'ಉಪೇಂದ್ರ' ಸಿನಿಮಾ ರೀ-ರಿಲೀಸ್
- ಉಪೇಂದ್ರ ಸಿನಿಮಾ ರೀ-ರಿಲೀಸ್ಗೆ ಸಜ್ಜು
- 90ರ ದಶಕದಲ್ಲಿ ಬಾಕ್ಸ್ ಆಫೀಸ್ ಧೂಳೆಬ್ಬಿಸಿದ ಉಪೇಂದ್ರ
ಬೆಂಗಳೂರು: ಕನ್ನಡ ಚಿತ್ರರಂಗದ ‘ಬುದ್ಧಿವಂತ’ ನಿರ್ದೇಶಕ, ರಿಯಲ್ ಸ್ಟಾರ್, ನಟ ಉಪೇಂದ್ರ ವರ್ಷಗಳ ಬಳಿಕ ಮತ್ತೊಮ್ಮೆ ‘ಯುಐ’ ಚಿತ್ರದ ಮುಖೇನ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದು ನಮ್ಮೆಲ್ಲರಿಗೂ ಗೊತ್ತೇ ಇದೆ. ನೆಚ್ಚಿನ ಅಭಿಮಾನಿಗಳನ್ನು ಮನರಂಜಿಸಲು ವಿಶೇಷ ಹಾಗೂ ವಿಭಿನ್ನತೆಯಿಂದ ಪ್ರೇಕ್ಷಕರ ಎದುರಿಗೆ ಹಾಜರಾಗುವ ಉಪ್ಪಿ ಅಭಿನಯದ 1999ರಲ್ಲಿ ತೆರೆಕಂಡ ಕಲ್ಟ್ ಸಿನಿಮಾ ಉಪೇಂದ್ರ ಇದೀಗ ಮತ್ತೊಮ್ಮೆ ತೆರೆ ಮೇಲೆ ಬರಲು ಸಜ್ಜಾಗಿದೆ.
ಇಂದು ಉಪೇಂದ್ರ ಅವರಿಗೆ ದೇಶ, ವಿದೇಶಗಳಲ್ಲಿಯೂ ಅಪಾರ ಸಂಖ್ಯೆ ಅಭಿಮಾನಿಗಳು ಹುಟ್ಟಿಕೊಳ್ಳಲು ಈ ಕಲ್ಟ್ ಚಿತ್ರವೇ ಮೂಲ ಕಾರಣ ಎಂದರೆ ಖಂಡಿತ ತಪ್ಪಾಗಲಾರದು. ಸದಾ ವಿಭಿನ್ನತೆಯ ಅಭಿರುಚಿಯಿಂದಲೇ ಚಿತ್ರವನ್ನು ಮಾಡುವ ಉಪ್ಪಿ, ಅಂದು ಇದೊಂದು ಸಿನಿಮಾ ಮೂಲಕವೇ ಸಿನಿಪ್ರಿಯರಲ್ಲಿ ಹುಚ್ಚೆಬ್ಬಿಸಿದರು. ಇದೀಗ ಈ ಸೂಪರ್ಹಿಟ್ ಚಿತ್ರವು ಆಧುನಿಕ ಟೆಕ್ನಾಲಜಿಯನ್ನು ಬಳಸಿಕೊಂಡು ಜೂನ್ 04ರಂದು ರೀ-ರಿಲೀಸ್ಗೆ ಎದುರುನೋಡುತ್ತಿದೆ.
ಚಿತ್ರದಲ್ಲಿ ನಾಯಕನಾಗಿ ಉಪೇಂದ್ರ ಅಭಿನಯಿಸಿದ್ದರೆ, ನಾಯಕಿಯರಾಗಿ ರವೀನಾ ಟಂಡನ್, ಪ್ರೇಮಾ ಮತ್ತು ದಾಮಿನಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಉಪೇಂದ್ರ ಅವರೇ ಬರೆದು ನಿರ್ದೇಶಿಸಿದ್ದು, ಅಂದಿನ ಮಟ್ಟಕ್ಕೆ ಕನ್ನಡದಲ್ಲಿ ಭರ್ಜರಿ ಯಶಸ್ಸನ್ನು ಕಂಡಿತು. ಬಹುತೇಕ ಚಿತ್ರಪ್ರೇಮಿಗಳಲ್ಲಿ ಸಿಕ್ಕಾಪಟ್ಟೆ ಗೊಂದಲ ಮೂಡಿಸಿದ್ದ ಉಪೇಂದ್ರ, ಎರಡೆರೆಡು ಬಾರಿ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವಂತೆ ಮಾಡಿದ್ದರು. ಇದೆಲ್ಲವೂ, ಅಂದಿನ ಮಟ್ಟಿಗೆ ಬಾಕ್ಸ್ ಆಫೀಸ್ ಗಳಿಕೆಯನ್ನು ದುಪ್ಪಟ್ಟಾಗಿಸಿತು. ಜೊತೆಗೆ ಹೊಸ ದಾಖಲೆಗಳಿಗೂ ಸಾಕ್ಷಿಯಾಯಿತು.
90ರ ದಶಕದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಕನ್ನಡ ಚಿತ್ರಗಳಲ್ಲಿ ಉಪೇಂದ್ರ ಕೂಡ ಒಂದು. ಮೂಲಗಳ ಪ್ರಕಾರ, ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಸುಮಾರು 10ರಿಂದ 15 ಕೋಟಿ ರೂ. ಕಲೆಕ್ಷನ್ ಮಾಡಿತು ಎನ್ನಲಾಗಿದೆ. ಇದರೊಟ್ಟಿಗೆ ಕರ್ನಾಟಕದ ಚಿತ್ರಮಂದಿರಗಳಲ್ಲಿ 200ಕ್ಕೂ ಹೆಚ್ಚು ದಿನಗಳು ಪ್ರದರ್ಶನ ಕಂಡಿದೆ. ಬ್ಲಾಕ್ಬಸ್ಟರ್ ಆಗಿ ಹೊರಹೊಮ್ಮುತ್ತಿದ್ದಂತೆ ಉಪೇಂದ್ರ ತೆಲುಗಿನಲ್ಲಿ ಡಬ್ ಆಯಿತು. ಆಂಧ್ರಪ್ರದೇಶದಲ್ಲಿ 100 ದಿನಗಳ ಸಕ್ಸಸ್ಫುಲ್ ಪ್ರದರ್ಶನ ಕಂಡಿತು.