ಸಿನಿವಾಣಿ

'ರಾಧೆ ಶ್ಯಾಮ್​'ಗಾಗಿ ಇಟಲಿಯಿಂದ ಬಂದ 350 ಡ್ಯಾನ್ಸರ್ಸ್​!

ಹೈದರಾಬಾದ್​: ಪ್ರಭಾಸ್​ ಅಭಿನಯದ 'ರಾಧೇ ಶ್ಯಾಮ್​' ಚಿತ್ರಕ್ಕಾಗಿ ಸತತ ಚಿತ್ರೀಕರಣ ನಡೆಯುತ್ತಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಮುಗಿಸಿ, ಇದೇ ವರ್ಷ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಸಿದ್ಧತೆ ನಡೆಸಿದೆ.

ಈ ಮಧ್ಯೆ, ಚಿತ್ರದ ಒಂದು ಹಾಡನ್ನು ಚಿತ್ರೀಕರಿಸುವುದಕ್ಕೆ ಇಟಲಿಗೆ ಹೋಗಬೇಕು ಎಂದು ಚಿತ್ರತಂಡ ಮೊದಲು ಯೋಚಿಸಿತ್ತು. ಆದರೆ, ಇಟಲಿಯಲ್ಲಿ ಕರೊನಾ ವೈರಸ್​ ಸೋಂಕು ಹೆಚ್ಚಿರುವ ಹಿನ್ನೆಲೆಯಲ್ಲಿ, ಇಟಲಿಯ ಟ್ರಿಪ್​ನ್ನು ಚಿತ್ರತಂಡ ಕ್ಯಾನ್ಸಲ್​​ ಮಾಡಿದೆ. ಹಾಗಂತ ಆ ಹಾಡನ್ನೇ ಬಿಟ್ಟುಬಿಡಲಾಯಿತಾ ಎಂಬ ಪ್ರಶ್ನೆ ಬರಬಹುದು.

ಇಟಲಿಗೆ ಹೋಗಲಿಕ್ಕಾಗದಿದ್ದರೇನಂತೆ, ಇಟಲಿಯನ್ನೇ ಇಲ್ಲಿ ಕರೆಸಿಕೊಂಡರಾಯಿತು ಎಂದು, ಚಿತ್ರತಂಡದವರು ಇಟಲಿಯಿಂದ 350 ಡ್ಯಾನ್ಸರ್ಸ್​ಗಳನ್ನು ಹೈದರಾಬಾದ್​ಗೆ ಕರೆಸಿಕೊಂಡು ಚಿತ್ರೀಕರಣ ಪ್ರಾರಂಭಿಸಿದ್ದಾರೆ.

ಇದಕ್ಕಾಗಿಯೇ ಹೈದರಾಬಾದ್​​ನ ಅನ್ನಪೂರ್ಣ ಸ್ಟುಡಿಯೋದ ಸುಮಾರು ಏಳು ಎಕರೆ ಪ್ರದೇಶದಲ್ಲಿ ವಿಶೇಷವಾದ ಸೆಟ್​​ ನಿರ್ಮಿಸಿ, ಅಲ್ಲಿ ನೂರಾರು ಜನರ ಸಮ್ಮುಖದಲ್ಲಿ ಆ ಹಾಡನ್ನು ಚಿತ್ರೀಕರಿಸಿಕೊಳ್ಳಲಾಗುತ್ತಿದೆಯಂತೆ. ಈ ಹಾಡಿನಲ್ಲಿ ಪ್ರಭಾಸ್​ ಅಲ್ಲದೆ, ನಾಯಕಿ ಪೂಜಾ ಹೆಗ್ಡೆ ಸಹ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

'ರಾಧೆ ಶ್ಯಾಮ್​' ಚಿತ್ರವನ್ನು ರಾಧಾಕೃಷ್ಣ ಅವರು ನಿರ್ದೇಶಿಸಿದ್ದು, ಯುವಿ ಕ್ರಿಯೇಷನ್ಸ್​ ಬ್ಯಾನರ್​ನಡಿ ಚಿತ್ರ ನಿರ್ಮಾಣವಾಗುತ್ತಿದೆ. ಈ ಚಿತ್ರವು ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಚಿತ್ರದಲ್ಲಿ ಪ್ರಭಾಸ್​, ಪೂಜಾ ಹೆಗ್ಡೆ ಅಲ್ಲದೆ, ಭಾಗ್ಯಶ್ರೀ, ಮುರಳಿ ಶರ್ಮ, ಸಚಿನ್​ ಖೇಡೇಕರ್​ ಮುಂತಾದವರು ನಟಿಸಿದ್ದಾರೆ.