ಬೆಂಗಳೂರು: ‘ಜಾಲಿಡೇಸ್’, ‘ಕೇಸ್ ನಂ 18/9’ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿರುವ ನಿರಂಜನ್ ಶೆಟ್ಟಿ ಡಬಲ್ ಖುಷಿಯಲ್ಲಿದ್ದಾರೆ. ಸದ್ಯ ಅವರ ನಟನೆಯ ಎರಡು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದ್ದು, ಜತೆಗೆ ಎನ್ ಸ್ಟಾರ್ ಎಂಟರ್‌ಪ್ರೈಸಸ್ ಮೂಲಕ ನಿರ್ಮಾಪಕರಾಗುತ್ತಿದ್ದಾರೆ. ತಮ್ಮದೇ ಬ್ಯಾನರಡಿಯಲ್ಲಿ ನಿರ್ಮಾಣವಾಗಿರುವ, ರಾಜಾ ರವಿಕುಮಾರ್ ನಿರ್ದೇಶನದ ‘31 ಡೇಸ್’ ಚಿತ್ರೀಕರಣ ಪೂರ್ಣಗೊಂಡಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಇದರಲ್ಲಿ ನಿರಂಜನ್‌ಗೆ ಪ್ರಜ್ವಲಿ ಸುವರ್ಣ ಜೋಡಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಿರಂಜನ್ ತಮ್ಮ ಸಿನಿಮಾ ಜರ್ನಿ ಹಾಗೂ ಪಾತ್ರದ ಬಗ್ಗೆ ‘ವಿಜಯವಾಣಿ’ ಜತೆ ಮಾಹಿತಿ ಹಂಚಿಕೊಂಡರು. ‘ಹಲವು ಕನಸುಗಳೊಂದಿಗೆ ನಮ್ಮ ಬ್ಯಾನರ್‌ನಲ್ಲಿ ‘31 ಡೇಸ್’ ಆರಂಭಿಸಿದ್ದೇವೆ. ಇದು ಜೀವನಕ್ಕೆ ಹತ್ತಿರವಾಗುವ ಸಿನಿಮಾ. 31 ದಿನದಲ್ಲಿ ಇಡೀ ಜೀವನದ ಕಥೆ ಹೇಳಲು ಅಸಾಧ್ಯ. ಆದರೆ, 31 ದಿನದಲ್ಲಿ ಜೀವನಕ್ಕೆ ಬೇಕಾಗುವ ಕಥೆಯನ್ನು ಹೇಳಬಹುದು ಎಂದು ಅರಿತು, ಬದುಕಿಗೆ ಬೇಕಾದ ಮೌಲ್ಯಗಳನ್ನು ಇಲ್ಲಿ ಹೇಳುತ್ತಿದ್ದೇವೆ. ‘ಲವ್ ಮಾಕ್‌ಟೇಲ್’, ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ’ ಅಂತಹ ಹಲವು ಚಿತ್ರಗಳು ಈ ಕಥೆಗೆ ಸ್ಫೂರ್ತಿ’ ಎಂದು ಮಾಹಿತಿ ನೀಡುತ್ತಾರೆ.
ಕಂಟೆಂಟ್ ಪ್ರಧಾನ ಸಿನಿಮಾ: ನಿರಂಜನ್ ಸಿನಿಮಾದಿಂದ ಸಿನಿಮಾಕ್ಕೆ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಅಂತೆಯೇ ಈ ಚಿತ್ರದಲ್ಲೂ ಅವರದು ವಿಭಿನ್ನ ವಿಭಿನ್ನ. ಈ ಬಗ್ಗೆ, ‘ನಿರಂಜನ್ ಎಂಬ ಇಂದಿನ ಜನರೇಶನ್ ಹುಡುಗ. ಬೆಂಗಳೂರು ಜೀವನದ ಆಕರ್ಷಣೆಯಿಂದ ಬದುಕುತ್ತಿರುತ್ತಾನೆ. ಭ್ರಮೆಯಲ್ಲಿ ತನ್ನನ್ನು ತಾನು ಕಳೆದುಕೊಂಡಿರುತ್ತಾನೆ. ಆದರೆ, ಕೊನೆಗೆ ಅದರಿಂದ ಹೇಗೆ ಹೊರಬಂದು ಬದುಕುತ್ತಾನೆ ಎಂಬುದೇ ಕಥೆ. ರಾಜಾ ರವಿಕುಮಾರ್ ಕಥೆಯಲ್ಲಿ ಹಾಸ್ಯ, ಡಾನ್ಸ್ , ಆ್ಯಕ್ಷನ್, ಲವ್ ಹಾಗೂ ಹಾರರ್ ಅಂಶಗಳನ್ನು ಸೇರಿಸಿದ್ದು, ಸಿನಿಮಾ ಪಕ್ಕಾ ಕಮರ್ಶಿಯಲ್‌ಆಗಿ ಮೂಡಿಬರುತ್ತಿದೆ. ಕಂಟೆಂಟ್ ಪ್ರಧಾನ ಚಿತ್ರವಿದು’ ಎನ್ನುತ್ತಾರೆ.
11 ಬಿಟ್ ಸಾಂಗ್ ‘31 ಡೇಸ್’ ಚಿತ್ರದಲ್ಲಿ 11 ಬಿಟ್ ಸಾಂಗ್‌ಗಳಿವೆ. ಈಗಾಗಲೇ ಎರಡು ಸಾಂಗ್ ರಿಲೀಸ್ ಮಾಡಲಾಗಿದೆ. ‘ಎಲ್ಲ ಹಾಡುಗಳೂ ಭಿನ್ನ-ವಿಭಿನ್ನವಾಗಿರಲಿವೆ. ವಿ.ಮನೋಹರ್ ಸಂಗೀತ ನಿರ್ದೇಶಿಸುತ್ತಿರುವ 150ನೇ ಚಿತ್ರ ಎಂಬುದು ವಿಶೇಷ. ಹಾಡುಗಳು ಚೆನ್ನಾಗಿ ಮೂಡಿಬಂದಿದ್ದು, ಇನ್ನೆರಡು ಸಾಂಗ್ ಸದ್ಯದಲ್ಲೇ ರಿಲೀಸ್ ಮಾಡಲಿದ್ದೇವೆ’ ಎನ್ನುತ್ತಾರೆ ನಿರಂಜನ್.
‘ಕೇಸ್ ನಂ.18/9’ ಎರಡನೇ ಭಾಗ: ‘31 ಡೇಸ್’ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ರಿಲೀಸ್ ಆಗಲಿದೆ. ಅದಕ್ಕೂ ಮೊದಲು, ಕೋಡ್ಲು ರಾಮಕೃಷ್ಣ ನಿರ್ದೇಶನದ ‘ಶಾನುಭೋಗರ ಮಗಳು’ ೆ.21ಕ್ಕೆ ತೆರೆಗೆ ಬರಲಿದೆ. ‘ಕೇಸ್ ನಂ 18/9’ ಸೀಕ್ವೆಲ್ ಸೇರಿ ಇನ್ನೊಂದು ಚಿತ್ರವನ್ನು ನಿರಂಜನ್ ಒಪ್ಪಿಕೊಂಡಿದ್ದು, ‘31 ಡೇಸ್’ ಬಳಿಕ ಎರಡು ಸಿನಿಮಾಗಳೂ ಸೆಟ್ಟೇರಲಿವೆ.