ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ‘ಜೊತೆ ಜೊತೆಯಲಿ’ ಧಾರಾವಾಹಿಗೆ ಇದೀಗ ನೂರು ದಿನ ಪೂರೈಸಿದ ಸಂಭ್ರಮ. ಕಿರುತೆರೆಯಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಈ ಧಾರಾವಾಹಿ, ಜ.23ಕ್ಕೆ ನೂರು ಕಂತುಗಳನ್ನು ಯಶಸ್ವಿಯಾಗಿ ಪೂರೈಸಿತು.
ಈ ಹಿನ್ನೆಲೆಯಲ್ಲಿ ಜೀ ವಾಹಿನಿ ಮತ್ತು ಧಾರಾವಾಹಿ ತಂಡದಿಂದ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಲಾಯಿತು. ಆರಂಭವಾದ ಮೊದಲ ವಾರದಲ್ಲೇ 14.7 ಟಿಆರ್ಪಿ ಪಡೆದಿದ್ದ ‘ಜೊತೆ ಜೊತೆಯಲಿ’, ಇಂದಿಗೂ ಕಿರುತೆರೆ ಇತಿಹಾಸದಲ್ಲಿಯೇ ಹೆಚ್ಚು ಟಿಆರ್ಪಿ ಗಳಿಸುತ್ತಿರುವ ಮೊದಲ ಧಾರಾವಾಹಿ. ಧಾರಾವಾಹಿಯಲ್ಲಿ ನಾಯಕನ ಪಾತ್ರದಲ್ಲಿ ನಟ ಅನಿರುದ್ಧ್, ನಾಯಕಿಯಾಗಿ ಮೇಘಾ ಶೆಟ್ಟಿ ಅಮೋಘವಾಗಿ ಅಭಿನಯಿಸುತ್ತಿದ್ದಾರೆ. ಅನಿರುದ್ಧ್ಗೆ ಸಿನಿಮಾಗಳಿಗಿಂತ ಈ ಧಾರಾವಾಹಿ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದೆ. ಅಲ್ಲದೆ, ಧಾರಾವಾಹಿ ಅತಿ ಹೆಚ್ಚು ವೀಕ್ಷಕರನ್ನು ಹೊಂದಿದೆ. 45ರ ವಯಸ್ಸಿನ ಉದ್ಯಮಿ ಆರ್ಯವರ್ಧನ್ ಪಾತ್ರದಲ್ಲಿ ಅನಿರುದ್ಧ್, 20ರ ವಯಸ್ಸಿನ ಯುವತಿ ಅನು ಆಗಿ ಮೇಘಾ ಶೆಟ್ಟಿ ಕಾಣಿಸಿಕೊಂಡಿದ್ದು, ಇವರಿಬ್ಬರ ನಡುವಿನ ವಿನೂತನ ಪ್ರೇಮಕಥೆಯೇ ‘ಜೊತೆ ಜೊತೆಯಲಿ’.
ಇತ್ತೀಚೆಗೆ ಚಿತ್ರದುರ್ಗದಲ್ಲಿ ನಡೆದಿದ್ದ ‘ಜೊತೆ ಜೊತೆಯಲಿ: ಜಾತ್ರೆ’ ಅದ್ಧೂರಿ ಕಾರ್ಯಕ್ರಮದಲ್ಲಿ ಅನಿರುದ್ಧ್ ಮತ್ತು ಮೇಘಾ ಜೋಡಿಯ 60 ಅಡಿಯ ಬೃಹತ್ ಕಟೌಟ್ ಹಾಕಲಾಗಿತ್ತು. ಧಾರಾವಾಹಿಗೆ ಜನರು ಈ ಮಟ್ಟದಲ್ಲಿ ಮನಸೋತಿರುವುದು ಇದೇ ಮೊದಲು. ಧಾರಾವಾಹಿ ಕಥೆ ಜತೆಗೆ ‘ನೂರು ಜನ್ಮ ಕೂಡಿ ಬಾಳುವ ಜೋಡಿ ನಮ್ಮದು’ ಹಾಡು ಕೂಡ ಸಾಕಷ್ಟು ಜನಪ್ರಿಯತೆ ಪಡೆದಿದೆ. ಹಾಡು ಬಿಡುಗಡೆ ಆದ 12 ಗಂಟೆಗಳಲ್ಲಿ 1 ಮಿಲಿಯನ್ ವೀಕ್ಷಣೆ ಕಂಡಿದೆ. ಪ್ರತಿದಿನ ಸಂಜೆ 6.30ಕ್ಕೆ ಜೀ ಕನ್ನಡ, ಜೀ ಕನ್ನಡ ಎಚ್ಡಿಯಲ್ಲಿ ‘ಜೊತೆ ಜೊತೆಯಲಿ’ ಧಾರಾವಾಹಿ ಪ್ರಸಾರ ಆಗುತ್ತಿದೆ.