14 ವರ್ಷ ಕಳೆದ್ರೂ ಕರಗದ ಕ್ರೇಜ್...600 ಕೋಟಿ ವೀವ್ಸ್ ದಾಖಲೆ ಬರೆದ ಗಂಗ್ನಮ್ ಸ್ಟೈಲ್ ಹಾಡು, ಗಳಿಸಿದ ಆದಾಯ ಕೇಳಿದ್ರೆ ಬೆರಗಾಗ್ತೀರಾ! Gangnam Style
- ದಕ್ಷಿಣ ಕೊರಿಯಾದ ಜನಪ್ರಿಯ ಕೆಪಾಪ್ ಹಾಡು ಗಂಗ್ನಮ್ ಸ್ಟೈಲ್ ಯೂಟ್ಯೂಬ್‌ನಲ್ಲಿ ಆರು ಬಿಲಿಯನ್ ವೀಕ್ಷಣೆ ದಾಟಿ ಹೊಸ ಮೈಲಿಗಲ್ಲು
- ಹದಿನಾಲ್ಕು ವರ್ಷಗಳ ಬಳಿಕವೂ ಅಭಿಮಾನಿಗಳ ನಡುವೆ ಕಮ್ಮಿಯಾಗದ ಹಾಡಿನ ಕ್ರೇಜ್ ಹಾಗೂ ಪ್ರೀತಿ
- 2013ರಲ್ಲೇ 1.2 ವೀಕ್ಷಣೆ ಪಡೆದು ಎಂಟು ಮಿಲಿಯನ್ ಡಾಲರ್ ಗಳಿಸಿ ದಾಖಲೆ ಬರೆದಿದ್ದ ಹಾಡು
- 2012ರ ಜುಲೈ 15ರಂದು ಬಿಡುಗಡೆಯಾಗಿ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದ ಸೈ ಹಾಡು
ನವದೆಹಲಿ: 2012ರಲ್ಲಿ ಬಿಡುಗಡೆಯಾದ ದಕ್ಷಿಣ ಕೊರಿಯಾದ ಜನಪ್ರಿಯ ಕೆ-ಪಾಪ್ ಹಾಡು 'ಗಂಗ್ನಮ್ ಸ್ಟೈಲ್' ( Gangnam Style ) ಯೂಟ್ಯೂಬ್‌ನಲ್ಲಿ 6 ಬಿಲಿಯನ್ ಅಂದರೆ 600 ಕೋಟಿ ವೀಕ್ಷಣೆಗಳನ್ನು ದಾಟುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಹದಿನಾಲ್ಕು ವರ್ಷಗಳ ಬಳಿಕವೂ ಈ ಹಾಡು ಈ ಐತಿಹಾಸಿಕ ಸಾಧನೆ ಮಾಡಿರುವುದು ವಿಶೇಷವಾಗಿದೆ. ಇಷ್ಟು ವರ್ಷಗಳು ಕಳೆದರೂ ಈ ಹಾಡಿನ ಮೇಲಿನ ಅಭಿಮಾನಿಗಳ ಕ್ರೇಜ್ ಮತ್ತು ಪ್ರೀತಿ ಮಾತ್ರ ಇನ್ನೂ ಕಮ್ಮಿಯಾಗಿಲ್ಲ ಎಂಬುದನ್ನು ಈ ಒಂದು ದಾಖಲೆ ತೋರಿಸಿಕೊಟ್ಟಿದೆ.
