ಅಕ್ಷಯ್ ಕುಮಾರ್ ಅಭಿನಯದ ‘ಬೆಲ್ ಬಾಟಂ’ ಚಿತ್ರ ನೋಡಲು ಚಿತ್ರಮಂದಿರಗಳಿಗೆ ಜನ ದೊಡ್ಡ ಮಟ್ಟದಲ್ಲಿ ಬರಬಹುದು, ಅದರಿಂದ ಚಿತ್ರರಂಗದ ಪರಿಸ್ಥಿತಿ ಸ್ವಲ್ಪ ಸುಧಾರಿಸಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಆ ನಿರೀಕ್ಷೆ ಹುಸಿಯಾಗಿದೆ. ನಿರೀಕ್ಷೆ ಬಹಳಿಷ್ಟದ್ದರೂ, ಅದೇಕೋ ಚಿತ್ರ ನೋಡುವುದಕ್ಕೆ ಜನರೂ ಬರಲಿಲ್ಲ, ಕಲೆಕ್ಷನ್ ಕೋಟಿ ದಾಟಲಿಲ್ಲ. ‘ಬೆಲ್ ಬಾಟಂ’ ಚಿತ್ರದ ಪರಿಸ್ಥಿತಿ ನೋಡಿ ದೊಡ್ಡ ಬಜೆಟ್ ಚಿತ್ರಗಳನ್ನು ಮಾಡಿದ ಬಹಳಷ್ಟು ಮಂದಿ ತಮ್ಮ ಚಿತ್ರಗಳ ಬಿಡುಗಡೆಯನ್ನು ಮುಂದೂಡಿದ್ದಾರೆ. ಇನ್ನೂ ಕೆಲವರು ಅದೇನಾಗುತ್ತದೋ ನೋಡಿಯೇ ಬಿಡೋಣ ಎಂದು ಹೆಜ್ಜೆ ಇಟ್ಟಿದ್ದಾರೆ. ಅದರ ಫಲವಾಗಿ, ನಾಲ್ಕು ತಿಂಗಳ ನಂತರ ನಾಲ್ಕು ಭಾಷೆಗಳ ನಾಲ್ಕು ದೊಡ್ಡ ಚಿತ್ರಗಳು ಬಿಡುಗಡೆಯಾಗುತ್ತಿವೆ.
ಪ್ರಮುಖವಾಗಿ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಜೀವನವನ್ನಾಧರಿಸಿ ನಿರ್ವಿುಸಲಾಗಿರುವ ಕಂಗನಾ ಅಭಿನಯದ ‘ತಲೈವಿ’ ಇಂದು ಬಿಡುಗಡೆಯಾಗುತ್ತಿದೆ. ಈ ಚಿತ್ರ ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ಇದಲ್ಲದೆ, ‘ಲೂಸ್ ಮಾದ’ ಖ್ಯಾತಿಯ ಯೋಗಿ ಅಭಿನಯಿಸಿರುವ ಕನ್ನಡದ ‘ಲಂಕೆ’, ವಿಜಯ್ ಸೇತುಪತಿ ಅಭಿನಯದ ತಮಿಳು ಚಿತ್ರ ‘ಲಾಭಂ’ ಮತ್ತು ಗೋಪಿಚಂದ್ ಅಭಿನಯದ ತೆಲುಗು ಚಿತ್ರ ‘ಸೀಟಿಮಾರ್’ ಸಹ ಇಂದು ತೆರೆಕಾಣುತ್ತಿವೆ. ಈ ನಾಲ್ಕು ಚಿತ್ರಗಳ ಪೈಕಿ ಯಾವ ಚಿತ್ರಕ್ಕೆ ಜನ ವೋಟ್ ಹಾಕಿ ಗೆಲ್ಲಿಸುತ್ತಾರೆ ಎಮಬ ಕುತೂಹಲ ಎಲ್ಲರಲ್ಲೂ ಇದೆ.