ಬೆಂಗಳೂರು: ತರುಣ್ ಸುಧೀರ್ ನಿರ್ದೇಶನದ ‘ರಾಬರ್ಟ್’, ಈಗಾಗಲೇ ಪೋಸ್ಟರ್, ಟೀಸರ್ ಮೂಲಕ ಒಂದಲ್ಲ ಒಂದು ರೀತಿಯ ಸದ್ದು ಮಾಡುತ್ತಲೇ ಇದೆ. ಹೀಗಿರುವಾಗಲೇ ವಿಶ್ವ ಮಹಿಳಾ ದಿನದ ಪ್ರಯುಕ್ತ ಚಿತ್ರದಲ್ಲಿನ ನಾಲ್ವರು ನಟಿಯರಿಗೆ ‘ರಾಬರ್ಟ್’ ಶುಭಕೋರಿದ್ದಾನೆ.
ಮಹಿಳಾ ದಿನದ ಪ್ರಯುಕ್ತ, ಚಿತ್ರದಲ್ಲಿನ ನಾಲ್ವರು ನಟಿಯರ ಫೋಟೋವನ್ನು ಒಂದೆಡೆ ಸೇರಿಸಿ ಪೋಸ್ಟರ್ ಸಿದ್ಧಪಡಿಸಿ ಸಾಮಾಜಿಕ ಜಾಲತಾಣದಲ್ಲಿ ನಿರ್ದೇಶಕ ತರುಣ್ ಸುಧೀರ್ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ದರ್ಶನ್ಗೆ ಜೋಡಿಯಾಗಿರುವ ಭದ್ರಾವತಿ ಬೆಡಗಿ ಆಶಾ ಭಟ್, ಐಶ್ವರ್ಯಾ ಪ್ರಸಾದ್, ಸೋನಲ್ ಮೊಂತೆರೋ, ತೇಜಸ್ವಿನಿ ಫೋಟೋಗಳಿರುವ ಪೋಸ್ಟರ್ ಶೇರ್ ಮಾಡಿಕೊಂಡಿರುವ ತರುಣ್, ‘ಈ ಜಗತ್ತನ್ನು ಅತೀ ಸುಂದರವಾಗಿಸಿದ ಮಹಿಳೆಯರಿಗೆ, ವಿಶ್ವ ಮಹಿಳಾ ದಿನದ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ.
ಅಂದಹಾಗೆ, ಈಗಾಗಲೇ ಮಾತಿನ ಭಾಗದ ಚಿತ್ರೀಕರಣ ಮುಗಿಸಿಕೊಂಡಿರುವ ‘ರಾಬರ್ಟ್’ ಬಳಗ, ಹಾಡುಗಳ ಶೂಟಿಂಗ್ಗೆ ಪ್ಲಾನ್ ಮಾಡಿಕೊಂಡಿದೆ. ಸದ್ಯದಲ್ಲೇ ಹಾಡಿನ ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದು, ಏಪ್ರಿಲ್ 9ಕ್ಕೆ ‘ರಾಬರ್ಟ್’ ರಾಜ್ಯಾದ್ಯಂತ ಬಿಡುಗಡೆಗೆ ಯಾಗುವ ಸಾಧ್ಯತೆ ಇದೆ. ಚಿತ್ರಕ್ಕೆ ಉಮಾಪತಿ ಶ್ರೀನಿವಾಸ್ ಬಂಡವಾಳ ಹೂಡಿದ್ದು, ಚಿತ್ರದಲ್ಲಿ ದರ್ಶನ್, ಆಶಾ ಭಟ್, ವಿನೋದ್ ಪ್ರಭಾಕರ್, ಜಗಪತಿ ಬಾಬು ಮುಂತಾದವರು ನಟಿಸಿದ್ದಾರೆ. ಇನ್ನು ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.