ಅಪ್ರಾಪ್ತೆಯ ಫೋಟೋ ಪೋಸ್ಟ್​ ಮಾಡಿ ವಿಕೃತಿ: ಜೈಲರ್​ ಖ್ಯಾತಿಯ ಖಳನಟ ವಿನಾಯಕನ್​ ವಿರುದ್ಧ ದೂರು ದಾಖಲು! Actor Vinayakan  
ಸಿನಿವಾಣಿ

ಅಪ್ರಾಪ್ತೆಯ ಫೋಟೋ ಪೋಸ್ಟ್​ ಮಾಡಿ ವಿಕೃತಿ: ಜೈಲರ್​ ಖ್ಯಾತಿಯ ಖಳನಟ ವಿನಾಯಕನ್​ ವಿರುದ್ಧ ದೂರು ದಾಖಲು! Actor Vinayakan

ಪ್ರಮುಖ ಮುಖ್ಯಾಂಶಗಳು

  • ಖ್ಯಾತ ನಟ ವಿನಾಯಕನ್ ವಿರುದ್ಧ ಕೇರಳ ಪೊಲೀಸರಿಂದ ಎಫ್‌ಐಆರ್ ದಾಖಲು
  • ಅಪ್ರಾಪ್ತ ಬಾಲಕಿಯ ಫೋಟೋ ಶೇರ್ ಮಾಡಿ ಅಶ್ಲೀಲ ನಿಂದನೆ
  • ಜೈಲರ್ ಖ್ಯಾತಿಯ ನಟ ವಿನಾಯಕನ್ ವಿರುದ್ಧ ತನಿಖೆ ಆರಂಭಿಸಿದ ಪೊಲೀಸರು
  • ಪ್ಯಾನ್ ಇಂಡಿಯಾ ನಟ ವಿನಾಯಕನ್ ಹೆಜ್ಜೆಯಿಟ್ಟ ಕಡೆಗಳಲ್ಲೆಲ್ಲಾ ಬರೀ ವಿವಾದಗಳೇ
ತಿರುವನಂತಪುರಂ: ಮಹಿಳಾ ನಿಂದನೆ ಹಾಗೂ ಸಾಮಾಜಿಕ ಜಾಲತಾಣ ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ಖ್ಯಾತ ನಟ ವಿನಾಯಕನ್ ( Actor Vinayakan ) ವಿರುದ್ಧ ಕೇರಳದ ಮಾವೇಲಿಕ್ಕರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮುಂಬೈನಲ್ಲಿ ಕೆಲಸ ಮಾಡುತ್ತಿರುವ ಕೇರಳದ ತಳಕ್ಕರ ಮೂಲದ ವ್ಯಕ್ತಿಯೊಬ್ಬರು ನೀಡಿದ ದೂರಿನ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಕಳೆದ ವರ್ಷ ಜುಲೈನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಈ ಕಾನೂನು ಕ್ರಮ ಜರುಗಿಸಲಾಗಿದೆ.
ದೂರುದಾರರು ನಟ ವಿನಾಯಕನ್ ವಿರುದ್ಧ ಇದ್ದ ಫೇಸ್‌ಬುಕ್ ಪೋಸ್ಟ್ ಒಂದನ್ನು ವಿನಾಯಕನ್​ ಅವರ ವಾಟ್ಸ್​ಆ್ಯಪ್ ನಂಬರ್‌ಗೆ ಕಳುಹಿಸಿದ್ದರು. ಇದರಿಂದ ತೀವ್ರ ಕೆರಳಿದ ವಿನಾಯಕನ್, ದೂರುದಾರರ ವಾಟ್ಸ್​ಆ್ಯಪ್​ ಪ್ರೊಫೈಲ್ ಚಿತ್ರದಲ್ಲಿದ್ದ ಅವರ ಎಂಟು ವರ್ಷದ ಅಪ್ರಾಪ್ತ ಮಗಳ ಫೋಟೋ ಹಾಗೂ ದೂರುದಾರರ ಫೋನ್ ನಂಬರ್ ಅನ್ನು ಅಶ್ಲೀಲ ಪದಗಳೊಂದಿಗೆ ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದರು.
ವಿನಾಯಕನ್​ ಅವರ ಈ ಕೃತ್ಯದ ಬೆನ್ನಲ್ಲೇ ಅಪರಿಚಿತರಿಂದ ದೂರುದಾರರ ಮೊಬೈಲ್ ಸಂಖ್ಯೆಗೆ ಸರಣಿ ಕರೆಗಳು ಬರಲಾರಂಭಿಸಿದ್ದು, ಹಲವರು ಫೋನ್ ಮಾಡಿ ಅವರಿಗೆ ತೀವ್ರವಾಗಿ ನಿಂದಿಸಿ ಕಿರುಕುಳ ನೀಡಿದ್ದಾರೆ. ಇದರಿಂದ ಮನನೊಂದ ದೂರುದಾರರು ವಿನಾಯಕನ್​ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿ ಬಾಲ ಹಕ್ಕುಗಳ ಆಯೋಗದ ಮೊರೆ ಹೋಗಿದ್ದರು.