6 ಬಿಲಿಯನ್ ವೀಕ್ಷಣೆಗಳನ್ನು ದಾಟಿರುವ 'ಗಂಗ್ನಮ್ ಸ್ಟೈಲ್' ಹಾಡು ಯೂಟ್ಯೂಬ್ ಮೂಲಕ ಗಳಿಸಿರುವ ಅಂದಾಜು ಆದಾಯದ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. 2013ರಲ್ಲಿ ಈ ಹಾಡು 1.2 ಬಿಲಿಯನ್ ವೀಕ್ಷಣೆಗಳನ್ನು ಪಡೆದಿದ್ದಾಗಲೇ ಅಂದಾಜು ಎಂಟು ಮಿಲಿಯನ್ ಡಾಲರ್‌ಗೂ ಅಧಿಕ (ಅಂದರೆ ಸುಮಾರು 48 ಕೋಟಿ ರೂ.ಗಳಿಗೂ ಹೆಚ್ಚು) ಹಣ ಗಳಿಸಿತ್ತು ಎಂದು ವರದಿಯಾಗಿತ್ತು. ಪ್ರಸ್ತುತ ಈ ಹಾಡಿನ ಹಕ್ಕು ಹೊಂದಿರುವವರಿಗೆ ಮಿಲಿಯನ್ ಗಟ್ಟಲೆ ಡಾಲರ್‌ಗಳ ಆದಾಯ ಹರಿದುಬಂದಿದೆ ಎಂದು ಅಂದಾಜಿಸಲಾಗಿದೆ.
ಇದಲ್ಲದೆ, ಈ ಹಾಡಿನ ಪ್ಯಾರಡಿಗಳು (Parodies) ಮತ್ತು ಕವರ್ ಆವೃತ್ತಿಗಳಿಂದಲೂ (Covers) ಹೆಚ್ಚುವರಿಯಾಗಿ ಕಂಟೆಂಟ್ ಐಡಿ (Content ID) ಆದಾಯವು ದೊರೆಯಲಿದೆ. ಆದರೂ, ಇದರ ನಿಖರವಾದ ಗಳಿಕೆ ಎಷ್ಟು ಎಂಬುದರ ಕುರಿತು ಹಾಡಿನ ಮಾಲೀಕರಾಗಲಿ ಅಥವಾ ನಿರ್ವಾಹಕರಾಗಲಿ ಯಾವುದೇ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.
ದಕ್ಷಿಣ ಕೊರಿಯಾದ ಪ್ರಸಿದ್ಧ ಕಲಾವಿದ ಸೈ (Psy) ಧ್ವನಿಯಲ್ಲಿ ಮೂಡಿಬಂದ 'ಗಂಗ್ನಮ್ ಸ್ಟೈಲ್' ಹಾಡು 2012ರ ಜುಲೈ 15ರಂದು ಅಧಿಕೃತವಾಗಿ ಬಿಡುಗಡೆಯಾಗಿತ್ತು. ಬಿಡುಗಡೆಯಾದ ಆ ಕಾಲದಲ್ಲಿ ಈ ಹಾಡು ಜಾಗತಿಕ ಮಟ್ಟದಲ್ಲಿ ಬಿರುಗಾಳಿಯಂತೆ ಸದ್ದು ಮಾಡಿ ಮೈಲಿಗಲ್ಲು ಸೃಷ್ಟಿಸಿತ್ತು. ಯೂಟ್ಯೂಬ್ ಇತಿಹಾಸದಲ್ಲಿ ಮೊದಲ ಬಾರಿಗೆ 1 ಬಿಲಿಯನ್ ಅಂದರೆ 100 ಕೋಟಿ ವೀಕ್ಷಣೆಗಳ ಗಡಿಯನ್ನು ದಾಟುವ ಮೂಲಕ 'ಗಂಗ್ನಮ್ ಸ್ಟೈಲ್' ದಾಖಲೆ ಬರೆದಿತ್ತು. ಈಗ ಹದಿನಾಲ್ಕು ವರ್ಷಗಳ ಬಳಿಕವೂ ಹೊಸ ಇತಿಹಾಸ ಬರೆಯುವ ಮೂಲಕ ತನ್ನ ಜನಪ್ರಿಯತೆಯನ್ನು ಸಾಬೀತುಪಡಿಸಿದೆ, (ಏಜೆನ್ಸೀಸ್).