ಬೆಂಗಳೂರು: ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ನಿರ್ದೇಶಕರು ನಿರ್ಮಾಪಕರನ್ನು ಹೊಗಳಿದರು. ನಿರ್ಮಾಪಕರು ಸಹ ಚಿತ್ರತಂಡದವರ ಕಾರ್ಯವೈಖರಿಯನ್ನು ಮೆಚ್ಚಿಕೊಂಡರು. ಆದರೆ, ಚಿತ್ರ ಮುಗಿಯುತ್ತಿದ್ದಂತೆಯೇ ಚಿತ್ರತಂಡದವರ ನಡುವೆ ದೊಡ್ಡ ಕಂದಕ ಏರ್ಪಟ್ಟಿರುವ ಎಂಬ ಮಾತು ಕೇಳಿ ಬರುತ್ತಿದೆ. ಅದೇ ಕಾರಣಕ್ಕೆ '5ಡಿ' ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭದಲ್ಲಿ ಆ ಚಿತ್ರದ ನಾಯಕ, ನಾಯಕಿ ಮತ್ತು ನಿರ್ದೇಶಕರೇ ಹಾಜರಿರಲಿಲ್ಲ. ಅವರ ಅನುಪಸ್ಥಿತಿಗೆ ಕಾರಣವೂ ಗೊತ್ತಾಗಲಿಲ್ಲ.
'5ಡಿ' ಚಿತ್ರವನ್ನು ನಿರ್ದೇಶಿಸಿರುವವರು ಹಿರಿಯ ನಿರ್ದೇಶಕ ಎಸ್. ನಾರಾಯಣ್. 1 ಟು 100 ಡ್ರೀಮ್ ಮೂವೀಸ್ನಡಿ ಈ ಚಿತ್ರವನ್ನು ಸ್ವಾತಿ ಕುಮಾರ್ ನಿರ್ಮಿಸಿದ್ದಾರೆ. ಆದಿತ್ಯ ಮತ್ತು ಅದಿತಿ ಪ್ರಭುದೇವ ನಾಯಕ-ನಾಯಕಿಯರಾಗಿ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದ 'ಪಿಸುಪಿಸು ಮಾತು ...' ಹಾಗೂ 'ಅಮ್ಮ' ಹಾಡುಗಳು ಇತ್ತೀಚೆಗೆ ಬಿಡುಗಡೆಯಾಯಿತು. ನಾಯಕ, ನಾಯಕಿ ಮತ್ತು ನಿರ್ದೇಶಕರ ಅನುಪಸ್ಥಿತಿಯಲ್ಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್ ಹಾಗೂ ಉಪಾಧ್ಯಕ್ಷ ಶಿಲ್ಪ ಶ್ರೀನಿವಾಸ್ ಈ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ.
ಈ ಚಿತ್ರದಲ್ಲಿ ಮನರಂಜನೆಯ ಜತೆಗೆ ಸಂದೇಶವೂ ಇದೆ ಎನ್ನುತ್ತಾರೆ ನಿರ್ಮಾಪಕ ಕುಮಾರ್. 'ಮನುಷ್ಯನಿಗೆ ರಕ್ತ ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತು, ನಾವು ಇತರರಿಗೆ ಉಪಯೋಗವಾಗಲಿ ಎಂದು ಕೊಡುವ ರಕ್ತ ಸರಿಯಾದ ರೀತಿ ಬಳಕೆಯಾಗುತ್ತಿದೆಯೋ, ಇಲ್ಲವೋ ಅಂತ ನಾವ್ಯಾರೂ ಯೋಚಿಸುವುದಿಲ್ಲ, ರಕ್ತದಾನ ಮಾಡುವುದು ಸರಿಯೋ, ತಪ್ಪೋ ಎನ್ನುವ ಕಂಟೆಂಟ್ ಮೇಲೆ ಈ ಸಿನಿಮಾ ನಿಂತಿದೆ. ಮೆಡಿಕಲ್ ಮಾಫಿಯಾದಲ್ಲಿ ಬ್ಲಡ್ ಮಾಫಿಯಾ ಸಹ ಒಂದು. ಅದು ಹೇಗೆ, ಯಾರು ಇದನ್ನು ಮಾಡುತ್ತಿರುವವರು ಎನ್ನುವುದೇ ಚಿತ್ರದ ಕಥೆ. ಇದುವರಗೂ ಈ ತರಹದ ಎಳೆಯನ್ನು ತೆರೆಯಮೇಲೆ ಯಾರೂ ಸಹ ತಂದಿಲ್ಲ' ಎನ್ನುತ್ತಾರೆ.
ಆದಿತ್ಯ, ಅದಿತಿ ಮತ್ತು ನಾರಾಯಣ್ ಅವರ ಅನುಪಸ್ಥಿತಿಯ ಬಗ್ಗೆ ಮಾತನಾಡಿದ ಅವರು, 'ನಮ್ಮ ಚಿತ್ರದ ಕಲಾವಿದರು ಬೇರೆಬೇರೆ ಕೆಲಸಗಳಲ್ಲಿ ತೊಡಗಿಕೊಂಡಿದ್ದರಿಂದ ಇವತ್ತು ಬಂದಿಲ್ಲ. ಮುಂದೆ ಅವರನ್ನೆಲ್ಲ ಜೊತೆ ಸೇರಿಸಿಕೊಂಡು ಚಿತ್ರದ ಪ್ರಚಾರವನ್ನು ಕೈಗೊಳ್ಳುತ್ತೇವೆ. ಟ್ರೈಲರ್ ಇವೆಂಟ್‌ಗೆ ನಾರಾಯಣ್ ಸೇರಿದಂತೆ ನಾಯಕ, ನಾಯಕಿ ಎಲ್ಲರೂ ಸಹ ಹಾಜರಿರುತ್ತಾರೆ. ಇದೇ ತಿಂಗಳ ೩೦ರಂದು ಚಿತ್ರದ ಟ್ರೈಲರ್ ಬಿಡುಗಡೆ ಆಗಲಿದೆ' ಎಂದು ಮಾಹಿತಿ ಕೊಡುತ್ತಾರೆ.
ಇದನ್ನೂ ಓದಿ: ‘ಸನ್ನಿಧಾನ’ಕ್ಕೆ ಹೊರಟ ಪ್ರಮೋದ್ ಶೆಟ್ಟಿ-ಯೋಗಿ ಬಾಬು
'5ಡಿ' ಚಿತ್ರಕ್ಕೆ ರವಿ ಗುಂಟಿಮಡುಗು ಅವರ ಕಥೆ, ಕುಮಾರಗೌಡ ಅವರ ಛಾಯಾಗ್ರಹಣವಿದ್ದು, ಎಸ್. ನಾರಾಯಣ್ ಅವರೇ ಸಂಗೀತ ಸಂಯೋಜಿಸಿದ್ದಾರೆ.