ಸಿನಿವಾಣಿ

‘45’ ಟಪ್ಪಾಂಗುಚ್ಚಿ : ಗೆಟ್ಟೋ ಕಿಡ್ಸ್‌ಗಳ ಜತೆಗೆ ಕುಣಿದ ಕುಪ್ಪಳಿಸಿದ ಶಿವಣ್ಣ, ಉಪೇಂದ್ರ, ರಾಜ್ ಶೆಟ್ಟಿ

ಬೆಂಗಳೂರು : ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ‘45’ ಚಿತ್ರವು ಬಹುತಾರಾಗಣದ ಕಾರಣಕ್ಕೆ ಸದ್ದು ಮಾಡುತ್ತಿದೆ. ನಟರಾದ ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ. ಶೆಟ್ಟಿ ಮುಖ್ಯಭೂಮಿಕೆಯಲ್ಲಿದ್ದಾರೆ. ಕಳೆದ ಆಗಸ್ಟ್ 14ಕ್ಕೆ ಈ ಚಿತ್ರ ರಿಲೀಸ್ ಆಗಬೇಕಿತ್ತು. ಪೋಸ್ಟ್-ಪ್ರೊಡಕ್ಷನ್ ಕಾರಣಗಳಿಂದಾಗಿ ವಿಳಂಬವಾಗಿತ್ತು. ಇದೀಗ ಸಿನಿಮಾ ಕಾರ್ಯಗಳು ಎಲ್ಲ ಪೂರ್ಣಗೊಂಡಿದ್ದು, ಇದೇ ಡಿ. 25ರಂದು ತೆರೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಚಿತ್ರದ ಪ್ರಚಾರ ಸಾಂಗ್ ‘ಅಫ್ರೋ ಟಪಾಂಗ್’ ರಿಲೀಸ್ ಮಾಡಲಾಗಿದೆ. ಉಗಾಂಡ ದೇಶದ ಜನಪ್ರಿಯ ನೃತ್ಯಪಟುಗಳಾದ ‘ಗೆಟ್ಟೋ ಕಿಡ್ಸ್‌ಗಳ ಜತೆಗೆ ಶಿವಣ್ಣ, ಉಪೇಂದ್ರ ಹಾಗೂ ರಾಜ್ ಬಿ.ಶೆಟ್ಟಿ ಭರ್ಜರಿ ಹೆಜ್ಜೆ ಹಾಕಿದ್ದಾರೆ. ಎಂ.ಸಿ. ಬಿಜ್ಜು ಹಾಗೂ ನಿಶಾನ್ ರೈ ಹಾಡು ರಚಿಸುವ ಜತೆಗೆ ಧ್ವನಿಯಾಗಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಜಾನಿ ಮಾಸ್ಟರ್ ನೃತ್ಯ ನಿರ್ದೇಶನವಿದೆ. ಕನ್ನಡ ಸೇರಿ ಐದು ಭಾಷೆಯಲ್ಲಿ ಹಾಡು ಬಿಡುಗಡೆಯಾಗಿದೆ. ಸದ್ಯ ಈ ಹಾಡು ಜಾಲತಾಣದಲ್ಲಿ ಹರಿದಾಡಿದ್ದು, ಒಂದೇ ದಿನಕ್ಕೆ 50 ಲಕ್ಷ ಅಧಿಕ ವೀಕ್ಷಣೆ ಪಡೆದಿದೆ. ‘ಸೂರಜ್ ಪ್ರೊಡಕ್ಷನ್ ಬ್ಯಾನರಡಿಯಲ್ಲಿ ರಮೇಶ್ ರೆಡ್ಡಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅರ್ಜುನ್ ಜನ್ಯ, ‘ನಾನು ನಿರ್ದೇಶಕನಾಗಲು ಶಿವಣ್ಣನೇ ಕಾರಣ. ಈ ಚಿತ್ರದಲ್ಲಿ ಯಾವುದೇ ಹಾಡಿಲ್ಲ. ಆದರೆ, ಪ್ರಚಾರಕ್ಕಾಗಿ ಗೆಟ್ಟೋ ಕಿಡ್ಸ್ ಜತೆ ಒಂದು ಹಾಡು ಮಾಡಿದರೆ ಚೆನ್ನಾಗಿರುತ್ತದೆ ಎಂದು ಈ ಪ್ರಥಮ ಪ್ರಯೋಗ ಮಾಡಿದ್ದೇವೆ’ ಎಂದು ಮಾಹಿತಿ ನೀಡಿದರು.

