ಬಾಲಿವುಡ್ನಲ್ಲಿ ಮಹಾಭಾರತ ಕುರಿತು ಸಿನಿಮಾ ಮಾಡುವುದಕ್ಕೆ ಅದೆಷ್ಟು ವರ್ಷಗಳಿಂದ ಪ್ರಯತ್ನಗಳಾಗುತ್ತಿವೆಯೋ ಗೊತ್ತಿಲ್ಲ. ಆದರೆ, ಇದುವರೆಗೂ ಅದು ಸಾಧ್ಯವಾಗಿಲ್ಲ. ಹಾಗಂತ ಹಿಂದಿಯಲ್ಲಿ ಮಹಾಭಾರತ, ಚಿತ್ರವೇ ಆಗಿಲ್ಲ ಎನ್ನುವುದು ತಪ್ಪಾಗುತ್ತದೆ. 1965ರಲ್ಲಿ ಪ್ರದೀಪ್ ಕುಮಾರ್, ಪದ್ಮಿನಿ, ದಾರಾ ಸಿಂಗ್ ಮುಂತಾದವರ ಅಭಿನಯದಲ್ಲಿ ಮಹಾಭಾರತ ಸಿನಿಮಾ ಆಗಿತ್ತು. ಆ ಚಿತ್ರವನ್ನು ಎ.ಜಿ. ನಡಿಯಾಡ್ವಾಲಾ ನಿರ್ವಿುಸಿದ್ದರು. ಈಗ ಅವರ ಮಗ ಫಿರೋಜ್ ನಡಿಯಾಡ್ವಾಲಾ ಮತ್ತೆ ಮಹಾಭಾರತವನ್ನು ತೆರೆಗೆ ತರುವುದಕ್ಕೆ ಪ್ರಯತ್ನ ನಡೆಸಿದ್ದಾರೆ.
ಫಿರೋಜ್ ಇದಕ್ಕೂ ಮುನ್ನ ‘ಹೇರಾ ಫೇರಿ’, ‘ವೆಲ್ಕಮ್ ಮುಂತಾದ ಹಲವು ಸಿನಿಮಾಗಳನ್ನು ನಿರ್ವಿುಸಿದ್ದರು. ಆದರೆ, ಇತ್ತೀಚೆಗೆ ಅವರಿಗೆ ಮಹಾಭಾರತವನ್ನು ತೆರೆಗೆ ತರಬೇಕು ಎಂದು ಮನಸ್ಸಾಗಿಬಿಟ್ಟಿದೆಯಂತೆ. ಹಾಗಂತ ಅವರಿಗೆ ಸುಮ್ಮನೆ ಸಿನಿಮಾ ಮಾಡುವುದಕ್ಕೂ ಇಷ್ಟವಿಲ್ಲವಂತೆ. ಏಕೆಂದರೆ, ಮಹಾಭಾರತವನ್ನು ಇದುವರೆಗೂ ಜನ ಹಿರಿತೆರೆ ಮತ್ತು ಕಿರುತೆರೆಯಲ್ಲಿ ಹಲವು ಭಾಷೆಗಳಲ್ಲಿ ನೋಡಿದ್ದಾರೆ. ಅವೆಲ್ಲಕ್ಕಿಂತ ವಿಭಿನ್ನವಾಗಿ ‘ಲಾರ್ಡ್ ಆಫ್ ದಿ ರಿಂಗ್ಸ್’, ‘ಸ್ಟಾರ್ ವಾರ್ಸ್’, ‘ಹ್ಯಾರಿ ಪಾಟರ್’ನಂತಹ ದೊಡ್ಡ ಬಜೆಟ್ನ ಫ್ಯಾಂಟಸಿ ಚಿತ್ರ ಮಾಡುವಾಸೆಯಂತೆ. ಈ ನಿಟ್ಟಿನಲ್ಲಿ ಅವರು ಹೆಜ್ಜೆ ಇಟ್ಟಿದ್ದು, 2025ರಲ್ಲಿ ಚಿತ್ರ ಶುರುವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಭಾರತದಲ್ಲಿ ಇದುವರೆಗೂ ಯಾರೂ ಮಾಡದ 700 ಕೋಟಿ ರೂ. ಬಜೆಟ್ನಲ್ಲಿ ಮತ್ತು 5ಡಿಯಲ್ಲಿ ಚಿತ್ರ ಮಾಡುವುದಕ್ಕೆ ಅವರು ಮುಂದಾಗಿದ್ದು, ಇದರಲ್ಲಿ ಅಕ್ಷಯ್ ಕುಮಾರ್, ಅಜಯ್ ದೇವಗನ್, ರಣವೀರ್ ಸಿಂಗ್, ನಾನಾ ಪಟೇಕರ್, ಅನಿಲ್ ಕಪೂರ್, ಪರೇಶ್ ರಾವಲ್ ಮುಂತಾದ ಹಲವು ಜನಪ್ರಿಯ ಮತ್ತು ಪ್ರತಿಭಾವಂತರ ದಂಡು ಇರಲಿದೆ. ಆದರೆ, ಸದ್ಯಕ್ಕೆ ಯಾರು ಯಾವ ಪಾತ್ರ ಮಾಡಬಹುದು ಎಂದು ನಿರ್ಧಾರವಾಗಿಲ್ಲ. ಬಾಲಿವುಡ್ ಮಂದಿಯ ಜತೆಗೆ, ದಕ್ಷಿಣದ ಹಲವು ಸ್ಟಾರ್ ನಟರು ಸಹ ಈ ಚಿತ್ರದಲ್ಲಿರಲಿರುವ ಸಾಧ್ಯತೆ ಇದೆ. -ಏಜೆನ್ಸೀಸ್