ಸಿನಿವಾಣಿ

ಕಲಾವಿದರ ಸಹಾಯಕ್ಕೆ ಬಂದ ಅಮ್ಮ; ಒಂದೇ ಚಿತ್ರದಲ್ಲಿ ಮಲಯಾಳಂನ 140 ನಟ-ನಟಿಯರು

ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ‘ಟ್ವೆಂಟಿ ಟ್ವೆಂಟಿ’ ಎಂಬ ಸಿನಿಮಾದಲ್ಲಿ ಮಮ್ಮೂಟ್ಟಿ, ಮೋಹನ್ ಲಾಲ್, ದಿಲೀಪ್, ಜಯರಾಂ ಸೇರಿ ಮಲಯಾಳಂನ ಎಲ್ಲ ಸ್ಟಾರ್ ನಟರುಗಳು ಜತೆಯಾಗಿ ನಟಿಸಿದ್ದು ನೆನಪಿರಬಹುದು. ಈಗ ಅಂಥದ್ದೇ ಇನ್ನೊಂದು ಪ್ರಯತ್ನ ಮಲಯಾಳಂ ಚಿತ್ರರಂಗದಲ್ಲಿ ಆಗುತ್ತಿದೆ. ಈ ಬಾರಿ ಮಾಲಿವುಡ್ ಚಿತ್ರರಂಗದ 140 ಜನಪ್ರಿಯ ಕಲಾವಿದರು ಒಂದೇ ಚಿತ್ರದಲ್ಲಿ ನಟಿಸುತ್ತಿದ್ದಾರೆ!

ಕೋವಿಡ್​ನಿಂದ ಮಲಯಾಳಂ ಚಿತ್ರರಂಗದ ಕಲಾವಿದರು ಮತ್ತು ತಂತ್ರಜ್ಞರಿಗೆ ಸಾಕಷ್ಟು ಸಂಕಷ್ಟ ಎದುರಾದ ಹಿನ್ನೆಲೆಯಲ್ಲಿ ಅವರಿಗೆ ಸಹಾಯಾರ್ಥವಾಗಿ ಅಸೋಸಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ (ಅಮ್ಮ) ಮತ್ತು ಆಶೀರ್ವಾದ್ ಸಿನಿಮಾಸ್ ಜಂಟಿಯಾಗಿ ಒಂದು ಸಿನಿಮಾ ನಿರ್ವಿುಸುತ್ತಿದ್ದು, ಇದರಲ್ಲಿ ಮಮ್ಮೂಟ್ಟಿ, ಮೋಹನ್ ಲಾಲ್ ಸೇರಿ ಮಲಯಾಳಂ ಚಿತ್ರರಂಗದ ಎಲ್ಲ ಹೆಸರಾಂತ ನಟ-ನಟಿಯರು ಅಭಿನಯಿಸಲಿದ್ದಾರೆ. ಪ್ರಿಯದರ್ಶನ್ ಮತ್ತು ರಾಜೀವ್ ಕುಮಾರ್ ಜತೆಯಾಗಿ ನಿರ್ದೇಶಿಸುತ್ತಿರುವ ಈ ಕ್ರೖೆಮ್ ಥ್ರಿಲ್ಲರ್ ಸದ್ಯದಲ್ಲೇ ಪ್ರಾರಂಭವಾಗಲಿದ್ದು, ಇತ್ತೀಚೆಗೆ ನಡೆದ ಅಮ್ಮ ಸಂಸ್ಥೆಯ ಹೊಸ ಕಟ್ಟಡ ಉದ್ಘಾಟನೆಯ ವೇಳೆ ಈ ಚಿತ್ರವನ್ನು ಅಧಿಕೃತವಾಗಿ ಘೊಷಿಸಲಾಗಿದೆ. -ಏಜೆನ್ಸೀಸ್