ಆಲಪ್ಪುಳದಲ್ಲಿ ನಡೆದ ಬಾಲ ಹಕ್ಕುಗಳ ಆಯೋಗದ ಸಭೆಯಲ್ಲಿ ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಆಯೋಗವು, ತಕ್ಷಣವೇ ನಟನ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸ್ ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಿತು. ಆಯೋಗದ ಈ ಖಡಕ್ ಆದೇಶದ ಬೆನ್ನಲ್ಲೇ ಮಾವೇಲಿಕ್ಕರ ಪೊಲೀಸರು ವಿನಾಯಕನ್ ವಿರುದ್ಧ ಅಧಿಕೃತವಾಗಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ನಟ ವಿನಾಯಕನ್ ವಿರುದ್ಧ ಮಹಿಳಾ ನಿಂದನೆ ಮಾತ್ರವಲ್ಲದೆ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ (IT Act) ಕೂಡ ಪ್ರಕರಣ ದಾಖಲಿಸಲಾಗಿದೆ.
ಅಂದಹಾಗೆ, ನಟ ವಿನಾಯಕನ್ ತಮ್ಮ ವಿಲಕ್ಷಣ ಮತ್ತು ಉಡಾಫೆಯ ವರ್ತನೆಗಳಿಂದಾಗಿ ಈ ಹಿಂದೆಯೂ ಹಲವು ಬಾರಿ ದೊಡ್ಡ ಮಟ್ಟದ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಪ್ರಮುಖವಾಗಿ, ಮಲಯಾಳಂ ಚಿತ್ರರಂಗದ ಖ್ಯಾತ ನಟ ದಿವಂಗತ ಸಿದ್ದಿಕ್ ಅವರ ನಿಧನದ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ಇವರನ್ನು ಪೊಲೀಸರು ಬಂಧಿಸಿದ್ದರು. ಇದಲ್ಲದೆ, ಚಿತ್ರವೊಂದರ ಪ್ರಚಾರದ ಸಂದರ್ಭದಲ್ಲಿ ಮಹಿಳಾ ಪತ್ರಕರ್ತರೊಬ್ಬರ ವಿರುದ್ಧ ಮೀಟೂ ಅಭಿಯಾನವನ್ನು ಲೇವಡಿ ಮಾಡುವಂತೆ ಅಸಭ್ಯ ಹೇಳಿಕೆ ನೀಡಿ ತೀವ್ರ ಸಾರ್ವಜನಿಕ ಆಕ್ರೋಶಕ್ಕೆ ಗುರಿಯಾಗಿದ್ದರು. ಹಾಗೆಯೇ, ಕೊಚ್ಚಿಯ ಕಲ್ರೂರ್ ಪೊಲೀಸ್ ಠಾಣೆಯಲ್ಲಿ ಮದ್ಯಪಾನ ಮಾಡಿ ಹಂಗಾಮಾ ಸೃಷ್ಟಿಸಿ, ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದಕ್ಕೂ ಇವರ ವಿರುದ್ಧ ಈ ಹಿಂದೆ ಕಾನೂನು ಕ್ರಮ ಜರುಗಿಸಲಾಗಿತ್ತು.
ಅಂದಹಾಗೆ ವಿನಾಯಕನ್​ ಅವರು ತಮಿಳಿನಲ್ಲಿ ‘ತಿಮಿರು’, ‘ಸಿರುತೈ’, ‘ಮರಿಯಾನ್’ ಮುಂತಾದ ಚಿತ್ರಗಳಲ್ಲಿ ಖಳನಾಯಕನ ಪಾತ್ರಗಳನ್ನು ನಿರ್ವಹಿಸುವಲ್ಲಿ ಹೆಸರುವಾಸಿಯಾಗಿದ್ದಾರೆ. ಜೈಲರ್​ ಸಿನಿಮಾದ ಭರ್ಜರಿ ಯಶಸ್ಸಿನ ಮೂಲಕ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸಖತ್​ ಹೆಸರು ಮಾಡಿದರು. ಅಲ್ಲದೆ, ತಮ್ಮ ತವರು ಕೇರಳದಲ್ಲಿ ಗಾಯಕ ಮತ್ತು ಸಂಗೀತ ಸಂಯೋಜಕರಾಗಿಯೂ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುವುದರ ಜೊತೆಗೆ ನಟನೆಗಾಗಿ ಹಲವಾರು ಪ್ರಶಸ್ತಿಗಳನ್ನು ಸಹ ಗೆದ್ದಿದ್ದಾರೆ. (ಏಜೆನ್ಸೀಸ್​).