ ತರುವಂತಾಗಿದೆ. ಮುಂದೆಯೂ ಇಂಥದ್ದೇ ಪ್ರಗತಿಪರ ಸಿನಿಮಾಗಳು ನಿಮ್ಮ ಮೂಲಕ ತಯಾರಾಗಲಿ ಎಂದು ಆಶಿಸುತ್ತೇನೆ’ ಎಂದು ಭರತ್ ಪತ್ರದಲ್ಲಿ ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಿಷಬ್, ‘ಇಂಥ ಚಿತ್ರಪ್ರೇಮಿಗಳಿರುವ ತನಕ ಒಳ್ಳೆಯ ಕನ್ನಡ ಚಿತ್ರಗಳಿಗೆ ಸೋಲಿಲ್ಲ. ನಿಮ್ಮ ಈ ಪ್ರೀತಿಯ ಕಾಣಿಕೆಯನ್ನು ಅದರ ದುಪ್ಪಟ್ಟು ಪ್ರೀತಿಯಿಂದ ಸ್ವೀಕರಿಸುತ್ತೇವೆ’ ಎಂದಿದ್ದಾರೆ.