ನನ್ನನ್ನು ಗ್ರೇಟ್ ಮಾಡಿದ್ದೇ ‘45’ ತಂಡ

ಶಿವರಾಜಕುಮಾರ್ ಮಾತನಾಡಿ, ‘ಮೊದಲು ನಾನು, ರಾಜ್ ಶೆಟ್ಟಿ ಇದ್ದೆವು. ಬಳಿಕ ಉಪೇಂದ್ರ ಸೇರಿದರು. ಇಲ್ಲಿ ದೊಡ್ಡವರು, ಚಿಕ್ಕವರು ಎಂಬುದು ಇಲ್ಲಿಲ್ಲ. ಆ ಕಾರಣಕ್ಕಾಗಿ ಈ ಸಿನಿಮಾ ಇಷ್ಟವಾಗಿದ್ದು. ಎಲ್ಲರ ಪಾತ್ರಗಳು ಚೆನ್ನಾಗಿ ಮೂಡಿಬಂದಿದ್ದು, ಓವರ್‌ಟೇಕ್ ಮಾಡುವಂತಹ ಅಂಶಗಳಿಲ್ಲ. ಇದು ಕೇವಲ ಪ್ರಚಾರ ಸಾಂಗ್ ಅಷ್ಟೇ ಅಲ್ಲ, ಇದರಲ್ಲಿಯೇ ಚಿತ್ರದ ಅನೇಕ ಅಂಶಗಳಿವೆ. ಕಳೆದ ವರ್ಷ ಕ್ಲೈಮ್ಯಾಕ್ಸ್ ಶೂಟಿಂಗ್ ಇರಬೇಕಾದರೆ, ನನಗೆ ಕ್ಯಾನ್ಸರ್ ಆವರಿಸಿತು. ಎನರ್ಜಿ ಕಡಿಮೆಯಾದಂತಾಗಿತ್ತು. ಆಗ ಇಡೀ ತಂಡ ನನ್ನ ಪರವಾಗಿ ನಿಂತು ಮಗು ತರ ನೋಡಿಕೊಂಡರು. ಆ ಧೈರ್ಯದಿಂದಲೇ ಸಿನಿಮಾ ಮುಗಿಸಿಕೊಟ್ಟೆ. ನನ್ನನ್ನು ಗ್ರೇಟ್ ಮಾಡಿದ್ದೆ ‘45’ ತಂಡ’ ಎಂದು ಹೇಳಿದರು.

ಭಾರತಕ್ಕೆ ಒಳ್ಳೆಯ ಚಿತ್ರವಾಗಲಿದೆ

ನಟ ರಾಜ್ ಬಿ. ಶೆಟ್ಟಿ ಚಿತ್ರದ ಅನುಭವ ಹಂಚಿಕೊಂಡು, ‘ಅರ್ಜುನ್ ಜನ್ಯ ಕಾರಣದಿಂದ ಇಬ್ಬರು ದಿಗ್ಗಜರ ಜತೆ ನಾನು ಓಡುತ್ತಿದ್ದೇನೆ. ತುಂಬಾ ಕಲಿಯಲು ಹಾಗೂ ತೊಡಗಿಸಿಕೊಳ್ಳಲು ‘45’ದಿಂದ ಸಿಕ್ಕಿತು. ಇದು ಕನ್ನಡಕ್ಕೆ ಅಷ್ಟೆ ಅಲ್ಲ, ಭಾರತಕ್ಕೆ ಒಳ್ಳೆಯ ಸಿನಿಮಾವಾಗುವ ಕ್ಷಮತೆಯಿದೆ. ಆ ಕಾರಣಕ್ಕಾಗಿ ಈ ಚಿತ್ರದ ಅಭಿಮಾನಿಗಳಲ್ಲಿ ನಾನೊಬ್ಬ. ಈ ಚಿತ್ರದ ದೃಶ್ಯವೊಂದರ ವೇಳೆ ಶಿವಣ್ಣರ ಕಾಲಿಗೆ ಪೆಟ್ಟಾಗಿದ್ದರೂ ಅವರು ಶೂಟಿಂಗ್ ಮುಂದುವರಿಸಿದ್ದರು. ಉಪ್ಪಿ ಸರ್ ಸಿನಿಮಾದ ದೊಡ್ಡ ಅಭಿಮಾನಿ. ಅವರ ಅನುಭವದಲ್ಲಿ ಅಧ್ಯಾತ್ಮವಿದೆ’ ಎಂದರು.